ರಾಣೆಬೆನ್ನೂರ: ಕರೊನಾ ಸೋಂಕಿನ ಎರಡನೇ ಅಲೆಯ ಕಂಟಕ ಗ್ರಾಮೀಣ ಭಾಗದ ಜನರಿಗೆ ಸಂಕಷ್ಟ ತಂದೊಡ್ಡಿದೆ. ನಗರ ಪ್ರದೇಶದಲ್ಲಿ ಪರಸ್ಪರ ಅಂತರ, ಮಾಸ್ಕ್ ಧರಿಸದೆ ಓಡಾಡುವವರು ಸೇರಿ ಇತರ ಕಾರಣಗಳಿಗೆ ಸೋಂಕು ತಗುಲುತ್ತಿದ್ದರೆ, ಗ್ರಾಮೀಣ ಭಾಗದಲ್ಲಿ ಹೊರಗಿನಿಂದ ಬಂದವರೇ ಸೋಂಕು ವಾಹಕರಾಗಿದ್ದಾರೆ.
ತಾಲೂಕಿನಲ್ಲಿ ಕರೊನಾ ಎರಡನೇ ಅಲೆಯಲ್ಲಿ ಮೇ 17ರವರೆಗೆ 373 ಸಕ್ರಿಯ ಪ್ರಕರಣಗಳಿದ್ದರೆ, ಅದರಲ್ಲಿ 315 ಸೋಂಕಿತರು ಗ್ರಾಮೀಣ ಭಾಗದವರೇ ಆಗಿದ್ದಾರೆ. ಒಟ್ಟಾರೆಯಾಗಿ 72 ಜನ ಮೃತಪಟ್ಟಿದ್ದರೆ, ಅದರಲ್ಲಿ ಗ್ರಾಮೀಣ ಭಾಗದವರ ಪ್ರಮಾಣ ಶೇ. 70ರಷ್ಟಿದೆ ಎಂಬುದು ಆರೋಗ್ಯ ಇಲಾಖೆಯ ಮಾಹಿತಿಯಾಗಿದೆ.
ಬೆಂಗಳೂರಿನಲ್ಲಿ ಸಹಜವಾಗಿಯೇ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತು. ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಜಾರಿ ಮಾಡಿದ್ದರಿಂದ ಬೆಂಗಳೂರಿಗೆ ವಲಸೆ ಹೋಗಿದ್ದವರು ಮರಳಿ ಗ್ರಾಮಗಳಿಗೆ ವಾಪಸ್ ಬಂದಿದ್ದಾರೆ. ಬೆಂಗಳೂರು ಸೇರಿ ಇತರೆಡೆಯಿಂದ ತಾಲೂಕಿಗೆ ಹಿಂದಿರುಗಿದವರ ಪ್ರಾಥಮಿಕ ಅಂಕಿ ಅಂಶ ಆರೋಗ್ಯ ಇಲಾಖೆ ಪ್ರಕಾರ 2 ಸಾವಿರಕ್ಕೂ ಅಧಿಕವಾಗಿದೆ.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹೊರಗಿನಿಂದ ಬಂದವರ ಸರ್ವೆ ಮಾಡಿ, ಕರೊನಾ ಪರೀಕ್ಷೆ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಪರೀಕ್ಷೆ ಮುಗಿಯುವವರೆಗೆ ಹೊರಗಿನಿಂದ ಬಂದವರು ಮನೆಯಲ್ಲೇ ಪ್ರತ್ಯೇಕವಾಗಿರುವ ಬದಲು ಮನಬಂದಂತೆ ಹೊರಗಡೆ ತಿರುಗಾಡುತ್ತಿದ್ದಾರೆ.
ಪರೀಕ್ಷಾ ವರದಿ ವಿಳಂಬ: ನಗರದ ತಾಲೂಕು ಸರ್ಕಾರಿ ಆಸ್ಪತ್ರೆ, ನಗರಸಭೆ ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ನಿತ್ಯವೂ 200 ರಿಂದ 300 ಜನರ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಈ ಪರೀಕ್ಷೆಯ ವರದಿ ಬರುವುದು ಐದಾರು ದಿನ ವಿಳಂಬವಾಗುತ್ತಿದೆ. ಆದರೆ, ಗಂಟಲ ದ್ರವ ಪರೀಕ್ಷೆಗೆ ಕೊಟ್ಟವರು ಅದರ ವರದಿ ಬರುವವರೆಗೆ ಕೂಡ ಮನೆಯಲ್ಲಿರದೆ ಸಾರ್ವಜನಿಕವಾಗಿ ಹಾಗೂ ಗ್ರಾಮದ ಕಟ್ಟೆಗಳಲ್ಲಿ ಎಲ್ಲರ ಜತೆ ಬೆರೆತು ಹರಟೆ ಹೊಡೆಯುತ್ತಿದ್ದಾರೆ.
ಅಲ್ಲದೆ, ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳುತ್ತಿದ್ದು, ಪಿಪಿಇ ಕಿಟ್ ಧರಿಸುತ್ತಿಲ್ಲ. ಅಲ್ಲದೆ, ಪರಸ್ಪರ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ಇದು ಸೋಂಕು ಹರಡಲು ಕಾರಣವಾಗಿದೆ. ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗುವ ಇಂಥ ಅಂಶಗಳನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಹೊರಗಿನಿಂದ ಬಂದವರು ಮನೆಯಿಂದ ಹೊರಬರದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ 197 ಸೋಂಕಿತರು ಹೋಮ್ ಐಸೋಲೇಷನ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೋಂಕು ತಗುಲಿರುವವರಿಗೆ ಅದರ ಪ್ರಮಾಣ ಕಡಿಮೆ ಇದ್ದಾಗ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದುಕೊಳ್ಳಲು ಆರೋಗ್ಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಕರೊನಾ ಮೊದಲ ಅಲೆಯಂತೆ ಸೋಂಕಿತರ ಮನೆ ಬಳಿ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧ ವಿಧಿಸುವುದನ್ನು ಮಾಡುತ್ತಿಲ್ಲ. ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೋಂಕಿತರು ಬೆಳಗಿನ ನಿರ್ಬಂಧ ಸಡಿಲಿಕೆ ಅವಧಿಯಲ್ಲಿ ಮಾರುಕಟ್ಟೆ, ಅಂಗಡಿ ಮತ್ತಿತರೆಡೆ ಓಡಾಡುತ್ತಿದ್ದಾರೆ. ಇದು ಕೂಡ ಸೋಂಕು ವೇಗವಾಗಿ ಹರಡಲು ಕಾರಣವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಇದೇ ಆತಂಕ ವ್ಯಕ್ತಪಡಿಸಿ ಹೋಮ್ ಐಸೋಲೇಷನ್ ಸಂಪೂರ್ಣವಾಗಿ ರದ್ದು ಪಡಿಸಬೇಕು. ಒಂದೇ ಬಡಾವಣೆಯಲ್ಲಿ ಆರೇಳು ಪ್ರಕರಣ ಬಂದರೆ ಅಂಥ ಬಡಾವಣೆಯನ್ನು ಸಿಗ್ಮಾ ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ತಾಲೂಕಿನಲ್ಲಿ ಅಧಿಕಾರಿಗಳು ಸಚಿವರ ಸೂಚನೆಗೆ ಸ್ಪಂದಿಸುತ್ತಿಲ್ಲ.
ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚುತ್ತಿರುವ ಕಾರಣ ಯಾವ ಗ್ರಾಮದಲ್ಲಿ ಪ್ರಕರಣ ಕಂಡು ಬರುತ್ತವೆಯೋ ಅಲ್ಲಿ ಸ್ಯಾನಿಟೈಸರ್ ಸಿಂಪಡಣೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹೊರಗಿನಿಂದ ಬಂದವರು ಹಾಗೂ ಹೋಮ್ ಐಸೋಲೇಷನ್ನಲ್ಲಿದ್ದ ಎಲ್ಲರನ್ನು ಕರೊನಾ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲು ಆರೋಗ್ಯ ಇಲಾಖೆ, ಕಂದಾಯ, ಪೊಲೀಸ್ ಸಿಬ್ಬಂದಿ ಸೇರಿ ಪ್ರತಿ ಗ್ರಾಮಕ್ಕೂ ನಾಲ್ಕು ಜನರ ತಂಡ ರಚಿಸಲಾಗಿದೆ. ಈಗಾಗಲೇ ಅವರು ಕಾರ್ಯಾಚರಣೆ ಮಾಡಿ ನೂರಕ್ಕೂ ಅಧಿಕ ಹೋಮ್ ಐಸೋಲೇಷನ್ನಲ್ಲಿದ್ದರನ್ನು ಕರೊನಾ ಕೇರ್ ಸೆಂಟರ್ಗೆ ಸೇರಿಸಿದ್ದಾರೆ. ಉಳಿದವರನ್ನು ಸೇರಿಸಲಿದ್ದಾರೆ.
| ಶಂಕರ ಜಿ.ಎಸ್., ತಹಸೀಲ್ದಾರ್