ಜಿಲ್ಲೆ

ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿರುವ ಎಚ್1ಎನ್1: ಗಂಟಲುನೋವಿನಿಂದ ಬಳಲುತ್ತಿರುವವರ ಸಂಖ್ಯೆ ಶೇ.30 ಹೆಚ್ಚಳ

ಬೆಂಗಳೂರು: ಕರೊನಾ ಮಹಾಮಾರಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ಈಗಾಗಲೇ ರಾಜ್ಯದಲ್ಲಿ 3 ಮಂದಿಯನ್ನು ಬಲಿ ಪಡೆದಿರುವ ಎಚ್1ಎನ್1 ಸಹ 500ರ ಗಡಿ ಸಮೀಪಿಸುತ್ತಿದ್ದು, ಮತ್ತಷ್ಟು ಭೀತಿ ಹುಟ್ಟಿಸಿದೆ. ರಾಜ್ಯದಲ್ಲಿ ಜನವರಿಯಿಂದ ಏ.2ರವರೆಗೆ 3,837 ಮಂದಿಯ ಸ್ಯಾಂಪಲ್​ಗಳನ್ನು ಪರೀಕ್ಷಿಸಲಾಗಿದ್ದು, 461 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. 3 ಮಂದಿ ಈಗಾಗಲೇ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು ನಗರದಲ್ಲಿ 184 ಮಂದಿ ಎಚ್1,ಎನ್1ನಿಂದ ಬಳಲುತ್ತಿದ್ದರೆ, ಉಡುಪಿಯಲ್ಲಿ 71, ಶಿವಮೊಗ್ಗದಲ್ಲಿ 64 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ.

ಕರೊನಾ ರೋಗ ಲಕ್ಷಣಗಳಲ್ಲಿ ಗಂಟಲು ನೋವು ಒಂದಾಗಿದ್ದು, ಸಾಮಾನ್ಯ ಗಂಟಲುನೋವು ಕಂಡು ಬಂದರೂ ಕರೊನಾ ಭೀತಿಯಿಂದ ಜನಸಾಮಾನ್ಯರು ಆಸ್ಪತ್ರೆಗೆ ಬಂದು ವೈದ್ಯರನ್ನು ಭೇಟಿಯಾಗುತ್ತಿದ್ದಾರೆ. ಈ ಹಿಂದೆ ಗಂಟಲುನೋವು ಬಂದರೆ ಮನೆಮದ್ದು ಮಾಡುತ್ತಿದ್ದವರು, ಪ್ರಸ್ತುತ ಗಂಟಲಿನಲ್ಲಿ ಸಣ್ಣ-ಪುಟ್ಟ ಸಮಸ್ಯೆ ಕಾಣಿಸಿಕೊಂಡರೂ ವೈದ್ಯರ ಮೊರೆ ಹೋಗುತ್ತಿರುವುದರಿಂದ ಶೇ.30 ಪ್ರಮಾಣ ಏರಿಕೆಯಾಗಿದೆ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ಇಎನ್​ಟಿ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಕೆ.ಕಾಲಗುಡ್ ಹೇಳುತ್ತಾರೆ.

ಈ ಕುರಿತು ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಆಹಾರ, ವಾತಾವರಣ ಬದಲಾವಣೆಯಿಂದಲೂ ಗಂಟಲು ನೋವು ಬರುತ್ತದೆ. ಪ್ರತಿಯೊಂದಕ್ಕೂ ಔಷಧಿ ಮೊರೆ ಹೋಗುವ ಅಗತ್ಯವಿಲ್ಲ. ಗಂಟಲು ನೋವಿನ ಜತೆಗೆ ಇನ್ನಿತರ ಸಮಸ್ಯೆ ಕಂಡುಬಂದರೆ ವೈದ್ಯರ ಸೂಚನೆ ಮೇರೆಗೆ ಮಾತ್ರ ಔಷಧ ತೆಗೆದುಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

ಎಚ್1,ಎನ್1 ಗುಣಲಕ್ಷಣಗಳು: ಕರೊನಾ ಹಾಗೂ ಎಚ್1 ಎನ್1 ರೋಗ ಲಕ್ಷಣಗಳು ಒಂದೇ ಆಗಿದ್ದು, ಕರೊನಾ ಗುಣಲಕ್ಷಣ ಕಂಡು ಬಂದವರನ್ನು ಪರೀಕ್ಷಿಸಿದಾಗ ಎಚ್1ಎನ್1 ಪಾಸಿಟಿವ್ ಬಂದಿದೆ. ಈ ಮೂಲಕ ಎರಡೂ ರೋಗ ಲಕ್ಷಣಗಳಲ್ಲಿ ಹಲವು ಸಾಮ್ಯತೆಗಳಿರುವುದು ಕಂಡುಬಂದಿದೆ. ತೀವ್ರ ಜ್ವರ, ನೆಗಡಿ, ಗಂಟಲು ಕೆರೆತ, ಅತಿಯಾದ ಮೈ-ಕೈ ನೋವು, ಕೆಮ್ಮು ಮತ್ತು ಕಫ ಬರುವುದೊಂದಿಗೆ ಅತಿಯಾಗಿ ವಾಂತಿ-ಬೇಧಿ, ಉಸಿರಾಟದ ತೊಂದರೆ ಎಚ್1ಎನ್1 ಲಕ್ಷಣಗಳಾಗಿವೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸೋಂಕಾಗಿದೆ. ಈ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗಳಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಕೆಮ್ಮುವುದು, ಸೀನುವಿಕೆ, ಸೋಂಕಿತ ವ್ಯಕ್ತಿಯು ಬಳಸುವ ವಸ್ತುಗಳನ್ನು ರ್ಸ³ಸಿದಾಗ ಎಚ್1ಎನ್1 ಸೋಂಕು ಹರಡುತ್ತದೆ. ಇದಕ್ಕೆ ಲಸಿಕೆಗಳಿದ್ದರೂ ದೀರ್ಘಕಾಲದವರೆಗೆ ರೋಗನಿರೋಧಕ ಶಕ್ತಿ ಒದಗಿಸುವುದಿಲ್ಲ ಎನ್ನಲಾಗಿದೆ.

ಗಂಟಲು ನೋವಿಗೆ ಮುನ್ನೆಚ್ಚರಿಕಾ ಕ್ರಮ

  • ಪ್ರತಿನಿತ್ಯ ಎರಡು ಹೊತ್ತು ಉಪು್ಪ ನೀರಿನಲ್ಲಿ ಗಾರ್ಗಲ್ ಮಾಡಿದರೆ ಉತ್ತಮ
  • ತಂಪಾದ ನೀರಿನ ಬದಲು ಬಿಸಿ ನೀರು ಕುಡಿಯಬೇಕು.
  • ತೆರೆದಿಟ್ಟಿರುವ ಹಣ್ಣುಗಳನ್ನು ಸೇವಿಸುವುದು ಉತ್ತಮವಲ್ಲ.
  • ಹೊರಗಿನ ಆಹಾರದ ತಿನ್ನುವ ಬದಲು ಮನೆ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಿ.
  • ಏರ್​ಕಂಡಿಷನ್ ಬಳಕೆ ಬೇಡ.
  • ರೆಫ್ರಿಜರೇಟರ್​ನಲ್ಲಿಟ್ಟ ಆಹಾರ ಹೆಚ್ಚು ಸೇವನೆ ಒಳ್ಳೆಯದಲ್ಲ.
  • ಆರೋಗ್ಯಕರ ಪೌಷ್ಠಿಕ, ಬೇಯಿಸಿದ ಆಹಾರ, ತಾಜಾ ಹಣ್ಣು ಸೇವಿಸುವುದು.