ಜಿಲ್ಲೆ

8 ರಿಂದ ಪಿಎಚ್‍ಸಿಗಳಲ್ಲೇ ಕರೊನಾ ವ್ಯಾಕ್ಸಿನ್

ಚಿಕ್ಕಮಗಳೂರು: ಮೂರನೇ ಹಂತದ ಕರೊನಾ ಲಸಿಕೆ ಅಭಿಯಾನ ಆರಂಭವಾದ ಬೆನ್ನಲ್ಲೇ ಆರೋಗ್ಯ ಇಲಾಖೆ ನಿರ್ದೇಶನದಂತೆ ಮಾ.8ರಿಂದ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿ ಹಂತದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ದೊರೆಯಲಿದೆ ಎಂದು ಡಿಎಚ್‍ಒ ಡಾ. ಎಸ್.ಎನ್.ಉಮೇಶ್ ತಿಳಿಸಿದ್ದಾರೆ.

ಗ್ರಾಮಾಂತರದಲ್ಲಿ ಜಾಗೃತಿ:

ಸಾರ್ವಜನಿಕರು ಆಧಾರ್ ಕಾರ್ಡ್ ಅಥವಾ ಸರ್ಕಾರ ಗೊತ್ತುಪಡಿಸಿದ ಭಾವಚಿತ್ರ ಹೊಂದಿರುವ ಯಾವುದಾದರೂ ದಾಖಲೆ ಹಾಜರುಪಡಿಸಿ ಲಸಿಕೆ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಗ್ರಾಮ ಮಟ್ಟದಲ್ಲಿ ಆಶಾ, ಆರೋಗ್ಯ ಕಾರ್ಯಕರ್ತೆಯರು ಜಾಗೃತಿ ಮೂಡಿಸುತ್ತಿದ್ದಾರೆ. ಮಾ.1ರಿಂದ ಆರಂಭವಾದ ಮೂರನೇ ಹಂತದ ಅಭಿಯಾನದಲ್ಲಿ ಮಾ.3ರ ವೇಳೆಗೆ ಒಟ್ಟು 575 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ. ಇವರಲ್ಲಿ 60 ವರ್ಷ ಮೇಲ್ಪಟ್ಟ 509 ಹಾಗೂ 45-59 ವಯೋಮಿತಿಯ 66 ಜನ ಲಸಿಕೆ ಪಡೆದುಕೊಂಡಿದ್ದಾರೆ.

ಲಸಿಕೆಗೆ ಹಿಂಜರಿಕೆ ಅನಗತ್ಯ:

ಈಗಾಗಲೇ ತಾಲೂಕು ಆಸ್ಪತ್ರೆಗಳು, ನಗರದ ಹೋಲಿಕ್ರಾಸ್ ಮತ್ತು ಕೆಆರ್‍ಎಸ್ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ ಎಂದಿದ್ದಾರೆ. ದೂರದ ಊರುಗಳಿಂದ ತಾಲೂಕು ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಲು ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದರು. ಇದನ್ನು ಮನಗಂಡು ಇದೀಗ ಹೋಬಳಿ ಹಂತದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.