ಉಡುಪಿ:ಬಡ ವೃದ್ಧರಿಗೆ ನೆರವು, ಸರತಿಸಾಲಿನಲ್ಲಿ ಪಡಿತರ ಪಡೆಯಲು ನಿಂತ ಅಶಕ್ತರಿಗೆ ಸಹಕಾರ, ಸಮಸ್ಯೆಗೊಳಗಾದವರಿಗೆ ತುರ್ತು ಪರಿಸ್ಥಿತಿಯಲ್ಲಿ ಔಷಧ ಪೂರೈಕೆ, ಸುಳ್ಳು ಸುದ್ದಿಗಳಿಗೆ ಬ್ರೇಕ್...
ಇದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಕಾರ್ಮಿಕ ತರಬೇತಿ ಸಂಸ್ಥೆ, ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ರಚಿಸಲಾಗಿರುವ ಕರೊನಾ ಸೈನಿಕರ ತಂಡ ಪ್ರತಿಫಲಾಕ್ಷೆಯಿಲ್ಲದೆ ಸಲ್ಲಿಸುತ್ತಿರುವ ಕಾರ್ಯ.
ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಕರೊನಾ ಸೈನಿಕರು ನೋಂದಾಯಿಸಿಕೊಂಡಿದ್ದು, ಜಿಲ್ಲೆಯಲ್ಲಿ ಇವರ ಸಂಖ್ಯೆ 260ಕ್ಕೂ ಅಧಿಕ. ಇದರಲ್ಲಿ ವೈದ್ಯರು, ಇಂಜಿನಿಯರ್‌ಗಳು, ಟೆಕ್ಕಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವರ್ಗಗಳ ಪ್ರತಿನಿಧಿಗಳಿದ್ದಾರೆ. 7 ತಾಲೂಕುಗಳಲ್ಲಿ ಪ್ರತ್ಯೇಕ ವಾಟ್ಸಾಪ್ ಗ್ರೂಪ್‌ಗಳನ್ನು ಮಾಡಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳಿಗೆ ಅಗತ್ಯ ನೆರವು ನೀಡುತ್ತಿದ್ದಾರೆ.
ಸುಳ್ಳು ಸುದ್ದಿ ತಡೆಯಲು ಕ್ರಮ: ಕರೊನಾ ಸೈನಿಕರು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಸುಳ್ಳು ಮತು ಅತಿರೇಕದ ಸುದ್ದಿಗಳು ಬಂದಲ್ಲಿ ಅದನ್ನು ಬೆಂಗಳೂರಿನಲ್ಲಿನ ಕರೊನಾ ವಾರಿಯರ್ಸ್‌ನ ಪ್ರಮುಖರಿಗೆ ತಲುಪಿಸುತ್ತಾರೆ. ಅಲ್ಲಿನ ಪ್ರಮುಖರು ಸದ್ರಿ ಸುದ್ದಿಗಳ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ. ಈ ಸ್ಪಷ್ಟನೆ ಸುಳ್ಳು ಸುದ್ದಿ ಸೃಷ್ಟಿಯಾದ ಮಾಧ್ಯಮದ ಮೂಲಕವೇ ಸಾರ್ವಜನಿಕರಿಗೆ ನಿಜವಾದ ಮಾಹಿತಿ ನೀಡುವ ಕೆಲಸವನ್ನು ಕರೊನಾ ಸೈನಿಕರ ತಂಡ ಮಾಡುತ್ತಿದೆ.
ಸಮನ್ವಯದಿಂದ ಕಾರ್ಯ: ದೇಶ ಕಾಯವ ಯೋಧರಂತೆ ಯಾವುದೇ ಸಮಯದಲ್ಲಿ ಸಾರ್ವಜನಿಕರಿಗೆ ಸಹಾಯ ನೀಡಲು ಕರೊನಾ ಸೈನಿಕರ ತಂಡ ಅಣಿಯಾಗಿದೆ. ಜಿಲ್ಲೆಯ ಪ್ರಮುಖ ಸಂಘಟಕರಾಗಿ ಸುಕೇತ್ ಶೆಟ್ಟಿ (8310155994) ಕಾರ್ಯನಿರ್ವಹಿಸುತ್ತಿದ್ದಾರೆ. ಸಹನಾ (9164448287) ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ಎಲ್ಲ ತಾಲೂಕುಗಳಲ್ಲಿ ಕರೊನಾ ಸೈನಿಕರು ಪರಸ್ಪರ ಸಮನ್ವಯದಿಂದ, ಜಿಲ್ಲೆಯ ಯಾವುದೇ ಭಾಗದಿಂದ ಬರುವ ಸಮಸ್ಯೆಗಳಿಗೆ ನೆರವು ನೀಡುತ್ತಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿಯ ಈ ಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ.
ದ.ಕ ಜಿಲ್ಲೆಯಲ್ಲಿ 483 ಸ್ವಯಂಸೇವಕರು: ದ.ಕ ಕರೊನಾ ವಾರಿಯರ್ಸ್ ತಂಡದಲ್ಲಿ 483 ಸ್ವಯಂಸೇವಕರಿದ್ದು, ಇವರೆಲ್ಲ ಜಿಲ್ಲೆಯ ವೈವಿಧ್ಯತೆಯನ್ನು ಪ್ರತಿನಿಧಿಸುವ ಎಲ್ಲ ವರ್ಗದ ನಾಗರಿಕರಾಗಿದ್ದಾರೆ. ಈ ಯೋಧರನ್ನು ಒಂಬತ್ತು ತಾಲೂಕು ಗುಂಪುಗಳಾಗಿ ವಿಭಾಗಿಸಲಾಗಿದೆ. ವಿವಿಧ ಜಾಲತಾಣ ಹಾಗೂ ಮೊಬೈಲ್‌ಗಳಲ್ಲಿ ಹರಡುತ್ತಿರುವ ತಪ್ಪು/ನಕಲಿ ಸಂದೇಶಗಳನ್ನು 4 ಜನರ ಪ್ರಮುಖ ತಂಡ ಸಂಗ್ರಹಿಸಿ, 18 ಜನರ ತನಿಖೆ/ತಂತ್ರಜ್ಞಾನ ತಂಡ ವಿವಿಧ ಮೂಲಗಳಿಂದ ತನಿಖೆ ನಡೆಸಿ ಸರಿಯಾದ ಮಾಹಿತಿ ಸಾಮಾಜಿಕ ಪ್ರಸಾರ ಸಂದೇಶಗಳ ಮೂಲಕ ಪ್ರಸಾರ ಮಾಡುತ್ತಿವೆ. ಮಾ.31ರಿಂದ ಏ.6ರ ವರೆಗೆ 25 ನಕಲಿ ಸಂದೇಶಗಳ ಎಚ್ಚರಿಕೆಗಳನ್ನು ಪ್ರಸಾರ ಮಾಡಲಾಗಿದೆ. ಈ ಪೈಕಿ 6 ಸುದ್ದಿಗಳನ್ನು ಸ್ಥಳೀಯ ನಕಲಿ ಸುದ್ದಿಗಳೆಂದು ತಂಡ ತನಿಖೆ ಮಾಡಿ ಬಯಲು ಮಾಡಲಾಗಿದೆ. ಅಂದಾಜಿನ ಪ್ರಕಾರ ಡಿ.ಕೆ.ಕರೊನಾ ವಾರಿಯರ್ಸ್ ಪ್ರಸಾರ ಮಾಡಿದ ಸಂದೇಶಗಳು ಪ್ರತೀ ದಿನ ಕನಿಷ್ಠ 2.64 ಲಕ್ಷ ಜನರನ್ನು ತಲುಪುತ್ತಿವೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೊನಾ ಸೈನಿಕ ತಂಡ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್, ಟೆಲಿಗ್ರಾಂ ಮುಂತಾದ ಜಾಲತಾಣಗಳಲ್ಲಿ ಸಹಾಯ ಕೋರಿ ಬರುವ ರಾಜ್ಯದ ಎಲ್ಲ ಭಾಗಗಳ ಸಾರ್ವಜನಿಕರ ಸಮಸ್ಯೆಗಳನ್ನು ಸಂಬಂದಪಟ್ಟ ತಾಲೂಕಿನ ಕರೊನಾ ಸೈನಿಕರಿಗೆ ತಲುಪಿಸುವ ಮೂಲಕ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲಾಗುತ್ತಿದೆ. - ಸಹನಾ ಉಡುಪಿ ಜಿಲ್ಲೆ ಉಸ್ತುವಾರಿ, ಕರೊನಾ ಸೈನಿಕ ತಂಡ ಜಿಲ್ಲೆಯ ಸಾರ್ವಜನಿಕರು ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ಅವರ ಸಮಸ್ಯೆಗೆ ಅಗತ್ಯ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಮ್ಮ ತಂಡ ಸದಾ ಸಿದ್ಧವಿದೆ. -ಸುಕೇತ್ ಶೆಟ್ಟಿ ಉಡುಪಿ ಜಿಲ್ಲೆ ಸಂಘಟಕ, ಕರೊನಾ ಸೈನಿಕ ತಂಡ.