ಚಿಕ್ಕಮಗಳೂರು: ದಿನೇ ದಿನೇ ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಿರಿಶ್ರೇಣಿಯಲ್ಲಿ ನಿರಂತರವಾಗಿ ಕರೊನಾ ತಪಾಸಣೆ ನಡೆಸುವಂತೆ ಚೆಕ್‍ಪೋಸ್ಟ್ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ನಗರದ ವಾರ್ತಾ ಭವನದ ಕೋವಿಡ್ ವಾರ್ ರೂಂಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಟ್ರೇಸಿಂಗ್, ಟ್ರ್ಯಾಕಿಂಗ್, ಟ್ರೀಟ್‍ಮೆಂಟ್‍ಗೆ ಮಹತ್ವ:
ಕೇಂದ್ರ ಸರ್ಕಾರದ ಸೂಚನೆಯಂತೆ ಟ್ರೇಸಿಂಗ್, ಟ್ರ್ಯಾಕಿಂಗ್ ಮತ್ತು ಟ್ರೀಟ್‍ಮೆಂಟ್‍ಗೆ ಹೆಚ್ಚು ಮಹತ್ವ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿಗಳ ಪಾಲನೆಯೊಂದಿಗೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಿಸ್ಥಿತಿ ಕೈಮೀರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ನಾಲ್ಕೈದು ದಿನಗಳಿಂದ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಕರೊನಾ ನಿಯಂತ್ರಣ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ. ತುರ್ತು ಸೇವೆ ಅಗತ್ಯ ಇರುವವರು, ಆಸ್ಪತ್ರೆಗೆ ದಾಖಲಾದವರಿಗೆ ಮೊದಲ ಆದ್ಯತೆಯಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಉಳಿದಂತೆ ಸೋಂಕಿತರು ಮತ್ತು ಅವರ ಪ್ರಾಥಮಿಕ ಸಂಪರ್ಕಿತರ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಯಮ ಪಾಲಿಸದಿದ್ದಲ್ಲಿ ದಂಡ:
ತಾಲೂಕುಗಳ ಅವಶ್ಯಕತೆಗೆ ಅನುಸಾರವಾಗಿ ಕಡೂರು ಹಾಗೂ ತರೀಕೆರೆಗೆ ತಲಾ ಮೂರು ಮಾರ್ಷಲ್ ತಂಡಗಳು ಹಾಗೂ ಜನಸಂಖ್ಯೆ ಕಡಿಮೆ ಇರುವ ಕಡೆ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಅಗತ್ಯ ಮುಂಜಾಗ್ರತೆ ಕೈಗೊಳ್ಳಲು ತಹಸೀಲ್ದಾರರಿಗೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ಮೊದಲ ಹಂತದಲ್ಲಿ ಸೂಕ್ತ ತಿಳಿವಳಿಕೆ ನೀಡಿ ಅದನ್ನು ಪಾಲಿಸದಿದ್ದಲ್ಲಿ ದಂಡ ವಿಧಿಸಬೇಕಾಗುತ್ತದೆ. ಪೊಲೀಸ್ ಇಲಾಖೆ ಮತ್ತು ನಗರಸಭೆ ಈ ಹಿಂದಿನಂತೆ ತಂಡಗಳನ್ನು ಆಧರಿಸಿ ಕರೊನಾ ನಿಯಂತ್ರಣ ಕಾರ್ಯದಲ್ಲಿ ಭಾಗವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಲೆ ಮುಚ್ಚಲು ನಿರ್ದೇಶನ:
ಬಸವನಹಳ್ಳಿ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ 26 ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಸದ್ಯ ಶಾಲೆ ಮುಚ್ಚಲು ಸೂಚಿಸಲಾಗಿದೆ ಎಂದು ಡಿಸಿ ಕೆ.ಎನ್.ರಮೇಶ್ ತಿಲಿಸಿದರು. ಇದುವರೆಗೆ ಒಟ್ಟು 581 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 26ರ ಹೊರತಾಗಿ ಉಳಿದವು ನೆಗೆಟಿವ್ ಬಂದಿವೆ ಎಂದರು. ಖಾಸಗಿ ಶಾಲೆಗಳಲ್ಲಿ ಶುಲ್ಕ ಸಂಗ್ರಹಕ್ಕೆ ಒತ್ತಾಯಿಸಲಾಗುತ್ತಿದೆ ಎನ್ನುವ ದೂರಿಗೆ ಪ್ರತಿಕ್ರಿಯಿಸಿದ ಅವರು, ಶುಲ್ಕ ನೀಡದಿದ್ದರೆ ಶಿಕ್ಷಕರಿಗೆ ಸಂಬಳ ಇಲ್ಲದಂತಾಗುತ್ತದೆ. ಕರೊನಾ ಸಂದರ್ಭ ಶುಲ್ಕ ಭರಿಸಲು ಮಕ್ಕಳ ಪಾಲಕರಿಗೂ ತೊಂದರೆಯಾಗುತ್ತದೆ. ಈ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲೇ ತೀರ್ಮಾನವಾಗಬೇಕಿದೆ ಎಂದರು.