ಜಿಲ್ಲೆ

ಜಿಲ್ಲೆಯಲ್ಲಿ ಕರೊನಾ ಲಸಿಕೆ ಕೊರತೆ ಇಲ್ಲ: ಸಚಿವ ಈಶ್ವರಪ್ಪ ಸ್ಪಷ್ಟನೆ

Shivamogga

ಶಿವಮೊಗ್ಗ: ಜಿಲ್ಲೆಯಲ್ಲಿ ಕರೊನಾ ನಿರೋಧಕ ಲಸಿಕೆಗೆ ಕೊರತೆ ಇಲ್ಲ. ಹಾಗಾಗಿ ಸಾರ್ವಜನಿಕರಿಗೆ ಲಸಿಕೆ ಪಡೆಯಲು ಯಾವುದೇ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಶುಕ್ರವಾರ ಕರೊನಾ ಸೋಂಕಿನ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಲಸಿಕೆ ಕೊರತೆಯಿಂದ ಗಂಭೀರ ಸ್ವರೂಪ ಪಡೆದುಕೊಳ್ಳಬಾರದು ಎಂದರು.

ಮೊದಲ ಹಂತದಲ್ಲಿ 5 ಲಕ್ಷ ಹಾಗೂ 2ನೇ ಹಂತದಲ್ಲಿ 5 ಲಕ್ಷ ಡೋಸ್ ಲಸಿಕೆ ಅಗತ್ಯವಿದ್ದು ಈಗಾಗಲೇ ಮೊದಲ ಹಂತದಲ್ಲಿ 1.70 ಲಕ್ಷ ಹಾಗೂ 2ನೇ ಹಂತದಲ್ಲಿ 18 ಸಾವಿರ ಡೋಸ್ ಲಸಿಕೆ ಹಾಕಲಾಗಿದೆ. ಇನ್ನೂ ಸುಮಾರು 8 ಲಕ್ಷ ಡೋಸ್ ಲಸಿಕೆ ಅಗತ್ಯವಿದ್ದು ಕೊರತೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ಯಾರೋಬ್ಬರೂ ಲಸಿಕೆ ಇಲ್ಲವೆಂದು ಪದೇ ಪದೇ ಆಸ್ಪತ್ರೆಗಳಿಗೆ ಅಲೆದಾಡುವ ಸ್ಥಿತಿ ಬರಬಾರದು. ಲಸಿಕೆ ಪಡೆಯಲು ಬಂದವರಿಗೆ ಲಸಿಕೆ ಸಿಗದೇ ಇದ್ದರೆ ಸ್ಥಳದಲ್ಲೇ ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿ ಯಾವ ದಿನ ಬರಬೇಕೆಂದು ತಿಳಿಸಿದರೆ ಲಸಿಕೆ ಕೊರತೆ ಬಗ್ಗೆ ಅಪಪ್ರಚಾರ ಆಗುವುದಿಲ್ಲ. ಇದು ಸಾಧ್ಯವಾದರೆ ಜಿಲ್ಲೆಯಲ್ಲಿ ಲಸಿಕೆ ಕೊರತೆ ಇದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡುವುದಿಲ್ಲ ಎಂದು ಹೇಳಿದರು.

ಡಿಸಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ, ಸಿಮ್ಸ್ ನಿರ್ದೇಶಕ ಡಾ. ಒ.ಎಸ್.ಸಿದ್ಧಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್, ಜಿಲ್ಲಾ ಸರ್ಜನ್ ಡಾ. ಜಿ.ಶ್ರೀನಿವಾಸ್, ಡಾ. ಶಮಾ ಸೇರಿ ಎಲ್ಲ ತಾಲೂಕುಗಳ ಟಿಎಚ್‌ಒಗಳು, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.