ಜಿಲ್ಲೆ

ಮಹಾಮಾರಿ ಕರೊನಾ ಮನೆ ಪ್ರವೇಶಿಸುವುದನ್ನು ತಡೆಯಲು ವಿಚಿತ್ರ ಆಚರಣೆ ಮಾಡುತ್ತಿರುವ ಗ್ರಾಮಸ್ಥರು!

ಮೈಸೂರು: ವಿಜ್ಞಾನ ಎಷ್ಟೇ ಮುಂದುವರಿದರೂ ಸಹ ಜನರಲ್ಲಿನ ಮೂಢನಂಬಿಕೆಗಳು ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ಮೈಸೂರು ಜಿಲ್ಲೆಯಲ್ಲಿ ನಡೆದ ಈ ಒಂದು ಘಟನೆ ಉದಾಹರಣೆಯಾಗಿದೆ.

ಕರೊನಾ ಮಹಾಮಾರಿ ಒಬ್ಬರಿಗೆ ತಗುಲಿದರೆ, ಸಂಪರ್ಕದಲ್ಲಿರುವವರನ್ನು ಬಿಡುವುದಿಲ್ಲ ಎಂಬುದು ಗೊತ್ತಿದೆ. ಇದೊಂದು ಸಾಂಕ್ರಮಿಕ ರೋಗ ಆಗಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಆದರೆ, ಕರೊನಾ ಮನೆಯೊಳಗೆ ಪ್ರವೇಶಿಸದೆ ಇರಲಿ ಎಂದು ಗ್ರಾಮೀಣ ಜನರು ಬೇಲಿ ಮುಳ್ಳಿನ ಕಾಯಿಯನ್ನು ಮನೆಯ ಹೊಸ್ತಿಲಿನಲ್ಲಿ ನೇತು ಹಾಕಲು ಪ್ರಾರಂಭಿಸಿದ್ದಾರೆ.

ನಗರದ ಹೊರ ವಲಯದಲ್ಲಿರುವ ರಮ್ಮನಹಳ್ಳಿ ಗ್ರಾಮದ ನಿವಾಸಿಗಳು ಇಂಥದೊಂದು ಮೂಢನಂಬಿಕೆಯ ಮೂಲಕ ಕರೊನಾ ಮನೆಯೊಳಗೆ ಪ್ರವೇಶಿಸದಂತೆ ಎಚ್ಚರ ವಹಿಸಿದ್ದಾರೆ! ಈ ಬೇಲಿ ಮುಳ್ಳಿನ ಕಾಯಿ ಕರೊನಾದ ಚಿತ್ರವನ್ನೇ ಹೋಲುತ್ತದೆ.

ಜನರು ಈ ಕಾಯಿಯನ್ನು ಕರೊನಾ ಕಾಯಿ ಎಂದು ಕರೆದು ಮಾವು, ಬೇವಿನ ಸೊಪ್ಪಿನೊಂದಿಗೆ ಸೇರಿಸಿ ಹೊಸ್ತಿಲಿನಲ್ಲಿ ನೇತು ಹಾಕಿ ಪೂಜೆ ಮಾಡುತ್ತಿದ್ದಾರೆ. ಆದರೆ, ಕರೊನಾ ತೊಲಗಿಸಲು ಬೇಕಿರುವುದು ಪೂಜೆ-ಪುನಸ್ಕಾರಗಳಲ್ಲ, ಬದಲಾಗಿ ಸಾಮಾಜಿಕ ಅಂತರ ಮತ್ತು ಆರೋಗ್ಯ ಮೇಲಿನ ಕಾಳಜಿ ಎಂಬುದನ್ನು ಈ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ.