ಜಿಲ್ಲೆ

ವಿಮಾನ ಪ್ರಯಾಣಿಕರ ‘ತ್ರಿ’ವರ್ಗೀಕರಣ

Dakshina Kannada

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಲು ಉದ್ದೇಶಿಸಲಾಗಿದ್ದು ಪ್ರಯಾಣಿಕರನ್ನು ಮೂರು ಹಂತದಲ್ಲಿ ವರ್ಗೀಕರಿಸಲಾಗುತ್ತಿದೆ. ಬುಧವಾರ ರಾತ್ರಿಯಿಂದಲೇ ಈ ವ್ಯವಸ್ಥೆ ಕಾರ್ಯಗತಗೊಂಡಿದೆ, ಪ್ರಯಾಣಿಕರನ್ನು ಎ, ಬಿ, ಸಿ ಎಂದು ವರ್ಗೀಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಥರ್ಮಲ್ ತಪಾಸಣೆ ವೇಳೆ ರೋಗಲಕ್ಷಣ ಕಂಡು ಬಂದವರು ಎ ವರ್ಗಕ್ಕೆ ಸೇರುತ್ತಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಗಂಟಲಿನ ದ್ರವದ ಮಾದರಿ ಕಳುಹಿಸಿ, ಪ್ರತ್ಯೇಕ ವಾರ್ಡಲ್ಲಿ ಇರಿಸಲಾಗುತ್ತದೆ. ತಪಾಸಣೆ ವೇಳೆ ರೋಗಲಕ್ಷಣ ಇಲ್ಲದಿದ್ದರೂ ಅವರು 65 ವರ್ಷ ಮೇಲ್ಪಟ್ಟವರಾದರೆ, ಅಥವಾ ಯುವಕರಾಗಿದ್ದು ಅಸ್ತಮಾ, ಅಧಿಕ ಬಿಪಿ, ಕಿಡ್ನಿ ಸಮಸ್ಯೆ ಇತ್ಯಾದಿ ಆರೋಗ್ಯ ಸಮಸ್ಯೆ ಇದ್ದರೆ ಅವರನ್ನು ‘ಬಿ’ ವರ್ಗವಾಗಿ ಪರಿಗಣಿಸಲಾಗುತ್ತದೆ, ಅವರನ್ನು ಕಡ್ಡಾಯವಾಗಿ ಸರ್ಕಾರಿ ವ್ಯವಸ್ಥೆಯಲ್ಲೇ ಕ್ವಾರಂಟೈನ್ ವಾರ್ಡಿನಲ್ಲಿ ಇರಿಸಲಾಗುತ್ತಿದೆ. ಪ್ರಸ್ತುತ ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿನ ವಾರ್ಡನ್ನು ಇದಕ್ಕಾಗಿ ಬಳಸಲಾಗುತ್ತಿದೆ. ರೋಗಲಕ್ಷಣವಿಲ್ಲದ ಆರೋಗ್ಯವಂತ ಪ್ರಯಾಣಿಕರನ್ನು ಮನೆಯಲ್ಲಿಯೇ 14 ದಿನ ಇರುವಂತೆ ಸೂಚಿಸಲಾಗುತ್ತಿದೆ ಎಂದರು.

ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಜಂಟಿ ಆಯುಕ್ತ ಸಂತೋಷ್ ಕುಮಾರ್, ಅಪರ ಜಿಲ್ಲಾಧಿಕಾರಿ ರೂಪಾ ಸುದ್ದಿಗೋಷ್ಠಿಯಲ್ಲಿದ್ದರು.

ಸ್ಟಾಂಪಿಂಗ್ ಪ್ರಾರಂಭ

ವಿಮಾನ ಪ್ರಯಾಣಿಕರನ್ನು ತಪಾಸಣೆ ಮಾಡುವುದಲ್ಲದೆ ಮಾಹಿತಿಗಾಗಿ ಹಾಗೂ ವಿಚಾರದ ಗಂಭೀರತೆ ತಿಳಿಯುವುದಕ್ಕಾಗಿ ಕೈಗಳಿಗೆ ಸ್ಟಾಂಪಿಂಗ್ ಹಾಕುವ ಕಾರ್ಯ ಗುರುವಾರದಿಂದ ಪ್ರಾರಂಭವಾಗಿದೆ. ಇದನ್ನು ಜನರು ಶಿಕ್ಷೆ ಎಂಬಂತೆ ತಿಳಿಯದೆ ಸರ್ವರ ಹಿತಕ್ಕಾಗಿ ಎಂಬುದನ್ನು ಅರಿತುಕೊಳ್ಳಬೇಕು ಎಂದು ಡಿಸಿ ಮನವಿ ಮಾಡಿದರು.

ಏರ್‌ಪೋರ್ಟ್ ಟು ತಲಪಾಡಿ ಬಸ್

ವಿಮಾನದಲ್ಲಿ ಆಗಮಿಸುವವರಲ್ಲಿ ಶೇ.50ರಷ್ಟು ಮಂದಿ ಕೇರಳದವರೇ ಆಗಿದ್ದಾರೆ, ಹಾಗಾಗಿ ಕಾಸರಗೋಡಿನ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ, ಬರುವವರನ್ನು ಗಡಿಭಾಗದವರೆಗೂ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ತಲಪಿಸಲಾಗುತ್ತಿದೆ ಎಂದು ಡಿಸಿ ತಿಳಿಸಿದರು. ಕೇರಳ ಮೂಲದ ಪ್ರಯಾಣಿಕರು ಮಂಗಳೂರಿಗೆ ಬಂದರೆ ಅವರು ಹೋದ ಕಡೆಗಳಲ್ಲೆಲ್ಲ ನಿಯಂತ್ರಣ ಕಷ್ಟ, ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಎಲ್ಲರನ್ನೂ ಗಡಿಭಾಗ ತಲಪಾಡಿವರೆಗೂ ಬಿಡಲಾಗುತ್ತದೆ. ಅಲ್ಲಿ ಕೇರಳ ಆರೋಗ್ಯ ಇಲಾಖೆಯ ಹೆಲ್ತ್ ಡೆಸ್ಕ್ ಇದ್ದು, ಅವರು ತಪಾಸಣೆ ಮಾಡಿ ಸೂಕ್ತ ವ್ಯವಸ್ಥೆ ಮಾಡುತ್ತಾರೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಸ್ವಂತ ವಾಹನದಲ್ಲಿ ಅವರು ಹೋಗುವುದಕ್ಕೆ ಅವಕಾಶವಿಲ್ಲ ಎಂದರು.

ಕೆಲವು ಸರ್ಕಾರಿ ಸೇವೆ ಸ್ಥಗಿತ

ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ನಿರ್ದೇಶನದ ಮೇರೆಗೆ ಮಾ.31ರವರೆಗೆ ಕೆಲವು ಸರ್ಕಾರಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ. ಸ್ಪಂದನ, ಆಧಾರ್, ಡಿಎಲ್, ಎಲ್‌ಎಲ್‌ಆರ್, ಸ್ಥಿರಾಸ್ತಿ ನೋಂದಣಿ, ಸ್ಥಳೀಯಾಡಳಿತ ಸಂಸ್ಥೆಗಳ ಕೆಲವು ಸೇವೆಗಳು, ವಿವಿಧ ಇಲಾಖೆಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಯಾವುದೇ ಸರ್ಕಾರಿ ಕಚೇರಿ ಬಂದ್ ಆಗುವುದಿಲ್ಲ. ಅತಿ ತುರ್ತಾದ ಕೆಲಸಗಳನ್ನು ಮಾತ್ರ ಮಾಡಲು ಸೂಚಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಅಗತ್ಯ ಇಲ್ಲದಿದ್ದರೆ ಸರ್ಕಾರಿ ಕಚೇರಿಗಳಿಗೆ ತೆರಳಬಾರದು ಎಂದು ಸಿಂಧೂ ರೂಪೇಶ್ ಮನವಿ ಮಾಡಿದರು.

ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

ಕೊಡಗು ಹಾಗೂ ಪಕ್ಕದ ರಾಜ್ಯ ಕೇರಳದಿಂದ ದ.ಕ. ಜಿಲ್ಲೆಗೆ ಸೋಂಕು ಹರಡುವುದನ್ನು ತಪ್ಪಿಸಲು ಚೆಕ್‌ಪೋಸ್ಟ್‌ಗಳಲ್ಲಿ ತಂಡಗಳನ್ನು ನಿಯೋಜಿಸಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಜಿಲ್ಲೆಗೆ ಬರುವ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್‌ಗೆ ಒಳಪಡಿಸಿಯೇ ಬಿಡಲಾಗುತ್ತಿದೆ. ಗುರುವಾರದಿಂದಲೇ ಇದು ಆರಂಭವಾಗಿದೆ. ಬಸ್ ಹಾಗೂ ಖಾಸಗಿ ವಾಹನದಲ್ಲಿ ಬರುವವರನ್ನೂ ತಪಾಸಣೆ ಮಾಡಲಾಗುತ್ತಿದೆ. ತಲಪಾಡಿ ಮಾತ್ರವಲ್ಲದೆ, ಸುಳ್ಯದ ಜಾಲ್ಸೂರು ಮತ್ತು ಕಲ್ಲುಗುಂಡಿಯಲ್ಲೂ ತಪಾಸಣೆ ಕೈಗೊಳ್ಳಲಾಗಿದೆ. ಕರೊನಾ ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಮಂಗಳೂರಿನ ಆಸ್ಪತ್ರೆಗೆ ರವಾಸಲಾಗುವುದು.

ಸ್ಟಾಂಪಿಂಗ್‌ನಲ್ಲೇನಿದೆ?

ವಿಮಾನ ನಿಲ್ದಾಣಕ್ಕೆ ಬಂದು ತಪಾಸಣೆಗೊಳಗಾಗಿ ಹೋಗುವವರ ಕೈಗೆ ಸುರಕ್ಷತೆಯ ದೃಷ್ಟಿಯಿಂದ ಅಳಿಸಲಾಗದ ಶಾಯಿಯಿಂದ (ಚುನಾವಣೆ ಮಾದರಿ)ಮುದ್ರೆ ಹಾಕಲಾಗುತ್ತಿದೆ. ಮೇಲ್ಭಾಗದಲ್ಲಿ ಪ್ರೌಡ್ ಟು ಪ್ರೊಟೆಕ್ಟ್ ಕರ್ನಾಟಕ ಎಂದು ಬರೆಯಲಾಗಿದೆ. ಕೆಳಗೆ ಆ ಪ್ರಯಾಣಿಕ ಎಷ್ಟು ದಿನಗಳ ವರೆಗೆ ಕ್ವಾರಂಟೈನ್ ಆಗಿರಬೇಕು ಎಂದು ನಮೂದಿಸಲಾಗಿದೆ. ಈ ಸೀಲ್ ಹಾಕಿದರೆ ಕೆಲವು ತಿಂಗಳ ಕಾಲ ತೊಳೆದರೆ ಅಳಿಯದು. ಹಾಗಾಗಿ ಆತ ಒಂದು ವೇಳೆ ಕ್ವಾರಂಟೈನ್ ವೇಳೆ ಹೊರಗೆ ಬಂದರೂ ಕಂಡು ಹಿಡಿಯುವುದು ಸಾಧ್ಯವಾಗಲಿದೆ.

ಏರ್‌ಪೋರ್ಟ್‌ನಲ್ಲಿ ವಿಶೇಷ ಅಧಿಕಾರಿ

ಕಾಸರಗೋಡು: ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ತಿಳಿಸಿದರು. ಕರೊನಾ ನಿಯಂತ್ರಣ ಕೊಠಡಿಯಲ್ಲಿ ಗುರುವಾರ ಮಾಹಿತಿ ನೀಡಿದ ಅವರು, ವಿದೇಶದಿಂದ ಊರಿಗೆ ಬರುವವರನ್ನು ವಿಮಾನ ನಿಲ್ದಾಣದಿಂದ ಕರ್ನಾಟಕ ಸರ್ಕಾರವೇ ಪ್ರತ್ಯೇಕ ವಾಹನದಲ್ಲಿ ತಲಪಾಡಿವರೆಗೆ ಕರೆತರುತ್ತದೆ. ಅಲ್ಲಿ ಅವರನ್ನು ಪ್ರತ್ಯೇಕ ಆರೋಗ್ಯ ತಪಾಸಣೆಗೆ ಒಳಪಡಿಸಿ, ರೋಗಲಕ್ಷಣ ಇರುವವರನ್ನು ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆತರಲಾಗುವುದು. ರೋಗ ಲಕ್ಷಣ ಇಲ್ಲದವರನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಾಸರಗೋಡಿಗೆ ಕಳುಹಿಸಲಾಗುವುದು. ತಲಪಾಡಿಯಿಂದ ಖಾಸಗಿ ವಾಹನದಲ್ಲಿ ಊರಿಗೆ ತೆರಳಲು ಇಚ್ಛಿಸುವವರು ತಲಪಾಡಿ ಕೌಂಟರ್‌ನಲ್ಲಿ ದೃಢೀಕರಣ ಪತ್ರ ಸಲ್ಲಿಸಬೇಕಾಗುತ್ತದೆ ಎಂದರು.

ಸಾರಿಗೆಗೂ ಕರೊನಾ ಗ್ರಹಣ

ಮಂಗಳೂರು: ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಪ್ರಯಾಣವನ್ನು ಮೊಟಕುಗೊಳಿಸಿದ್ದು, ಕರಾವಳಿಯ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀಡಿದೆ.

ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರಿಂದ ಕೆಲವು ರೈಲುಗಳ ಸೇವೆ ರದ್ದುಗೊಳಿಸಲಾಗಿದೆ. ನಂ.12223 ಲೋಕಮಾನ್ಯ ತಿಲಕ್ ಟರ್ಮಿನಸ್-ಎರ್ನಾಕುಲಂ ಜಂಕ್ಷನ್ ತುರಂತ್ ಸಾಪ್ತಾಹಿಕ ರೈಲು ಮಾ.21, 24, 28 ಮತ್ತು 31 ಹಾಗೂ ನಂ. 12224 ಎರ್ನಾಕುಲಂ ಜಂಕ್ಷನ್ ಲೋಕಮಾನ್ಯ ತಿಲಕ್ ಟರ್ಮಿನಸ್ ತುರಂತ್ ಸಾಪ್ತಾಹಿಕ ರೈಲು ಮಾ.22, 25, 29 ಮತ್ತು ಏ.1ರಂದು ಸಂಚಾರ ರದ್ದುಗೊಳಿಸಲಾಗಿದೆ.

ನಂ.10215 ಮಡಗಾಂವ್ ಜಂಕ್ಷನ್-ಎರ್ನಾಕುಲಂ ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮಾ.22 ಮತ್ತು 29ರಂದು ಹಾಗೂ 10216 ಎರ್ನಾಕುಲಂ ಜಂಕ್ಷನ್-ಮಡಗಾಂವ್ ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮಾ.23 ಮತ್ತು 30ರಂದು ರದ್ದುಗೊಂಡಿದೆ.

ನಂ.22609 ಮಂಗಳೂರು ಸೆಂಟ್ರಲ್-ಕೊಯಮತ್ತ್ತೂರು ಇಂಟರ್‌ಸಿಟಿ ಸೂಪರ್ ಾಸ್ಟ್ ಎಕ್ಸ್‌ಪ್ರೆಸ್ ರೈಲು ಮಾ.20ರಿಂದ 31ರವರೆಗೆ ಹಾಗೂ ನಂ. 22610 ಕೊಯಮತ್ತೂರು-ಮಂಗಳೂರು ಸೆಂಟ್ರಲ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮಾ.21ರಿಂದ ಏ.1ರವರೆಗೆ ರದ್ದುಗೊಳಿಸಲಾಗಿದೆ.

ನಂ.16630 ಸಂಖ್ಯೆಯ ಮಂಗಳೂರು ಸೆಂಟ್ರಲ್-ತಿರುವನಂತರಪುರಂ ಮಲಬಾರ್ ಎಕ್ಸ್‌ಪ್ರೆಸ್ ರೈಲು ಮಾ.20ರಿಂದ 31ರವರೆಗೆ ಹಾಗೂ ನಂ.16629 ತಿರುವನಂತಪುರಂ-ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ಮಾ.21ರಿಂದ ಏ.1ರವರೆಗೆ ರದ್ದುಗೊಳಿಸಲಾಗಿದೆ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ಕೆಎಸ್‌ಆರ್‌ಟಿಸಿ ಬಸ್ ಟ್ರಿಪ್ ಕಟ್

ಕುಂಬಳೆ/ಮಂಗಳೂರು: ಪ್ರಯಾಣಿಕರ ಸಂಖ್ಯೆಯಲ್ಲಿ ಉಂಟಾದ ಕೊರತೆ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕಡಿತಗೊಳಿಸಲಾಗಿದೆ.

ಕಾಸರಗೋಡು ಡಿಪೋದಿಂದ ವಿವಿಧೆಡೆಗೆ ಪ್ರತಿದಿನ ಸಂಚಾರ ನಡೆಸುತ್ತಿದ್ದ ಕೇರಳ ರಾಜ್ಯ ಸಾರಿಗೆ ನಿಗಮದ 92 ಬಸ್‌ಗಳ ಪೈಕಿ ಈಗ 20 ಬಸ್‌ಗಳ ಸಂಚಾರ ಕಡಿತಗೊಳಿಸಲಾಗಿದೆ. 72 ಬಸ್‌ಗಳು ಮಾತ್ರವೇ ಸಂಚರಿಸುತ್ತಿವೆ. ಕರ್ನಾಟಕ ರಾಜ್ಯ ಸಾರಿಗೆ ನಿಗಮದ 40 ಬಸ್‌ಗಳು ಕಾಸರಗೋಡಿಗೆ ಬರುತ್ತಿದ್ದು, ಈ ಪೈಕಿ 30 ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿದೆ. ಕಾಸರಗೋಡಿನಿಂದ ಮಂಗಳೂರು, ಸುಳ್ಯ, ಪುತ್ತೂರು ಭಾಗಕ್ಕೆ ಬಸ್‌ಗಳ ಸಂಚಾರವಿದೆ. ಆದರೆ ಧರ್ಮಸ್ಥಳ ಭಾಗಕ್ಕಿರುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾಸರಗೋಡು ಡಿಪೋದಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಗೆ ಈ ಹಿಂದೆ ಪ್ರತಿದಿನ 13 ಲಕ್ಷ ರೂ.ನಿಂದ 14 ಲಕ್ಷ ರೂ.ವರೆಗೆ ಹಣ ಸಂಗ್ರಹವಾಗುತ್ತಿತ್ತು. ಆದರೆ ಈ ಮೊತ್ತ ಈಗ 8 ಲಕ್ಷ ರೂ.ಗೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಕಾಸರಗೋಡಿಗೆ ಸಂಚರಿಸುವ ಬಸ್‌ಗಳ ಟ್ರಿಪ್‌ಗಳನ್ನು ಕಡಿಮೆ ಮಾಡಲಾಗಿದೆ. ಪ್ರತಿ 3 ನಿಮಿಷಕ್ಕೊಮ್ಮೆ ಒಂದು ಬಸ್ ಸಂಚರಿಸುತ್ತಿದ್ದಲ್ಲಿ, ಈಗ ಹದಿನೈದು ನಿಮಿಷಕ್ಕೆ ಒಂದು ಬಸ್ ಹೊರಡುತ್ತಿದೆ. ಎರಡು ಗಂಟೆಗೆ ಮೂವತ್ತು ಬಸ್ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿತ್ತು, ಈಗ ಎರಡು ಗಂಟೆಯಲ್ಲಿ 10-11 ಬಸ್ ಮಾತ್ರ ಹೋಗುತ್ತಿದೆ. ಮುಂದಿನ ಆದೇಶದವರೆಗೆ ಇದೇ ರೀತಿಯ ಸಂಚಾರ ವ್ಯವಸ್ಥೆ ಇರಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

22ರಿಂದ ಬ್ಯೂಟಿ ಪಾರ್ಲರ್‌ಗಳು ಬಂದ್

ಪುತ್ತೂರು: ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಪುತ್ತೂರು ವತಿಯಿಂದ ನಡೆದ ಸಭೆಯಲ್ಲಿ ತಾಲೂಕಿನ ಎಲ್ಲ ಬ್ಯೂಟಿ ಪಾರ್ಲರ್‌ಗಳನ್ನು ಮಾರ್ಚ್ 22ರಿಂದ 31ರ ತನಕ ಬಂದ್ ಮಾಡಲು ನಿರ್ಧರಿಸಲಾಗಿದೆ. ಕರೊನಾ ವೈರಸ್ ಹರಡುವ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪುತ್ತೂರು ತಾಲೂಕು ಸಮಿತಿ ವ್ಯಾಪ್ತಿಯಲ್ಲಿ ಬರುವ ಪುತ್ತೂರು, ಉಪ್ಪಿನಂಗಡಿ ಹಾಗೂ ವಿಟ್ಲದ ಪಾರ್ಲರ್‌ಗಳು ಬಂದ್ ಆಗಲಿವೆ. ಜನಾರೋಗ್ಯದ ದೃಷ್ಟಿಯಿಂದ ಅಸೋಸಿಯೇಶನ್ ಮೂಲಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲ ಪಾರ್ಲರ್‌ಗಳ ಮಾಲೀಕರು ಹಾಗೂ ಗ್ರಾಹಕರು ಸಹಕರಿಸುವಂತೆ ಪುತ್ತೂರು ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಪ್ರಕಟಣೆ ತಿಳಿಸಿದೆ.

ವಿಮಾನ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನದಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸುತ್ತಿರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಇಲಾಖೆಯ ಎಲ್ಲ ಸೂಚನೆಗಳನ್ನು ಪಾಲಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ(ಎಪಿಎಚ್‌ಒ)ಯನ್ನು ನಿಲ್ದಾಣದಲ್ಲಿ ಆರಂಭಿಸಲಾಗಿದ್ದು, ಆ ಮೂಲಕ ಶೇ.100ರಷ್ಟು ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಇನ್‌ಫ್ರಾರೆಡ್ ಥರ್ಮೋಮೀಟರ್‌ಗಳನ್ನು ದೇಹದ ಉಷ್ಣಾಂಶ ತಿಳಿಯಲು ಬಳಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರಿಗೆ ಮಾಹಿತಿ ನೀಡಲು, ಸ್ಟಾೃಂಡಿ, ಬ್ಯಾನರ್‌ಗಳನ್ನು ಆಯ್ದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದ್ದು, ಸ್ಯಾನಿಟೈಸರ್‌ಗಳನ್ನು ಇರಿಸಲಾಗಿದೆ.

ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಹೌಸ್‌ಕೀಪಿಂಗ್ ಸಿಬ್ಬಂದಿಗೆ ಕರೊನಾ ವೈರಸ್ ಯಾವ ರೀತಿ ಹರಡುತ್ತಿದೆ ಎನ್ನುವ ಕುರಿತಾಗಿ ಮಾಹಿತಿ ನೀಡಲಾಗಿದೆ. ಎಸ್ಕಲೇಟರ್,ಇಲವೇಟರ್, ಕನ್ವೇಯರ್ ಬೆಲ್ಟ್, ಟ್ರಾಲಿಗಳು, ರೈಲಿಂಗ್ ಮೊದಲಾದವುಗಳನ್ನು ಹೌಸ್‌ಕೀಪಿಂಗ್ ಸಿಬ್ಬಂದಿ ನಿರಂತರ ಸ್ವಚ್ಛಗೊಳಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿರುವ ವಿವಿಧ ಏಜೆನ್ಸಿ, ಗುತ್ತಿಗೆದಾರರಿಗೂ ತಮ್ಮ ಸಿಬ್ಬಂದಿಗೆ ಮಾಸ್ಕ್, ಕೈಕವಚ, ಸಾನಿಟೈಸರ್‌ಗಳನ್ನು ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕಾಸರಗೋಡಿನಲ್ಲಿ ಇನ್ನೊಂದು ಪಾಸಿಟಿವ್ ಪ್ರಕರಣ

ಕಾಸರಗೋಡು: ಕಾಸರಗೋಡಿನಲ್ಲಿ ಮತ್ತೊಂದು ಕರೋನಾ ದೃಢ ಪ್ರಕರಣ ಗುರುವಾರ ಪತ್ತೆಯಾಗಿದೆ.

ಕಾಸರಗೋಡು ನಿವಾಸಿಯೊಬ್ಬರಲ್ಲಿ ವೈರಸ್ ಸೋಂಕು ಪತ್ತೆಯಾಗಿರುವುದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಲವು ದಿನಗಳ ಹಿಂದೆ ಒಂದು ಪ್ರಕರಣ ಕಂಡುಬಂದಿದ್ದು, ಆ ವ್ಯಕ್ತಗೆ ಚಿಕಿತ್ಸೆ ಮುಂದುವರಿಯುತ್ತಿದೆ. ರಾಜ್ಯದಲ್ಲಿ 31,173ಮಂದಿಯ ಮೇಲೆ ನಿಗಾಯಿರಿಸಲಾಗಿದ್ದು, ಇವರಲ್ಲಿ 30936ಮಂದಿ ಅವರ ಮನೆಯಲ್ಲಿ ಹಾಗೂ 237ಮಂದಿಯನ್ನು ಆಸ್ಪತ್ರೆಯಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ಇಂದು ಹೊಸದಾಗಿ 64ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸದಾಗಿ 6103ಮಂದಿಯ ಮೇಲೆ ನಿಗಾಯಿರಿಸಲಾಗಿದ್ದು, 5155ಮಂದಿಯಲ್ಲಿ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಇವರನ್ನು ನಿಗಾದಿಂದ ಹೊರತುಪಡಿಸಲಾಗಿದೆ. 2921ಮಾದರಿಗಳನ್ನು ತಪಾಸಣೆಗಾಗಿ ಕಳುಹಿಸಲಾಗಿದ್ದು, 2342ರೋಗಬಾಧೆಯಿಲ್ಲ ಎಂದು ಖಚಿತಗೊಂಡಿದೆ. ಕೋವಿಡ್-19 ವೈರಸ್ ಖಾತ್ರಿ ಹಿನ್ನೆಲೆಯಲ್ಲಿ ಈ ವ್ಯಕ್ತಿ ಸಂಪರ್ಕಿಸಿರುವ 42 ಮಂದಿಯಲ್ಲಿ 34 ಮಂದಿಯನ್ನು ಗುರುತಿಸಲಾಗಿದ್ದು, ಇವರ ಮೇಲೆ ನಿಗಾಯಿರಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ನಡೆಯುತ್ತಿದೆ.

ಸೋಮೇಶ್ವರ ದೇವಳ ಬ್ರಹ್ಮಕಲಶ ಹತ್ತು ತಿಂಗಳು ಮುಂದೂಡಿಕೆ

ಉಳ್ಳಾಲ: ಕರೊನಾ ಭೀತಿಯಿಂದ ರಾಜ್ಯ ಸರ್ಕಾರ ಮಾರ್ಚ್ 31ರವರೆಗೆ ಯಾವುದೇ ಸಭೆ, ಸಮಾರಂಭ, ಧಾರ್ಮಿಕ ಕಾರ್ಯ ಕ್ರಮಗಳನ್ನು ನಡೆಸದಂತೆ ನಿರ್ಬಂಧ ಹೇರಿದೆ, ಇದರ ಪರಿಣಾಮ ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದ ಬ್ರಹ್ಮಕಲಶೋತ್ಸವ ಹತ್ತು ತಿಂಗಳವರೆಗೆ ಮುಂದೂಡಲಾಗಿದೆ. ದೇವಸ್ಥಾನದಲ್ಲಿ ಮಾ. 26ರಿಂದ ಏಪ್ರಿಲ್ 2ರವರೆಗೆ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧ ರಿಸಲಾಗಿತ್ತು. ಗುರುವಾರ ಶ್ರೀ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಬ್ರಹ್ಮಕಲಶೋತ್ಸವವನ್ನು ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ಒಮ್ಮತದಿಂದ ತೀರ್ಮಾನಿಸಲಾಗಿದೆ.

ಬೆರಳಚ್ಚು ಬೇಡ, ಒಟಿಪಿ ಸಾಕು

ಮಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಆನ್‌ಲೈನ್ ಪಡಿತರ ವಿತರಣೆಯನ್ನು ಬೆರಳಚ್ಚು ಬಯೋಮೆಟ್ರಿಕ್ ಮೂಲಕ ಮಾಡಲಾಗುತ್ತಿದೆ. ಆದರೆ ಈಗ ಕರೋನಾ ವೈರಸ್‌ನಿಂದಾಗಿ ಬೆರಳಚ್ಚು ಬಯೋಮೆಟ್ರಿಕ್ ನೀಡುವ ಬದಲು ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಣೆಯನ್ನು ಜಾರಿಗೆ ತರಲಾಗಿದೆ. ಇದನ್ನು ಬುಧವಾರದಿಂದ ದ.ಕ. ಜಿಲ್ಲೆಯಲ್ಲಿ ಜಾರಿಗೆ ತಂದಿದ್ದು, ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಮಾಹಿತಿಯನ್ನು ಪ್ರಚುರಪಡಿಸಲಾಗಿದೆ.

ಪಡಿತರ ಪಡೆಯಲು ಬರುವ ಪಡಿತರ ಚೀಟಿದಾರರ ಸಂಖ್ಯೆ ನಮೂದಿಸಿ, ಪಡಿತರ ಪಡೆಯಲು ಬಂದ ಕುಟುಂಬದ ಸದಸ್ಯರ ಹೆಸರು ಆಯ್ಕೆ ಮಾಡಿಕೊಂಡು ನಂತರ ಒಟಿಪಿ ಆಯ್ಕೆ ಮಾಡಬೇಕು. ತಕ್ಷಣವೇ ಗ್ರಾಹಕರ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ತಂತ್ರಾಂಶದಲ್ಲಿ ನಮೂದಿಸಿ ನಂತರ ಬಿಲ್ ಜನರೇಟ್ ಮಾಡಿ, ಪಡಿತರ ವಿತರಣೆ ಮಾಡಬೇಕು. ಇದನ್ನು ತಾತ್ಕಾಲಿಕವಾಗಿ ಜಾರಿಗೆ ತರಲಾಗಿದೆ ಎಂದು ಆಹಾರ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪುತ್ತೂರು ವ್ಯಕ್ತಿಯ ಆರೋಗ್ಯ ಸ್ಥಿರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದವರೆಗೂ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಪುತ್ತೂರಿನಿಂದ ಮಂಗಳೂರಿಗೆ ಉಸಿರಾಟ ಸಮಸ್ಯೆ ಹಾಗೂ ಜ್ವರದೊಂದಿಗೆ ಬುಧವಾರ ಸ್ಥಳಾಂತರಗೊಂಡಿರುವ ವ್ಯಕ್ತಿಯ ಸ್ಥಿತಿ ಸ್ಥಿರವಾಗಿ ಮುಂದುವರಿದಿದೆ, ಅವರ ಮಾದರಿಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಳುಹಿಸಿರುವ ಗಂಟಲಿನ ದ್ರವದ ಮಾದರಿಯಲ್ಲಿ ಎಲ್ಲವೂ ನೆಗೆಟಿವ್ ಆಗಿರುತ್ತದೆ. ಆದರೆ ಕೊಡಗು ಜಿಲ್ಲೆಯಲ್ಲಿ ಹಾಗೂ ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಬಂದಿರುವ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು, ಆದಷ್ಟೂ ಸಾಮಾಜಿಕ ಅಂತರ ಕಾಪಾಡುವಲ್ಲಿ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಹರಕೆ ಸೇವೆ ಇಲ್ಲದೆ ಕುಕ್ಕೆ ಕ್ಷೇತ್ರ ಜನರಹಿತ

ಸುಬ್ರಹ್ಮಣ್ಯ: ನಿತ್ಯ ಭಕ್ತರಿಂದ ತುಂಬಿರುತ್ತಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜನರಹಿತವಾಗಿದೆ. ಇದಕ್ಕೆ ಕಾರಣ, ಹರಕೆ ಸೇವೆಗಳಿಲ್ಲದಿರುವುದು. ದೇವಳದ ರಥಬೀದಿ, ಆದಿ ಸುಬ್ರಹ್ಮಣ್ಯ, ಹೊರಾಂಗಣ, ಒಳಾಂಗಣ ಭಣಗುಟ್ಟುತ್ತಿದ್ದು, ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ಪರಿಸ್ಥಿತಿ ಕಂಡುಬಂದಿದೆ. ಕ್ಷೇತ್ರದಲ್ಲಿ ಈಗ ರಸ್ತೆ ನಿರ್ಮಾಣ ನಡೆಯುತ್ತಿದ್ದು, ಕಾಮಗಾರಿಯ ಪ್ರಗತಿಗೆ ಈ ಪರಿಸ್ಥಿತಿ ಅನುಕೂಲಕರವಾಗಿ ಪರಿಗಣಿತವಾಗಿದೆ. ಕರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸರ್ಕಾರದ ಆದೇಶದಂತೆ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಶೇಷ ಸೇವೆ, ತುಲಾಭಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕ್ಷೇತ್ರದಲ್ಲಿ ಪರವೂರಿನ ಭಕ್ತರ ವಾಸ್ತವ್ಯಕ್ಕೂ ಅವಕಾಶ ಇಲ್ಲ.

ಕಂಬಳ ಮುಂದೂಡಿಕೆ

ಬೆಳ್ತಂಗಡಿ: ಕಡಿರುದ್ಯಾವರ ಬೆಳ್ಳೂರುಬೈಲ್‌ನಲ್ಲಿ ಮಾರ್ಚ್ 21ರಂದು ನಡೆಯಬೇಕಿದ್ದ ನೇತ್ರಾವತಿ-ಶರಾವತಿ ಜೋಡು ಕೆರೆ ಕಂಬಳವನ್ನು ಕರೊನಾ ಸೋಂಕು ಹರಡುವ ಭೀತಿಯಿಂದ ರಾಜ್ಯ ಸರ್ಕಾರದ ಆದೇಶದಂತೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.