ಜಿಲ್ಲೆ

ಕರೊನಾ ವೈರಸ್ ತಡೆಗಿಲ್ಲ ಕ್ರಮ

ಅಥಣಿ: ತಾಲೂಕಾಡಳಿತದ ಶಕ್ತಿ ಕೇಂದ್ರದ ಮಿನಿ ವಿಧಾನಸೌಧದಲ್ಲಿ ಕರೊನಾ ವೈರಸ್ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಹಾಗೂ ಇಲ್ಲಿಗೆ ಬರುವವರೂ ದೈಹಿಕ ಅಂತರ ನಿಯಮ ಪಾಲನೆ ಮಾಡದಿರುವುದರಿಂದ ಕೋವಿಡ್-19 ಪ್ರಕರಣಗಳು ಹೆಚ್ಚುವ ಆತಂಕ ಮೂಡಿದೆ.

ಹೌದು, ಮಿನಿ ವಿಧಾನಸೌಧದಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ, ಮುಖ್ಯ ದ್ವಾರದಲ್ಲಿ ಸ್ಯಾನಿಟೈಸರ್ ಸಿಂಪಡಣೆ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೇ ತಮ್ಮ ಕೆಲಸ ಕಾರ್ಯಗಳಿಗಾಗಿ ಮುಗಿಬೀಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಸರಿಯಾದ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪ್ರಜ್ಞಾವಂತ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.

ಪ್ರತಿ ದಿನ ತಾಲೂಕಿನ ಗ್ರಾಮೀಣ ಮತ್ತು ಪಟ್ಟಣದ ಜನರು ಆಸ್ತಿ ಖರೀದಿ, ಮಾರಾಟ ಸೇರಿ ಇತರ ಕಾರ್ಯಗಳಿಗೆ ಕುಟುಂಬ ಸಮೇತರಾಗಿ ಉಪ ನೋಂದಣಿ ಕಚೇರಿಗೆ ಬರುತ್ತಾರೆ. ಹೀಗಾಗಿ, ಇಲ್ಲಿ ಜನದಟ್ಟಣೆ ಅಧಿಕವಾಗುತ್ತಿದೆ. ಮಹಾಮಾರಿ ಕರೊನಾ ಭೀತಿ ಜನರಲ್ಲಿ ಮಾಯವಾದಂತೆ ಕಂಡು ಬರುತ್ತಿದೆ. ದೈಹಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ. ಇವರಿಗೆ ತಿಳಿ ಹೇಳಿ ಅಗತ್ಯ ನಿಯಮ ಪಾಲನೆ ಮೂಲಕ ಕಾರ್ಯ ನಿರ್ವಹಿಸಲು ಇಲ್ಲಿನ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ನಿತ್ಯ ಜನದಟ್ಟಣೆ ಹೆಚ್ಚುತ್ತ ಸಾಗಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಸರ್ಕಾರಿ ಕಚೇರಿ ಕಾರ್ಯ ಸ್ಥಗಿತಗೊಂಡಿದ್ದವು. ಈಗ ಪ್ರಾರಂಭವಾಗಿದ್ದರಿಂದ ಒಮ್ಮೆಲೆ ಜನರು ಬರುತ್ತಿದ್ದಾರೆ. ತಹಸೀಲ್ದಾರ್ ಕಚೇರಿ, ಆಹಾರ ಇಲಾಖೆ, ಕಂದಾಯ ಇಲಾಖೆ, ಉಪ ನೋಂದಣಿ ಕಚೇರಿ, ಭೂಮಿ ಸರ್ವೇ, ಖಜಾನೆ ಸೇರಿ ಇನ್ನು ಹಲವು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಪ್ರಾರಂಭವಾಗಿದ್ದು, ಜನ ಜಂಗುಳಿ ಹೆಚ್ಚು ಕಂಡು ಬರುತ್ತಿದೆ.

ತಾಲೂಕಾಡಳಿತದ ವಿರುದ್ಧ ಆಕ್ರೋಶ: ತಾಲೂಕಿನಲ್ಲಿ ಹಲವು ಕರೊನಾ ವೈರಸ್ ದೃಢಪಟ್ಟ ಪ್ರಕರಣ ಕಂಡೂ ಬಂದರೂ ತಾಲೂಕಾಡಳಿತ ಎಚ್ಚೆತ್ತುಕೊಂಡಿಲ್ಲ. ತಹಸೀಲ್ದಾರ್ ಕಚೇರಿ ಮುಂದೆ ಜನಜಂಗುಳಿ ನಿಯಂತ್ರಣ ಮಾಡುತ್ತಿಲ್ಲ. ಸ್ಯಾನಿಟೈಸರ್ ಸಿಂಪಡಣೆ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡುತ್ತಿಲ್ಲ. ಕರೊನಾ ತಡೆಗೆ ಮುನ್ನೆಚ್ಚರಿಕೆ ಕ್ರಮ ಇಲ್ಲಿ ಪಾಲನೆಯಾಗುತ್ತಿಲ್ಲ ಎಂದು ತಾಲೂಕಾಡಳಿತ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಬಸನಗೌಡ ಪಾಟೀಲ, ಜಗನಾಥ ಬಾಬನೆ, ಅಲ್ಲಪ್ಪ ಮಾಂಗ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಖಾಸಗಿಯಾಗಿ ಮೂರು ಜನರನ್ನು ನೇಮಿಸಿ ಸಾರ್ವಜನಿಕರನ್ನು ಪರೀಕ್ಷಿಸಿ ಬಿಡುವಂತೆ ಸೂಚಿಸಲಾಗಿದೆ. ಜನರು ಕೂಡ ಮಾಸ್ಕ್ ಧರಿಸಿ ಬರಬೇಕು. ಕಚೇರಿ ಸಿಬ್ಬಂದಿಗಳಿಂದ ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿದೆ. ಉಪ ನೋಂದಣಿ ಕಚೇರಿಗೆ ಹೆಚ್ಚಿನ ಜನರು ಬರುವುದರಿಂದ ಅಲ್ಲಿ ಜನರ ನಿಯಂತ್ರಣಕ್ಕೆ ಮತ್ತು ದೈಹಿಕ ಅಂತರ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.| ದುಂಡಪ್ಪ ಕೋಮಾರ ಅಥಣಿ ತಹಸೀಲ್ದಾರ್
ನಿತ್ಯ ನೂರಾರು ಜನರು ತಹಸೀಲ್ದಾರ್ ಕಚೇರಿಗೆ ಬರುತ್ತಾರೆ. ಆದ್ದರಿಂದ ಕರೊನಾ ವೈರಸ್ ತಡೆಗೆ ತಾಲೂಕಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜನಜಂಗುಳಿ ನಿಯಂತ್ರಿಸಿ, ಪರಸ್ಪರ ಅಂತರ ಕಾಪಾಡುವಂತೆ ಜನರಿಗೆ ಮನವರಿಕೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಸೂಚಿಸಬೇಕು. ಸ್ಯಾನಿಟೈಸರ್ ಸಿಂಪಡಣೆ ಮಾಡಲು ಸುರಂಗ ಕೇಂದ್ರ ಸ್ಥಾಪಿಸಿದರೆ ಅನುಕೂಲವಾಗುತ್ತದೆ. | ಶ್ರೀಕಾಂತ ಪೂಜಾರಿ ವಕೀಲ

| ರಾಜು ಎಸ್. ಗಾಲಿ