ಅಥಣಿ: ಕರೊನಾ ವೈರಸ್ ನಿಯಂತ್ರಿಸಲು ಹಾಗೂ ಜನರ ಸುರಕ್ಷತೆಗಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ, ವೈದ್ಯರಿಗೆ,ಪೌರ ಕಾರ್ಮಿಕರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ ಹೇಳಿದರು.
ಅವರು ಶುಕ್ರವಾರ ಕರೊನಾ ವೈರಸ್ ನಿಯಂತ್ರಿಸಲು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಾಗೂ ಪೌರ ಕಾರ್ಮಿಕರಿಗೆ ಸತ್ಯ ಸಂಗಮ ಗ್ರಾಮೀಣ ವಿಕಾಸ ಪ್ರತಿಷ್ಠಾನದಿಂದ ಆಹಾರ ಧಾನ್ಯ, ಹೆಲ್ಮೆಟ್ ಮಾಸ್ಕ್ ಗಳನ್ನು ವಿತರಿಸಿ ಮಾತನಾಡಿದರು. ಸಾರ್ವಜನಿಕರ ಸುರಕ್ಷತೆಗಾಗಿ ಮತ್ತು ಕರೊನಾ ವೈರಸ್ ನಿಯಂತ್ರಿಸಲು ಶ್ರಮಿಸುತ್ತಿರುವ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇವೆ ಶ್ಲಾಘನೀಯ. ಪಟ್ಟಣದ ಸ್ವಚ್ಛತೆಗಾಗಿ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರೆಲ್ಲರಿಗೂ ಸಾರ್ವಜನಿಕರು, ಸಂಘ- ಸಂಸ್ಥೆಗಳು ಸಹಕಾರ ನೀಡುವುದು ಅವಶ್ಯವಿದೆ ಎಂದರು.
ಸಿಪಿಐ ಶಂಕರಗೌಡ ಬಸನಗೌಡರ ಮಾತನಾಡಿದರು. ಕಾರ್ಯಕರ್ತರಾದ ಸುಶೀಲ ಪತ್ತಾರ, ಶ್ರೀಶೈಲ ನಾಯಿಕ, ವಿಜಯ ಮಂಗಸೂಳಿ, ಶಿವರುದ್ರ ಘೂಳಪ್ಪನವರ, ಶಿವು ನಾಯಕ, ಪ್ರವೀಣ ಯಳಮಲ್ಲಿ ಇತರರು ಇದ್ದರು.