ಜಿಲ್ಲೆ

5 ಕಡೆ ಕರೊನಾ ಲಸಿಕೆ ತಾಲೀಮು, ಜಿಲ್ಲಾಧಿಕಾರಿ ರವೀಂದ್ರ ಮಾಹಿತಿ, ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ಸಿದ್ಧತೆ ಪರಿಶೀಲನೆ

Bengaluru Rural

ದೇವನಹಳ್ಳಿ: ಜಿಲ್ಲೆಯ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 9,347 ಸಿಬ್ಬಂದಿಗೆ ಮೊದಲ ಹಂತದಲ್ಲಿ ಕರೊನಾ ಲಸಿಕೆ ವಿತರಣೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಪಟ್ಟಣದ ಆಕಾಶ್ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ಲಸಿಕೆ ತಾಲೀಮು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲಸಿಕೆ ಬಂದ ನಂತರ ಹೆಸರು ನೋಂದಾಯಿಸಿಕೊಂಡವರಿಗೆ ಮೊದಲ ಆದ್ಯತೆಯಲ್ಲಿ ನೀಡಲಾಗುವುದು ಎಂದರು.

ಜಿಲ್ಲೆಯ 5 ಕಡೆಗಳಲ್ಲಿ ತಾಲೀಮು ನಡೆಸಲಾಗುತ್ತಿದ್ದು, ಈ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುಳಾದೇವಿ ಮಾತನಾಡಿ, ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಹಾಗೂ ಸರ್ಕಾರದಿಂದ ಸೂಚನೆಯ ಮೇರೆಗೆ ತಾಲೀಮು ನಡೆಸಲಾಗುತ್ತಿದ್ದು, ಮೊದಲ ಹಂತದ ಲಸಿಕೆ ವಿತರಣೆಗೆ ಎಲ್ಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ ಎಂದರು.

ವ್ಯಾಕ್ಸಿನ್ ನೀಡುವ ಕೊಠಡಿ, ಅದರ ಪ್ರಭಾವ ಪರೀಕ್ಷೆ ಮಾಡುವ ಕೊಠಡಿ, ಬೇಕಾಗುವ ಸಿಬ್ಬಂದಿಯನ್ನು ಆಣಿಗೊಳಿಸಲಾಗುತ್ತಿದೆ. ಮೊದಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದರು.

ಲಸಿಕೆ ಪಡೆಯಲು ಹೆಸರು ನೋಡದಣಿಗೂ ಅವಕಾಶ ಮಾಡಿಕೊಡಲಾಗಿದೆ. ಪೊಲೀಸರು, ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಕೊರೊನಾ ನಿಯಂತ್ರಣದಲ್ಲಿ ಕಾರ್ಯಪ್ರವೃತ್ತರಾಗಿರುವವರಿಗೆ ಲಸಿಕೆ ದೊರೆಯಲಿದೆ ಎಂದು ತಿಳಿಸಿದರು.

ಇದೇ ಸಮಯದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಇ.ಸಿ.ಚೇತನ್ ಎಂಬಬುವರಿಗೆ ತಾಲೀಮು ಚಿಕಿತ್ಸೆ ನೀಡಲಾಯಿತು. ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಕೀಲಾ, ವೈದ್ಯರಾದ ಡಾ.ಅಮರ್, ಡಾ.ಸುನಿಲ್, ಮುರಳಿ, ತಾಲೂಕು ವೈದ್ಯಾಧಿಕಾರಿ ಡಾ.ಪಿ.ಕೆ.ಸಂಜಯ್ ಮತ್ತಿತರರಿದ್ದರು.