ಮುಂದಿನ ಆರು ತಿಂಗಳ ವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿರುವುದರಿಂದ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸಬೇಕು ಎಂದು ಡಾ. ದೇವಿ ಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಿತಿ ಬುಧವಾರ ತನ್ನ ವರದಿ ಸಲ್ಲಿಸಿತು.
ಲಾಕ್ ಡೌನ್ ಅವಧಿ ಮುಗಿದ ನಂತರವೂ ಪ್ರಕರಣಗಳು ವರದಿಯಾದ ಪ್ರದೇಶದಲ್ಲಿ ಸ್ಥಳೀಯವಾಗಿ ಲಾಕ್ ಡೌನ್ ಮಾಡಬೇಕು. ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು. ಶಾಲೆ ಕಾಲೇಜುಗಳನ್ನು ಮೇ 31ರ ವರೆಗೆ ಮುಚ್ಚಬೇಕು. ಎ.ಸಿ. ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು. ಐಟಿ, ಬಿಟಿ ಉದ್ಯಮಗಳು, ಅತ್ಯಾವಶ್ಯಕ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು ಎಂದೂ ಶಿಫಾರಸು ಮಾಡಿದೆ.
ಅಂತರರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಬೇಕು. ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನ ಸಂದಣಿಯಾಗದಂತೆ ಎಚ್ಚರ ವಹಿಸಬೇಕು. ಅಂತರರಾಜ್ಯ ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯ ಪ್ರಾರಂಭಿಸಬಾರದು. ಏಪ್ರಿಲ್ 30 ರ ವರೆಗೆ ಎಸಿ ಬಸ್ / ಮೆಟ್ರೋ ಸೇವೆ ಬೇಡ. ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರವನ್ನು ಅನುಸರಿಸಬೇಕು ಎಂದೂ ಸಮಿತಿ ಹೇಳಿದೆ.
ಮುಂದಿನ 15 ದಿನಗಳ ಅವಧಿಗೆ ಈ ಶಿಫಾರಸುಗಳನ್ನು ಸಮಿತಿ ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಸಮಿತಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್ ಅವರು ಇದ್ದರು. ಈ ಸಮಿತಿಯು ಲಾಕ್ ಡೌನ್ ಅನ್ನು ಹಂತ ಹಂತವಾಗಿ ಹೇಗೆ ಸಡಿಲಗೊಳಿಸುವುದು ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಿದೆ.