ಶಿವಮೊಗ್ಗ: ಸಾರ್ವಜನಿಕ ಸ್ವಾಸ್ಥ್ಯ, ವೈಯಕ್ತಿಕ ಹಿತಕಾಯ್ದುಕೊಳ್ಳಲು ಮತ್ತು ಮಾರಣಾಂತಿಕ ಕರೊನಾ ಸೋಂಕು ನಿಯಂತ್ರಿಸಲು 18 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಹಾಕಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸಲಹೆ ನೀಡಿದರು.
ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ)ಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿಮ್ಸ್ ಹಾಗೂ ಸ್ಥಳೀಯ ವೈದ್ಯಕೀಯ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಸ್ವಾತಂತ್ರೃ ಅಮೃತ ಮಹೋತ್ಸವದ ನಿಮಿತ್ತ ಸೆಪ್ಟೆಂಬರ್ 30ರವರೆಗೆ ಜಿಲ್ಲೆಯ ಎಲ್ಲ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಬಾಯಿ ಆರೋಗ್ಯ ನೀತಿ ಕಾರ್ಯಕ್ರಮದಡಿ ದಂತಭಾಗ್ಯ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಅತಿಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ತಜ್ಞರು, ವಿಜ್ಞಾನಿಗಳು ಅವಿರತವಾಗಿ ಶ್ರಮಿಸಿ ಲಸಿಕೆ ಸಂಶೋಧಿಸಿದ ಫಲವಾಗಿ ಹಾಗೂ ಆರೋಗ್ಯ ಸೇರಿದಂತೆ ಸಂಬಂಧಿತ ಇಲಾಖಾ ಅಧಿಕಾರಿಗಳ ನಿರಂತರ ಕಾರ್ಯದಿಂದ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಸಾಧ್ಯವಾಗಿದೆ ಎಂದರು.
ಆರಂಭದ ಹಂತದಲ್ಲಿ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟವರು, ಸರ್ಕಾರ ಗುರುತಿಸಿದ ಮುಂಚೂಣಿ ಕಾರ್ಯಕರ್ತರು, ಆದ್ಯತಾ ಗುಂಪುಗಳು, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಕುಟುಂಬಗಳ ಅವಲಂಬಿತರಿಗೆ ಲಸಿಕೆ ನೀಡಲಾಗಿತ್ತು. ನಂತರದಲ್ಲಿ 12ರಿಂದ 14 ವರ್ಷ ವಯೋಮಿತಿ ಮೀರಿದ ಎಲ್ಲ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಲಸಿಕೆ ನೀಡಲಾಯಿತು ಎಂದು ಹೇಳಿದರು.
ನಿರಂತರವಾದ ಈ ಎಲ್ಲ ಕಾರ್ಯಕ್ರಮಗಳಿಂದ ಮೊದಲ ಮತ್ತು ಎರಡನೇ ಹಂತದಲ್ಲಿ ಜಿಲ್ಲೆಯ ಅತಿಹೆಚ್ಚು ಸಂಖ್ಯೆಯ ಫಲಾನುಭವಿಗಳಿಗೆ ಲಸಿಕೆ ಹಾಕಲಾಯಿತು. ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲಿ ಪುನಃ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲರಿಗೂ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ 75 ದಿನ ಉಚಿತವಾಗಿ ಲಸಿಕೆ ಹಾಕಲಾಗುವುದು. ಸಾರ್ವಜನಿಕರು ಈ ಕಾರ್ಯಕ್ರಮ ಲಾಭ ಪಡೆದುಕೊಳ್ಳುವಂತೆ ಡಿಸಿ ಮನವಿ ಮಾಡಿದರು.
ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಿಮ್ಸ್ ನಿರ್ದೇಶಕ ಡಾ. ಒ.ಎಸ್.ಸಿದ್ದಪ್ಪ, ಆರ್‌ಸಿಎಚ್‌ಒ ಡಾ. ನಾಗರಾಜ್‌ನಾಯ್ಕ, ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ. ಎಸ್.ಶ್ರೀಧರ್, ಜಿಲ್ಲಾ ಸರ್ಜನ್ ಡಾ. ಸಿದ್ಧನಗೌಡ, ಸಿಮ್ಸ್ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಉಪಸ್ಥಿತರಿದ್ದರು.