ವೇಣುವಿನೋದ್ ಕೆ.ಎಸ್ ಮಂಗಳೂರು
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಒಂದು ವಾರ ಕಾಲ ನಡೆಯುತ್ತಿರುವ ಕೋವಿಡ್ ಪರೀಕ್ಷಾ ಅಭಿಯಾನಕ್ಕೆ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗುತ್ತಿದೆ.
ಕೋವಿಡ್ ಈಗಾಗಲೇ ಸಮುದಾಯದಲ್ಲಿ ಪಸರಿಸಿರುವ ಸಾಧ್ಯತೆ ಹೆಚ್ಚಿರುವುದರಿಂದ ಆದಷ್ಟೂ ಗ್ರಾಮಗಳಲ್ಲಿ ಪಾಸಿಟಿವ್ ಇರುವವರನ್ನು ಪತ್ತೆ ಮಾಡಿ ರೋಗ ಹರಡುವಿಕೆ ಕಡಿಮೆಗೊಳಿಸುವುದು ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಈ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಇದನ್ನು ಕಡ್ಡಾಯ ಮಾಡಿಲ್ಲವಾದರೂ ರೋಗ ಲಕ್ಷಣ, ಶೀತ ಜ್ವರ ಇರುವಂಥವರನ್ನು ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಗುರುತಿಸಿ ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗಿದ್ದು ಇದುವರೆಗೆ ಸುಮಾರು 10,151 ಮಂದಿಯ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮೂಲಕ ಈ ಪರೀಕ್ಷೆ ಕೈಗೊಳ್ಳಲಾಗುತ್ತಿದೆ.
ಸಾಮಾನ್ಯವಾಗಿ ಎಲ್ಲರಿಗೂ ರ‌್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲಾಗುತ್ತಿದೆ. ಒಂದು ವೇಳೆ ಜನರಿಗೆ ರೋಗ ಲಕ್ಷಣಗಳಿದ್ದೂ ನೆಗೆಟಿವ್ ಬಂದರೆ ಮಾತ್ರ ಅಂಥವರ ಸ್ಯಾಂಪಲ್ ಅನ್ನು ಆರ್‌ಟಿ-ಪಿಸಿಆರ್ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. 10,151 ರ‌್ಯಾಪಿಡ್ ಟೆಸ್ಟ್ ನಡೆಸಿದ್ದರೆ ಅನುಮಾನ ಇರುವಂಥ 3432 ಮಂದಿಗೆ ಪಿಸಿಆರ್ ಟೆಸ್ಟ್ ಕೂಡ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಬೇಕಿದ್ದರೆ ಮತ್ತೊಂದು ಹಂತದ ಪರೀಕ್ಷೆ
ಸದ್ಯದ ನಿರ್ಧಾರದಂತೆ ಒಂದು ವಾರ ಈ ಪರೀಕ್ಷೆ ನಡೆಸಲಾಗುವುದು. ಏಕಕಾಲಕ್ಕೆ ಪರೀಕ್ಷೆ ನಡೆಸಲು ಬೇಕಾದ ಮಾನವ ಸಂಪನ್ಮೂಲ ನಮ್ಮಲ್ಲಿಲ್ಲ. ಅಲ್ಲಲ್ಲಿ ನಡೆಸಲಾಗುತ್ತಿದೆ. ಲ್ಯಾಬ್ ಟೆಕ್ನಿಶಿಯನ್‌ಗಳು ಪರೀಕ್ಷೆ ನಡೆಸುತ್ತಿದ್ದಾರೆ. ಎಲ್ಲಿ ಕಡಿಮೆ ಟೆಸ್ಟ್ ನಡೆದಿದೆಯೋ ಅಲ್ಲಿ ಅಗತ್ಯವಿದ್ದರೆ ಎರಡನೇ ಹಂತದಲ್ಲಿ ಮತ್ತೆ ಕೋವಿಡ್ ಪರೀಕ್ಷಾ ಶಿಬಿರ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್.ಸೆಲ್ವಮಣಿ ‘ವಿಜಯವಾಣಿ’ಗೆ ತಿಳಿಸಿದರು.
ಶೇ.6 ಮಂದಿಗೆ ಪಾಸಿಟಿವ್
ಇದುವರೆಗೆ 10,151 ರ‌್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗಿದು, ಅದರಲ್ಲಿ 621 ಮಂದಿಗೆ ಪಾಸಿಟಿವ್ ಬಂದಿದೆ. ಅನುಮಾನ ಇರುವ 3432 ಮಂದಿಯ ಸ್ಯಾಂಪಲ್ ವರದಿ ಬರಬೇಕಿದೆ. ಬಂದಿರುವುದರಲ್ಲಿ ಅಧಿಕ ಮಂಗಳೂರು ತಾಲೂಕಿನಿಂದ ಆಗಿದ್ದರೆ ಕನಿಷ್ಠ ಸುಳ್ಯ ತಾಲೂಕಿನಿಂದ. ಮಂಗಳೂರಿನಲ್ಲಿ 288 ಪಾಸಿಟಿವ್ ಬಂದಿದ್ದರೆ ಸುಳ್ಯದಲ್ಲಿ ಕನಿಷ್ಠ ಪಾಸಿಟಿವ್ 62 ಬಂದಿದೆ.
ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಮಾಜಿ ಸದಸ್ಯರಿಂದ, ಮಾಜಿ ಅಧ್ಯಕ್ಷರಿಂದ ಕರೆಗಳು ಬರುತ್ತಿದ್ದು, ಶೀತ, ಜ್ವರ ಇರುವವರು ಎಲ್ಲಿಗೆ ಹೋಗಬೇಕು, ಪರೀಕ್ಷೆ ಎಲ್ಲಿ ಮಾಡಿಸಬೇಕು ಎಂಬಂಥ ಕರೆಗಳು ಬರುತ್ತಿದ್ದವು. ಹಾಗಾಗಿ ಎಲ್ಲ ಕಡೆಯಲ್ಲೂ ಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಅದರಂತೆ ಸದ್ಯ ನಿರೀಕ್ಷೆಗೆ ತಕ್ಕಂತೆ ಪರೀಕ್ಷೆಗಳು ನಡೆಯುತ್ತಿವೆ
ಡಾ.ಆರ್.ಸೆಲ್ವಮಣಿ, ದ.ಕ. ಜಿಲ್ಲಾ ಪಂಚಾಯಿತಿ ಸಿಇಒ
ಸಾಮುದಾಯಿಕವಾಗಿ ಕೋವಿಡ್ ಪಸರಿಸಿರುವುದು ನಿಶ್ಚಿತ. ಇದು ಇನ್ನಷ್ಟು ಹಬ್ಬದಂತೆ ನೋಡಿಕೊಳ್ಳಬೇಕಿದೆ. ಮೊದಲೇ ಪಾಸಿಟಿವ್ ಆದವರನ್ನು ಗುರುತಿಸಿ ಪ್ರತ್ಯೇಕಿಸುವುದರಿಂದ ಸಾವಿನ ಸಂಖ್ಯೆ ನಿಯಂತ್ರಿಸಬಹುದು. ಅದಕ್ಕಾಗಿ ಕೋವಿಡ್ ಪರೀಕ್ಷೆ ಎಲ್ಲ ಕಡೆ ನಡೆಸುತ್ತಿದ್ದೇವೆ.
ಡಾ.ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ