ಜಿಲ್ಲೆ

ಕರೊನಾ ನಿಯಮ ಅನುಷ್ಠಾನ ಕಡ್ಡಾಯ, ಅಹವಾಲು ಸ್ವೀಕರಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

Udupi

ಗಂಗೊಳ್ಳಿ: ನವರಾತ್ರಿ ಸಂದರ್ಭ ಮನೆಗಳಿಗೆ, ಅಂಗಡಿಗಳಿಗೆ ಭೇಟಿ ನೀಡುವ ವೇಷಗಳ ಕುರಿತು ನಿರ್ದಿಷ್ಟ ನಿಬರ್ಂಧ ವಿಧಿಸಿಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ನಿಯಮಗಳಿಗೆ ತೊಂದರೆಯುಂಟು ಮಾಡುವ ಕ್ರಮಗಳಿಗೆ ಅವಕಾಶ ಇಲ್ಲ. ಧಾರ್ಮಿಕ ಕ್ಷೇತ್ರದ ಎದುರು ಸಂಪ್ರದಾಯ ಪ್ರಕಾರ ನಡೆಯುವ ಹುಲಿವೇಷ ಒಂದು ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಅಲ್ಲಿಯೂ ಸ್ಪರ್ಧೆಗೆ ಅವಕಾಶ ಇಲ್ಲ ಎಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಶುಕ್ರವಾರ ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕ ಅಹವಾಲು ಸಲ್ಲಿಕೆ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಕೋವಿಡ್-19 ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಸರಳ ಸಾಂಸ್ಕೃತಿಕ ಕಾರ್ಯಕ್ರಮ, ಪೂಜೆಗಳಿಗೆ ಅನುಮತಿ ನೀಡಲಾಗಿದೆ. ಮೈಸೂರು ದಸರಾ ಸೇರಿದಂತೆ ಎಲ್ಲೆಡೆ ದೇವಾಲಯಗಳಲ್ಲಿ ಇದೇ ಮಾದರಿಯಲ್ಲಿ ಸರಳ ದಸರಾ ಆಚರಣೆ ನಡೆಯಬೇಕೆಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅದರಂತೆ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಸರಳ ದಸರಾ ಆಚರಣೆ ನಡೆಯಲಿದೆ ಎಂದರು.

ಬಿಜೆಪಿ ರಾಜ್ಯ ಹಿಂದುಳಿದ ವರ್ಗ ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ, ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ವಕ್ವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಎಸ್‌ಸಿ ಮೋರ್ಚಾದ ಗೋಪಾಲ ಕಳಂಜಿ, ಪುರಸಭೆ ಸದಸ್ಯರಾದ ಪ್ರಭಾಕರ್ ವಿ., ಸಂದೀಪ್ ಖಾರ್ವಿ, ರಾಘವೇಂದ್ರ ಖಾರ್ವಿ, ಶೇಖರ್ ಪೂಜಾರಿ, ಗಿರೀಶ್ ಜಿ.ಕೆ., ಮುಖಂಡರಾದ ಅರುಣ್ ಬಾಣ, ರವಿರಾಜ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಯಕ್ಷ ಕಲಾವಿದರಿಗೆ ಕಡ್ಡಾಯ ಪರೀಕ್ಷೆ: ಯಕ್ಷಗಾನ ಮೇಳ ಹೊರಡುವ ಮುನ್ನ ಯಕ್ಷಗಾನ ಕಲಾವಿದರಿಗೆ ಕರೊನಾ ಪರೀಕ್ಷೆ ಕಡ್ಡಾಯ ಮಾಡಲಾಗುವುದು. ಮೇಳ ಹೊರಟ ನಂತವೂ ವಾರಕ್ಕೊಮ್ಮೆ ಉಚಿತ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗುವುದು. ಮೇಳದ ತಿರುಗಾಟಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ದೇವಳ ಸಿಬ್ಬಂದಿಗೆ ಪಿಎಫ್ ಹಾಗೂ ಇಎಸ್‌ಐ ಸೌಲಭ್ಯ ನೀಡುವ ಪ್ರಸ್ತಾಪ ಇಲಾಖೆಯಲ್ಲಿದೆ. ಕರೊನಾ ಕಾರಣದಿಂದ ವಿಳಂಬವಾಗಿದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.