ಹಾವೇರಿ: ಕರೊನಾ ಮಹಾಮಾರಿಯಿಂದ ದೇವಸ್ಥಾನಗಳಲ್ಲಿ ಪೂಜೆ ಸ್ಥಗಿತಗೊಂಡಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿವೆ. ಇದರಿಂದ ಹೂವು ಕೇಳುವವರೇ ಇಲ್ಲವಾಗಿದ್ದು, ಬೆಲೆಯೂ ಸಿಗದೇ ಹತಾಶನಾದ ರೈತನೊಬ್ಬ ಹೂವಿನತೋಟವನ್ನೇ ನಾಶ ಮಾಡಿದ್ದಾರೆ.
ತಾಲೂಕಿನ ಗಣಜೂರ ಗ್ರಾಮದ ರೈತ ನಾಗರಾಜ ಬಂಕಾಪುರ ಅವರು ಚೆಂಡು ಹೂವಿನ ಗಿಡಗಳನ್ನು ಆಳುಗಳ ಮೂಲಕ ಮಂಗಳವಾರ ಕಿತ್ತು ನಾಶಪಡಿಸಿದ್ದಾರೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಚೆಂಡು ಹೂವಿನ ತೋಟ ಮಾಡಿದ್ದರು. ಯುಗಾದಿ ಹಬ್ಬದ ಸಂದರ್ಭದಲ್ಲಿ ಹೂವಿಗೆ ಸ್ವಲ್ಪ ದರ ಸಿಕ್ಕಿತ್ತು. ಆದರೆ, ಈಗ 10ರಿಂದ 20ರೂ.ಗೆ ಕೆಜಿಯಂತೆಯೂ ಮಾರಾಟವಾಗುತ್ತಿಲ್ಲ. ಹೂವು ಬಿಡಿಸಲು ಕೆಜಿಗೆ 5 ರೂಪಾಯಿ ಕೂಲಿ ಕೊಡಬೇಕು. ಮಾರುಕಟ್ಟೆಗೆ ಸಾಗಿಸಲು 5 ರೂಪಾಯಿ ಖರ್ಚಾಗುತ್ತದೆ. ಇದನ್ನು 10ರೂ.ಗೆ ಕೇಳಿದರೆ ಏನು ಪ್ರಯೋಜನ?. ಹೀಗಾಗಿ ಬೆಳೆದ ಬೆಳೆಯನ್ನು ಒಲ್ಲದ ಮನಸಿನಿಂದ ನಾಶ ಮಾಡುವ ಸ್ಥಿತಿ ಬಂದೊದಗಿದೆ. ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಹೂವು ಬೆಳೆಗಾರರಿಗೆ ಅಲ್ಪಸ್ವಲ್ಪ ಪ್ರೋತ್ಸಾಹ ಧನ ದೊರೆತಿತ್ತು. ಈ ಬಾರಿ ಅದೂ ಇಲ್ಲ. ಹೀಗೆ ಆದರೆ ರೈತರು ಬೀದಿಗೆ ಬರುವುದು ನಿಶ್ಚಿತವಾಗಿದೆ ಎಂದು ರೈತ ನಾಗರಾಜ ನೋವು ತೋಡಿಕೊಂಡರು.
ಮಾರಾಟಕ್ಕೂ ಅನುಮತಿಯಿಲ್ಲ...: ‘ರೈತರ ಹೂವಿಗೆ ಬೆಲೆ ಸಿಗುತ್ತಿಲ್ಲ ನಿಜ. ರೈತರಿಂದ ಖರೀದಿಸಿದ ಹೂವು ಮಾರಾಟಕ್ಕೆ ಸಮಯಾವಕಾಶವೇ ಇಲ್ಲ. ಹೆಚ್ಚಿನ ಬೆಲೆಗೆ ಖರೀದಿಸಿ ಬೇರೆಡೆ ಸಾಗಿಸಲು ಅನುಮತಿಯಿದ್ದರೂ ಹೂವಿಗೆ ಮೊದಲಿನಷ್ಟು ಬೇಡಿಕೆಯಿಲ್ಲ. ಹೀಗಾಗಿ, ಬೇರೆ ಜಿಲ್ಲೆಗಳಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಮದುವೆ ಕಾರ್ಯಕ್ರಮಗಳು ಬಹಳಷ್ಟು ಸಿಂಪಲ್ ಆಗುತ್ತಿವೆ. ಹೂವಿನ ಅಲಂಕಾರಕ್ಕೆ ಹೆಚ್ಚಿನ ಬೇಡಿಕೆ ಇಲ್ಲವಾಗಿದೆ. ಅನಿವಾರ್ಯವಾಗಿ ದರ ಕುಸಿತ ಕಂಡಿದೆ. ಬರೀ ರೈತರಷ್ಟೆ ಅಲ್ಲ. ನಾವೂ ಕೂಡ ಬೀದಿಗೆ ಚೆಲ್ಲಿದ ಉದಾಹರಣೆಗಳು ಸಾಕಷ್ಟಿವೆ’ ಎಂದು ವ್ಯಾಪಾರಿ ಚಮನ್ಸಾಬ ಹೇಳುತ್ತಾರೆ.
ಜಿಲ್ಲೆಯಲ್ಲಿ ಅಂದಾಜು 1ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ಬೆಳೆಯಲಾಗಿದೆ. ಎಲ್ಲ ರೈತರದ್ದೂ ಇದೇ ಸಮಸ್ಯೆಯಾಗಿದೆ. ಬೀಜ, ಗೊಬ್ಬರಕ್ಕೆಂದು ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದಲ್ಲದೆ ಅದಕ್ಕೆ ಹಗಲು ರಾತ್ರಿ ಎನ್ನದೇ ನೀರು ಹಾಯಿಸಿದ ರೈತರ ಕೂಲಿಯೂ ಬಾರದಂತಾಗಿದೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಹೂವು ಬೆಳೆಗಾರರ ಸಂಕಷ್ಟಕ್ಕೆ ನೆರವು ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಉತ್ಪನ್ನ ಸಾಗಿಸಲು ರೈತರಿಗೆ ಗ್ರೀನ್ಪಾಸ್ ಕೊಟ್ಟಿದ್ದೇವೆ. ಕೃಷಿ ಉತ್ಪನ್ನಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಅಲ್ಲದೆ, ಕೆಲ ರೈತರು ಬೆಳೆ ನಾಶ ಮಾಡಿರುವ ಮಾಹಿತಿಯೂ ಬಂದಿದೆ. ಸರ್ಕಾರ ಕಳೆದ ವರ್ಷ ಹೂವು ಬೆಳೆಗಾರರಿಗೆ 1 ಹೆಕ್ಟೇರ್ಗೆ 25ಸಾವಿರ ರೂ.ಗಳ ಸಹಾಯಧನ ನೀಡಿತ್ತು. ಈ ಬಾರಿ ಅಂತಹ ಯಾವುದೇ ಘೊಷಣೆ, ಆದೇಶ ಇನ್ನೂ ಬಂದಿಲ್ಲ.| ಎಲ್. ಪ್ರದೀಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ