ಚಿಕ್ಕಮಗಳೂರು: ಕರೊನಾ ಸಂದರ್ಭದಲ್ಲಿ ಜೀವನ ಹಂಗು ತೊರೆದು ಸೇವೆ ಸಲ್ಲಿಸಿದ ವಿವಿಧ ವರ್ಗದ 50 ಮಂದಿ ಸೇನಾನಿಗಳಿಗೆ ಬೆಂಗಳೂರು ಸ್ಮೃತಿ ಸದನ ಹಾಗೂ ವಾಸವಿ ಯುವಜನ ಸಂಘದಿಂದ ಗೌರವಿಸಲಾಗುವುದು ಎಂದು ಅಧ್ಯಕ್ಷ ಜಿ.ಎ.ದಿನೇಶ್ ಗುಪ್ತ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಗಕ್ಕೆ ತುತ್ತಾದ ಹಾಗೂ ಮೃತರಾದವರ ನೆರವಿಗೆ ನಿಂತು ಕರೊನಾ ಪಿಡುಗಿನ ವಿರುದ್ಧ ಹೋರಾಡಿದ್ದ ವೈದ್ಯರು, ದಾದಿಯರು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದಿದ್ದವರಿಗೆ ಗೌರವಿಸುವುದು ನಮ್ಮ ಉದ್ದೇಶ ಎಂದರು.
ಮೃತಪಟ್ಟವರ ಕುಟುಂಬದವರಿಗೆ ಗೌರವ
ಗೌರವ ಲಾಕ್ ಡೌನ್ ಸಂದರ್ಭದಲ್ಲಿ ಮನೆಮನೆಗೆ ತೆರಳಿ ದಿನಬಳಕೆ ವಸ್ತು ಮತ್ತು ತರಕಾರಿಗಳನ್ನು ಪೂರೈಸಿದ ಸೇವಾ ಭಾರತಿ ಸೇವಾಕರ್ತರು, ಭಿಕ್ಷುಕರಿಗೆ ಆಶ್ರಯ ನೀಡಿ ಊಟದ ವ್ಯವಸ್ಥೆ ಕಲ್ಪಿಸಿದ ಸೇವಾ ಸಿಬ್ಬಂದಿ, ಆಂಬುಲೆನ್ಸ್ ಚಾಲಕರು ಸೇರಿದಂತೆ ಕರೊನಾದಿಂದ ಮೃತಪಟ್ಟವರ ಕುಟುಂಬದವರನ್ನು ಸನ್ಮಾನಿಸಲಾಗುವುದು ಎಂದರು.
ಡಿ.6 ರಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಸಂಜೆ 4ಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಪೌರಾಯುಕ್ತ ಬಿ.ಸಿ.ಬಸವರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್, ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಸ್ಮೃತಿ ಸದನದ ಸಿಇಒ ಶಿವಕುಮಾರ್ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸ್ಮೃತಿ ಸದನದ ಸೌರಭ ಪ್ರವೀಣ್, ವಾಸವಿ ಯುವಜನ ಸಂಘದ ಉಪಾಧ್ಯಕ್ಷ ನಿತಿನ್, ಸಂಘಟನಾ ಕಾರ್ಯದರ್ಶಿ ಜ್ಯೋತಿ ಸುಮನ್, ವಿನಯ ಕುಮಾರ್, ಶ್ವೇತಾ ಆನಂದ್ ಇದ್ದರು.