ಕಲಘಟಗಿ: ಪಟ್ಟಣದ ಹನ್ನೆರೆಡು ಮಠದ ಕಿರಿಯ ಶ್ರೀಗಳ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ತಾಲೂಕು ಅರ್ಚಕ ಮತ್ತು ಪುರೋಹಿತ ಸಂಘ ಹಾಗೂ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಶ್ರೀ ರೇವಣಸಿದ್ಧ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಗುರುವಾರ ಜರುಗಿದವು.
ಬೆಳಗ್ಗೆ 6 ಗಂಟೆಗೆ ಕಿರಿಯ ಶ್ರೀ ಅಭಿನವ ಮಡಿವಾಳ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವೀರತಪಸ್ವಿ ಶ್ರೀ ಮಡಿವಾಳ ಶಿವಾಚಾರ್ಯರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು.
ಬೆಳಗ್ಗೆ 8 ಗಂಟೆಯಿಂದ ಲೋಕ ಕಲ್ಯಾಣಾಥರ್ವಾಗಿ ವಿಘ್ನೇಶ್ವರ, ಉಮಾ ಮಹೇಶ್ವರ, ವಿವಿಧ ಮಂಡಲ ದೇವತಾರಾಧನೆ, ದುರ್ಗಾ ಪೂಜೆ, ಏಕಾದಶ ರುದ್ರ ಕಲಶ ಆರಾಧನಾ ಹಾಗೂ ಹೋಮ ಹವನ ಕಾರ್ಯಕ್ರಮಗಳು ಜರುಗಿದವು. ಹೋಮದ ಪೂರ್ಣಾಹುತಿ ಕಾರ್ಯಕ್ರವನ್ನು ಹುಕ್ಕೇರಿ ಹಿರೇಮಠದ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯರು ನೆರವೇರಿಸಿ, ಭಕ್ತಾದಿಗಳಿಗೆ ಉಪದೇಶಾಮೃತ ನೀಡಿದರು.
ವಿಜಯಕುಮಾರ ಹನ್ನೆರೆಡುಮಠ, ಮಹಾಬಳೇಶ ಹನ್ನೆರಡುಮಠ, ಸಿ.ಬಿ. ಹೊನ್ನಿಹಳ್ಳಿ, ಎಂ.ಆರ್. ತೋಟಗಂಟಿ, ಆರ್.ಬಿ. ಜಮಖಂಡಿ, ಜಿ.ಎನ್. ಘಾಳಿ, ಎಸ್.ವಿ. ತಡಸಮಠ, ಶೇಖಯ್ಯ ತಾವರಗೇರಿ, ಮಲ್ಲಯ್ಯ ಗೊಡಿಮನಿ, ಚನ್ನಬಸಪ್ಪ ವರದಾನಿ, ಬಸವರಾಜ ಹುಗ್ಗಿ, ಬಸಯ್ಯಜ್ಜ ಹಿರೇಮಠ, ಇತರರಿದ್ದರು.