ಸವದತ್ತಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿದರು. ತಹಸೀಲ್ದಾರ್ ಪ್ರಶಾಂತ ಪಾಟೀಲ, ತಾಪಂ ಇಒ ಯಶವಂತಕುಮಾರ, ಆರೋಗ್ಯಾಧಿಕಾರಿ ಮಹೇಶ ಚಿತ್ತರಗಿ, ಸಿಪಿಐ ಮಂಜುನಾಥ ನಡುವಿನಮನಿ ಇತರರು ಉಪಸ್ಥಿತರಿದ್ದರು. 
ಜಿಲ್ಲೆ

ಕರೊನಾ ವೈರಸ್ ನಿಯಂತ್ರಿಸಲು ಎಚ್ಚರಿಕೆ ವಹಿಸಿ

ಸವದತ್ತಿ: ರಾಜ್ಯದ ವಿವಿಧ ಜಿಲ್ಲೆಗಳಿಂದ ಸವದತ್ತಿ ತಾಲೂಕಿಗೆ ಬರುವ ಕೂಲಿಕಾರ್ಮಿಕರ ಮಾಹಿತಿ ಸಂಗ್ರಹಿಸಿ ಕ್ವಾರಂಟೈನ್ ಮಾಡಬೇಕು. ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಸ್ಥಳೀಯ ತಾಪಂ ಸಭಾಭವನದಲ್ಲಿ ಶನಿವಾರ ಕೋವಿಡ್-19 ಕುರಿತು ನಡೆದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು. ವಲಸಿಗರು ಬಸ್ ಮೂಲಕ ಆಗಮಿಸುವ ಮಾಹಿತಿ ಇದೆ. ಹಾಗಾಗಿ ಆಯಾ ಸಾರಿಗೆ ಘಟಕಗಳಿಂದ ಮಾಹಿತಿ ಪಡೆದು ನೇರವಾಗಿ ತಾಲೂಕು ಆಸ್ಪತ್ರೆಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮೀಣ ಭಾಗದ ಜನರನ್ನು ಆಯಾ ಹಳ್ಳಿಯ ಆರೋಗ್ಯ ತಪಾಸಣೆ ಕೇಂದ್ರದಲ್ಲಿ ತಪಾಸಣೆ ಮಾಡಿದ ಬಳಿಕ ಊರು ಪ್ರವೇಶಿಸಲು ಅನುಮತಿ ನೀಡಬೇಕು. ಈಗಾಗಲೇ ತಬ್ಲಿಘಿಯಿಂದ ಬಂದ 128 ಜನರ ತಪಾಸಣೆ ಮಾಡಿದ್ದು, ಅವರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದೆ. ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಬೇಕು. ತಾಲೂಕಾದ್ಯಂತ ಪರಿಶೀಲನೆ ತಂಡ ರಚನೆ ಮಾಡಿ ತ್ವರಿತಗತಿಯಲ್ಲಿ ಶಂಕಿತರ ಸಮಗ್ರ ಮಾಹಿತಿ ಸಂಗ್ರಹಿಸಲು ಮುಂದಾಗಬೇಕು ಎಂದರು. ತಹಸೀಲ್ದಾರ್ ಪ್ರಶಾಂತ ಪಾಟೀಲ, ತಾಲೂಕು ಪಂಚಾಯಿತಿ ಇಒ ಯಶವಂತಕುಮಾರ, ಆರೋಗ್ಯಾಧಿಕಾರಿ ಮಹೇಶ ಚಿತ್ತರಗಿ, ಸಿಪಿಐ ಮಂಜುನಾಥ ನಡುವಿನಮನಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಸಿಬ್ಬಂದಿಗೆ ಉಪಾಹಾರ ವ್ಯವಸ್ಥೆ

ಮಹಾಮಾರಿ ಕರೊನಾ ವೈರಸ್ ನಿಯಂತ್ರಿಸಲು ಶ್ರಮಿಸುತ್ತಿರುವ ಬೈಲಹೊಂಗಲ ತಾಲೂಕು ಮಟ್ಟದ ವಿವಿಧ ಇಲಾಖೆಗಳ ನೌಕರರಿಗೆ ಹಾಗೂ ಕೊಳಚೆ ಪ್ರದೇಶದ ನಿವಾಸಿಗಳಿಗೆ ರಾಜ್ಯ ಅಗ್ನಿಶಾಮಕ ದಳದ ವತಿಯಿಂದ ಉಪಾಹಾರ ವ್ಯವಸ್ಥೆ ಕಲ್ಪಿಸಲಾಯಿತು.