corona shiva 
ಜಿಲ್ಲೆ

ಕರೋನಾ ನಿರ್ಮೂಲನೆಗೆ 'ಕರೋನಾ ಶಿವ'ನ ಮೊರೆ ಹೋದ ಬೆಂಗಳೂರು ಜನ!

ಬೆಂಗಳೂರು: ಮಹಾಮಾರಿ ಕರೋನಾವನ್ನು ಹೊಡೆದೋಡಿಸಲು ಸರ್ಕಾರಗಳು, ಸಂಘ ಸಂಸ್ಥೆಗಳು ಈಗಾಗಲೇ ಸಾಕಷ್ಟು ಕೆಲಸ ಮಾಡುತ್ತಿವೆ. ಇತ್ತೀಚೆಗೆ ಕರೋನಾ ಹರಡುವಿಕೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ಸಂಪೂರ್ಣ ಮರೆಯಾಗಿಲ್ಲ.

ಇದೀಗ ಕರೊನಾ ನಿರ್ಮೂಲನೆಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಜನ ಶಿವನ ಮೊರೆ ಹೋಗಿದ್ದಾರೆ. ಅದೂ ಅಂತಿಂತ ಶಿವ ಅಲ್ಲ. ಕರೊನಾ ಶಿವ. ಹೌದು, ಕರೋನಾ ಸಾಂಕ್ರಾಮಿಕ ವೈರಸ್ ನಿರ್ಮೂಲನೆಗೆ ವಿಲ್ಸನ್ ಗಾರ್ಡನ್ ಯುವಪಡೆ ಕರೋನಾ ಶಿವನ ಮೊರೆ ಹೋಗಿದ್ದಾರೆ.

ವಿಮೋಚನಾ ಟ್ರಸ್ಟ್ ವತಿಯಿಂದ ವಿಲ್ಸನ್ ಗಾರ್ಡನ್ ಬಿಬಿಎಂಪಿ ಮೈದಾನದಲ್ಲಿ 35 ಅಡಿ ಎತ್ತರದ ಕರೋನಾ ಶಿವನ ವಿಗ್ರಹ ನಿರ್ಮಾಣ ಮಾಡಲಾಗಿದೆ. ಮಾ.8 ರಿಂದ ಮಾ.14ರ ವರೆಗೆ ಮಧಾಹ್ನ 2 ರಿಂದ ರಾತ್ರಿ 10 ಗಂಟೆವರೆಗೆ ಈ ಶಿವನ ವಿಗ್ರಹವನ್ನು ಪ್ರದರ್ಶನ ಮಾಡಲಾಗುತ್ತದೆ. ಕರೋನಾ ನಿರ್ಮೂಲನೆಗೋಸ್ಕರ ಸಾಮೂಹಿಕವಾಗಿ ಕರೋನಾ ಶಿವನಲ್ಲಿ ಪ್ರತಿದಿನ ಪ್ರಾರ್ಥನೆಯನ್ನು ಮಾಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಶಿವನ ವಿಗ್ರಹವನ್ನು ಕಬ್ಬಿಣ ಮತ್ತು ಫೈಬರ್ ಬಳಸಿ ತಯಾರಿಸಲಾಗಿದ್ದು, 8 ಕಲಾವಿದರು ಸತತ ಒಂದೂವರೆ ತಿಂಗಳ ಅವಧಿಯಲ್ಲಿ ರಚನೆ ಮಾಡಿದ್ದಾರೆ. ರಾತ್ರಿ ವೇಳೆ ಶಿವನ ವಿಗ್ರಹದ ಮೇಲೆ ವಿವಿಧ ಬಣ್ಣದ ಬೆಳಕು ಸೂಸುವಂತೆ ಬಣ್ಣದ ದೀಪಗಳ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿ ವಿಶೇಷವಾಗಿ ಮಕ್ಕಳ ಮೇಳ ಆಯೋಜಿಸಿದ್ದು, ಮಕ್ಕಳಿಗಾಗಿ ನೃತ್ಯ, ಹಾಸ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಜತೆಗೆ, ಆಹಾರ ಮೇಳವೂ ನಡೆಯಲಿದ್ದು, ಮಹಿಳೆಯರಿಗೆ ಅಡುಗೆ ತಯಾರಿಕೆ ಸ್ಪರ್ಧೆ ನಡೆಯಲಿದೆಯಂತೆ. ಶಿವರಾತ್ರಿ ದಿನದಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಪೂಜೆಗೆ ನಟ ದ್ರುವ ಸರ್ಜಾ, ಶಾಸಕರಾದ ಉದಯ ಗರುಡಾಚಾರ್ ಮತ್ತು ರಾಮಲಿಂಗಾರೆಡ್ಡಿ ಅವರು ಭಾಗವಹಿಸಲಿದ್ದಾರಂತೆ.