ಜಿಲ್ಲೆ

ರಾಜ್ಯದಲ್ಲಿ 16ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ: ಮೆಕ್ಕಾದಿಂದ ವಾಪಾಸ್ಸಾಗಿದ್ದ ವ್ಯಕ್ತಿಯಲ್ಲಿ ಸೋಂಕು ಧೃಡ

ಬೆಂಗಳೂರು: ಜಾಗತಿಕವಾಗಿ ಭೀಕರತೆ ಸೃಷ್ಟಿಸಿರುವ ಮಹಾಮಾರಿ ಕರೊನಾ ವೈರಸ್​ ಸೋಂಕು ರಾಜ್ಯಕ್ಕೂ ಕಾಲಿಟ್ಟು ಈಗಾಗಲೇ ಒಬ್ಬರನ್ನು ಬಲಿಪಡೆದುಕೊಂಡಿದೆ. ದಿನೇ ದಿನೇ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದು, ಇಂದು ಮತ್ತೊಂದು ಪ್ರಕರಣ ವರದಿಯಾಗಿದೆ.

ಈ ಬಗ್ಗೆ ಟ್ವೀಟ್​ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ಖಚಿತಪಡಿಸಿದ್ದಾರೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಮೆಕ್ಕಾ ಪ್ರವಾಸದಿಂದ ಹಿಂತಿರುಗಿದ್ದ 32 ವರ್ಷದ ವ್ಯಕ್ತಿಯೊಬ್ಬರಿಗೆ ಕರೊನಾ ವೈರಸ್​ ಸೋಂಕು ಧೃಡಪಟ್ಟಿದೆ. ಅವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ಶ್ರೀರಾಮುಲು ಟ್ವೀಟ್​ ಮಾಡಿದ್ದಾರೆ.

ಈ ಪ್ರಕರಣದಿಂದ ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ 16ಕ್ಕೇರಿದ್ದು, ಜನರಲ್ಲಿ ಮತ್ತಷ್ಟು ಭೀತಿಯುಂಟುಮಾಡಿದೆ. ಇನ್ನು ದೇಶಾದ್ಯಂತ ಸೋಂಕಿತರ ಸಂಖ್ಯೆ 275ಕ್ಕೇರಿದ್ದು, ಓರ್ವ ಇಟಲಿ ಪ್ರಜೆ ಸೇರಿದಂತೆ 5 ಮಂದಿ ಬಲಿಯಾಗಿದ್ದಾರೆ.