ಜಿಲ್ಲೆ

ಬೆಂಗಳೂರಿನಲ್ಲಿ 30 ನಿರ್ಬಂಧಿತ ವಲಯ: ಕಮಾಂಡಿಂಗ್ ಅಧಿಕಾರಿ ನೇಮಕ- ದಿಗ್ಬಂಧನ ಕಠಿಣ

kumarvrl

ಬೆಂಗಳೂರು: ಕರೊನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 30 ಕಂಟೈನ್​ವೆುಂಟ್ ಝೋನ್​ಗಳನ್ನು (ನಿರ್ಬಂಧಿತ ವಲಯ) ರಚಿಸಲಾಗಿದ್ದು, ಇಲ್ಲಿ ಏ.20ರ ನಂತರವೂ ಕಠಿಣ ಲಾಕ್​ಡೌನ್ ಮುಂದುವರಿಯಲಿದೆ.

ಈಗಾಗಲೇ ಕೇಂದ್ರ ಸರ್ಕಾರ ಏ.20ರ ನಂತರ ಲಾಕ್​ಡೌನ್ ಸಡಿಲಗೊಳಿಸಿ, ಅಗತ್ಯ ಸೇವೆ ಒದಗಿಸುವ ಸರ್ಕಾರಿ ನೌಕರರು, ಐಟಿ-ಬಿಟಿ ಉದ್ಯೋಗಿಗಳು, ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಅನುಮತಿ ನೀಡಲು ಸಿದ್ಧವಾಗಿವೆ. ಆದರೆ ಕಂಟೈನ್​ವೆುಂಟ್ ವಲಯಗಳಲ್ಲಿರುವ ಜನರಿಗೆ ಮಾತ್ರ ಮೇ 3ರವರೆಗೆ ಕಠಿಣ ಲಾಕ್​ಡೌನ್ ಮುಂದುವರಿಯುವ ಸಾಧ್ಯತೆಗಳಿವೆ. ಇದಕ್ಕಾಗಿ ರಾಜ್ಯ ಸರ್ಕಾರ ವಲಯ ವಿಂಗಡಣೆ ಹಾಗೂ ಕಮಾಂಡರ್ ಅಧಿಕಾರಿ ನೇಮಕಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಹೇಗಿರುತ್ತೆ ಕಂಟೈನ್​ವೆುಂಟ್

ವಲಯ?: ಹಿಂದಿನ 28 ದಿನ ಗಳಿಂದ ಕರೊನಾ ಸೋಂಕಿತರು ಹಾಗೂ 50ಕ್ಕಿಂತ ಹೆಚ್ಚು ಪ್ರಾಥಮಿಕ ಸೋಂಕಿತರು ಕಂಡುಬಂದ ಪ್ರದೇಶಗಳನ್ನು ಹಾಟ್​ಸ್ಪಾಟ್ ಎಂದು ಗುರುತಿಸಲಾಗಿದ್ದು, ಅವುಗಳನ್ನೇ ಕಂಟೈನ್​ವೆುಂಟ್ ವಲಯಗಳಾಗಿ ಮುಂದುವರಿಸಲಾಗುತ್ತದೆ. ಕರೊನಾ ಸೋಂಕಿತ ಮನೆಯನ್ನು (ಎಪಿ ಸೆಂಟರ್) ಕೇಂದ್ರವನ್ನಾಗಿಟ್ಟುಕೊಂಡು, ಸುತ್ತಲಿನ 1 ಕಿ.ಮೀ. ಪ್ರದೇಶವನ್ನು ಹೆಚ್ಚು ಕಾಪು ವಲಯ (ಬಫರ್ ಝೋನ್) ಎಂದು ವಿಂಗಡಿಸಿ ಪ್ರತಿಯೊಂದು ಮನೆಯ ಸದಸ್ಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇಲ್ಲಿಂದ ಮುಂದಿನ 4 ಕಿ.ಮೀ ಸಾಮಾನ್ಯ ಕಾಪು ವಲಯವಾಗಿ ಗುರುತಿಸಿ, ಲಕ್ಷಣಗಳನ್ನು ಆಧರಿಸಿ ತಪಾಸಣೆ ಮಾಡಲಾಗುತ್ತದೆ.

ಕಮಾಂಡರ್ ನೇಮಕ: ಕಂಟೈನ್​ವೆುಂಟ್ ವಲಯ ನಿರ್ವಹಣೆಗೆ ‘ಎ’ ಗ್ರೇಡ್ ಕಮಾಂಡರ್ ನೇಮಕ ಮಾಡಲಾಗುತ್ತದೆ. ಇವರಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಹತ್ತಿರದಲ್ಲಿ ಕಮಾಂಡಿಂಗ್ ಕೇಂದ್ರ ಸ್ಥಾಪಿಸಬೇಕು. ಇಲ್ಲಿಂದ ಕಮ್ಯಾಂಡಿಂಗ್ ಅಧಿಕಾರಿ ಪೊಲೀಸ್, ಬಿಬಿಎಂಪಿ ಮತ್ತು ಆರೋಗ್ಯ ಸಿಬ್ಬಂದಿ ನೆರವಿನೊಂದಿಗೆ ಮೇಲ್ವಿಚಾರಣೆ ಕಾರ್ಯ ಮಾಡಬೇಕು. ದಿನದ 24 ಗಂಟೆಯೂ ಈ ಸಿಬ್ಬಂದಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಬಿಬಿಎಂಪಿ ಜವಾಬ್ದಾರಿಯಾಗಿದೆ.

ಸಂಚಾರಕ್ಕೆ ನಿರ್ಬಂಧ

ಈ ಕಂಟೈನ್​ವೆುಂಟ್ ವಲಯಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಯಾರೊಬ್ಬರೂ ಹೊರಗೆ ಹೋಗುವಂತಿಲ್ಲ, ಬೇರೆಯವರು ಒಳಗೆ ಬರುವಂತಿಲ್ಲ. ಖಾಸಗಿ ವಾಹನಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧಿಸಲಾಗುತ್ತದೆ. ವಾರ್ಡ್ ನಕ್ಷೆ ಅನುಸಾರ ಎಲ್ಲ ಸಂಪರ್ಕ ರಸ್ತೆಗಳನ್ನು ಮುಚ್ಚಿ ಸಂಚಾರ ನಿರ್ಬಂಧಿಸಲಾಗುತ್ತದೆ. ಅಗತ್ಯ ಸಾಮಗ್ರಿಗಳಿಗೆ ಇಲ್ಲಿನ ಸ್ಥಳೀಯರು ಸಹಾಯವಾಣಿಗೆ ಕರೆ ಮಾಡಿದರೆ, ಬಿಬಿಎಂಪಿ ಸಿಬ್ಬಂದಿ ಅಥವಾ ಸಂಬಂಧಿಸಿದ ಅಧಿಕಾರಿಗಳು ಒದಗಿಸುತ್ತಾರೆ. ಇನ್ನು ಪಾಸ್​ಗಳು ಇರುವವರು, ಅಗತ್ಯ ಸೇವೆಗೆ ಹೋಗುವವರನ್ನು ಕಡ್ಡಾಯ ತಪಾಸಣೆ ಮಾಡಿ ಹೋಗಲು ಬಿಡಲಾಗುತ್ತದೆ.

ಪ್ರತಿ ಕಂಟೈನ್​ವೆುಂಟ್​ಗೆ ಓರ್ವ ಕಮಾಂಡರ್ ನೇಮಕ ಮಾಡಲಾಗುವುದು. ಅವರ ನೇತೃತ್ವದಲ್ಲಿ ಆರೋಗ್ಯ, ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಪ್ರತಿ ಮನೆಗಳ ಸಮೀಕ್ಷೆ ನಡೆಸಲಾಗುತ್ತದೆ. ಈ ತಂಡಗಳ ಜತೆಗೆ ಆಯಾ ವ್ಯಾಪ್ತಿಯ ಇಂಜಿನಿಯರ್​ಗಳು, ಆಶಾ ಕಾರ್ಯಕರ್ತೆಯರು, ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. | ಬಿ.ಎಚ್. ಅನಿಲ್​ಕುಮಾರ್ ಬಿಬಿಎಂಪಿ ಆಯುಕ್ತhttps://www.vijayavani.net/vijayavani-phone-in-2/