ಐನಾಪುರ: ಕರೊನಾ ವೈರಸ್ ದೇಶದಲ್ಲಿ ಅದರಲ್ಲಿಯೇ ನೆರೆಯ ಮಹಾರಾಷ್ಟ್ರದಲ್ಲಿ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಎ.ಆರ್. ಕುಲಕರ್ಣಿ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಮಿತಿಯ ಸಭೆ ಮಂಗಳವಾರ ಜರುಗಿತು.
ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಫೋನ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿ, ಪ್ರಧಾನಿ ಮೋದಿಯವರ ಆದೇಶದಂತೆ 21 ದಿನಗಳ ಕಾಲ ಮನೆಯಲ್ಲಿ ಇದ್ದು ಕರೊನಾ ಹರಡದಂತೆ ನಿಗಾ ವಹಿಸಲು ಕ್ರಮ ಕೈಗೊಳ್ಳಬೇಕು. ಎಲ್ಲ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರ ಕ್ರಮ ಕೈಗೊಂಡಿದೆ.
ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಗೆ ಬರದೇ ಲಾಕ್‌ಡೌನ್ ಆದೇಶ ಪಾಲಿಸಬೇಕು ಎಂದರು. ಪ್ರಾಥಮಿಕ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಕೋಳಿ ಮಾತನಾಡಿ, ಮುಂದುವರಿದ ರಾಷ್ಟ್ರದಲ್ಲಿ ಎಲ್ಲ ಅಗತ್ಯ ಸಲಕರಣೆಗಳಿದ್ದರೂ, ಕರೊನಾ ವೈರಸ್ ಹತೋಟಿಗೆ ಬರುತ್ತಿಲ್ಲ.
ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಸೇರಿ ಒಂದೇ ವೆಂಟಿಲೇಟರ್ ಇದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಪಪಂ ಸದಸ್ಯ ತಮ್ಮಣ್ಣ ಪಾರಶೆಟ್ಟಿ ಮಾತನಾಡಿ, ಮಹಾರಾಷ್ಟ್ರದ ಅರಗ, ಬೆಡಗ, ಮಾಲಗಾಂವ, ಲಿಂಗನೂರ, ಖಟಾಂವ, ಬೆಳ್ಳಂಕಿ ಸೇರಿ ಇನ್ನೂ ಹಲವು ಹಳ್ಳಿಗಳಿಗೆ ನಿತ್ಯ ನೂರಾರು ಕೂಲಿಕಾರರು ಬೆಳಗ್ಗೆ ಹೋಗಿ ಸಂಜೆ ಮರಳುತ್ತಿದ್ದಾರೆ. ಇದನ್ನು ಬೇಗ ತಡೆಯಬೇಕು ಎಂದರು.
ಬಿಜೆಪಿ ಮುಖಂಡ ದಾದಾ ಪಾಟೀಲ, ಪ.ಪಂ. ಸದಸ್ಯ ಕುಮಾರ ಜಯಕರ, ಪ್ರಕಾಶ ಪುಠಾಣಿ, ಅಜಿತ ಹಚ್ಚಿಬಟ್ಟಿ, ಪ್ರಕಾಶ ಚಿನಗಿ, ರಾವಬಹಾದ್ದೂರ ಕುಡಚಿ, ಸುನೀಲ ಮಾಳಿ, ರಮೇಶ ದೊಡಮನಿ, ಮಹಾದೇವ ಐಹೋಳೆ ಇದ್ದರು.