ಮಂಗಳೂರು/ಉಡುಪಿ: ದಕ್ಷಿಣ ಕನ್ನಡದಲ್ಲಿ ಭಾನುವಾರ 334 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆರು ಮಂದಿ ಮೃತಪಟ್ಟಿದ್ದು, ಆಸ್ಪತ್ರೆ, ಮನೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 213 ಮಂದಿ ಗುಣವಾಗಿದ್ದಾರೆ.
ಹೊಸ ಪಾಸಿಟಿವ್ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 68, ಐಎಲ್‌ಐ 138, ಸಾರಿ 16 ಹಿನ್ನೆಲೆ ಹೊಂದಿದ್ದು, 112 ಪ್ರಕರಣಗಳಲ್ಲಿ ಮೂಲ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಈ ತನಕ ದಾಖಲಾದ ಪಾಸಿಟಿವ್ ಪ್ರಕರಣಗಳು ಒಟ್ಟು 12,443. ಇದರಲ್ಲಿ 9422 ಮಂದಿ ಗುಣವಾಗಿದ್ದು, 2665 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 356.
ಉಡುಪಿ ಜಿಲ್ಲೆಯಲ್ಲಿ ಭಾನುವಾರ 254 ಮಂದಿಯಲ್ಲಿ ಕರೊನಾ ಪಾಸಿಟಿವ್ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 11,506ಕ್ಕೆ ಏರಿಕೆಯಾಗಿದೆ. 195 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.
1029 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. ಇನ್ನೂ 240 ಮಂದಿಯ ವರದಿ ಬರಲು ಬಾಕಿ ಇದೆ. 2623 ಸಕ್ರಿಯ ಪ್ರಕರಣಗಳಿವೆ. ಕಾಸರಗೋಡು ಜಿಲ್ಲೆಯ 159 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.