ಬೆಂಗಳೂರು: ಭಾರತವೂ ಸೇರಿ 103 ರಾಷ್ಟ್ರಗಳಲ್ಲಿ ನೋವೆಲ್ ಕೊರೋನಾ ವೈರಸ್(COVID2019) ಸೋಂಕು ಹರಡುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ. ಕರ್ನಾಟಕದಲ್ಲೂ ಕೊರೊನಾ ವೈರಾಣು ಸೋಂಕು ಹರಡುತ್ತಿರುವ ಶಂಕೆ ಕಾರಣ ಎಲ್ಲೆಡೆ ಮುಂಜಾಗ್ರತಾ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಇತ್ತೀಚೆಗೆ ಹೈದರಾಬಾದ್ ಮೂಲದ ಟೆಕ್ಕಿ ಬೆಂಗಳೂರಿನಿಂದ ತೆಲಂಗಾಣಕ್ಕೆ ಪ್ರಯಾಣಿಸಿದ್ದು, ಅಲ್ಲಿ ಆತನಿಗೆ ಸೋಂಕು ಇರುವುದು ಪತ್ತೆಯಾದ ನಂತರದಲ್ಲಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಹೊರಡಿಸಿರುವ ಪ್ರಕಟಣೆ ಪ್ರಕಾರ, ಇಲ್ಲಿ ತನಕ 982 ಜನರನ್ನು ಸೋಂಕಿನ ಕಾರಣಕ್ಕೆ ಅವಲೋಕನೆಗಾಗಿ ಗುರುತಿಸಲಾಗಿದೆ. ಅವರ ಪೈಕಿ 266 ಜನ ಅವಲೋಕನದ 28 ದಿನಗಳನ್ನು ಪೂರೈಸಿದ್ದಾರೆ. 700 ಜನ ಮನೆಯಲ್ಲೇ ಪ್ರತ್ಯೇಕವಾಗಿ ಇದ್ದು ಅವರ ಮೇಲಿನ ನಿಗಾ ಮುಂದುವರಿದಿದೆ. ಈ ಪೈಕಿ ಸೋಂಕು ಇರುವ ದೇಶಗಳಿಗೆ ಪ್ರವಾಸ ಹೋದವರು, ಅವರ ಸಂಪರ್ಕದಲ್ಲಿ ಇರುವವರು ಇದ್ದಾರೆ. ಇಲ್ಲಿತನಕ 12 ಜನರನ್ನು ಐಸೋಲೇಷನ್ ಆಸ್ಪತ್ರೆಗೆ ಒಳರೋಗಿಗಳನ್ನಾಗಿ ದಾಖಲಿಸಲಾಗಿದೆ. ಅಲ್ಲದೆ, ಸೋಮವಾರದ ತನಕ ರೋಗ ಲಕ್ಷಣ ಇರುವವರ ಪೈಕಿ 432 ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಇದರಲ್ಲಿ 364 ಮಾದರಿ ನೆಗೆಟಿವ್ ಫಲಿತಾಂಶ ತೋರಿದೆ. ಇನ್ನು ಉಳಿದ 68 ಮಾದರಿಗಳ ವರದಿ ಇನ್ನಷ್ಟೆ ಬರಬೇಕಾಗಿದೆ. ಈ ನಡುವೆ, ಬೆಂಗಳೂರು ವಾಸಿಯೊಬ್ಬರು ಅಮೆರಿಕದಿಂದ ವಾಪಸಾಗಿದ್ದು, ಆತನಲ್ಲಿ ಕೊರೊನಾ ವೈರಾಣು ಸೋಂಕು ಇರುವುದು ದೃಢಪಟ್ಟಿದೆ.
ಕರ್ನಾಟಕದಲ್ಲಿ ಇಂದಿನ ತನಕ 91,911 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 61,585 ಪ್ರಯಾಣಿಕರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 25,003 ಪ್ರಯಾಣಿಕರು, ಮಂಗಳೂರು ಮತ್ತು ಕಾರವಾರ ಕಡಲ ಬಂದರುಗಳಲ್ಲಿ 5,323 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆರೋಗ್ಯ ಸಹಾಯವಾಣಿ 104 ನಂಬರ್ಗೆ ಇಂದಿನ ತನಕ 12, 455 ಕರೆಗಳು ಬಂದಿದ್ದು, ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.