ಗದಗ: ಜಿಲ್ಲೆಯಲ್ಲಿ ಗುರುವಾರ ಆರು ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಹರ್ತಿ ಗ್ರಾಮದ ನಿವಾಸಿ 22 ವರ್ಷದ ಮಹಿಳೆಯ (ಪಿ-18287) ಸಂಪರ್ಕದಿಂದಾಗಿ ಗದಗ-ಬೆಟಗೇರಿ ನಗರದ ರಾಜೀವ ಗಾಂಧಿ ನಗರದ ನಿವಾಸಿ, 23 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ ದಾಸರ ಓಣಿ ನಿವಾಸಿ 24 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಗದಗ-ಬೆಟಗೇರಿ ನಗರದ ಡಿಸಿ ಮಿಲ್ ಪ್ರದೇಶದ ನಿವಾಸಿ 53 ವರ್ಷದ ಮಹಿಳೆಯ (ಪಿ-25320) ಸಂಪರ್ಕದಿಂದ ಗದಗ- ಬೆಟಗೇರಿಯ ಎಸ್.ಎಂ. ಕೃಷ್ಣ ನಗರದ ನಿವಾಸಿ 47 ವರ್ಷದ ಪುರುಷ, ಡಿಸಿ ಮಿಲ್ ಪ್ರದೇಶದ 32 ವರ್ಷದ ಮಹಿಳೆ ಹಾಗೂ ಬೆಟಗೇರಿಯ ಶಿವಾಜಿ ನಗರದ ನಿವಾಸಿ 35 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಗದಗ ತಾಲೂಕಿನ ಮುಳಗುಂದ ಪಟ್ಟಣದ ನಿವಾಸಿ 40 ವರ್ಷದ ಮಹಿಳೆಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.
ಚಾಲಕ ಸಾವು: ಮುಳಗುಂದ ಸಮೀಪದ ಸೀತಾಲಹರಿ ಗ್ರಾಮದ 52 ವರ್ಷದ ಕೆಎಸ್ಆರ್ಟಿಸಿ ಚಾಲಕ ಗುರುವಾರ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಕೆಮ್ಮು, ನೆಗಡಿ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜು. 8ರಂದು ಗದಗ ಜಿಲ್ಲಾಸ್ಪತ್ರೆಗೆ ಆಗಮಿಸಿ ತಮ್ಮ ಗಂಟಲ ದ್ರವದ ಮಾದರಿ ನೀಡಿ ಮರಳಿ ಮನೆಗೆ ತೆರಳಿದ್ದ.
ಆದರೆ, ಗುರುವಾರ ಮುಂಜಾನೆ ಎದೆ ನೋವು ಕಾಣಿಸಿಕೊಂಡು ಮನೆಯ ಲ್ಲಿಯೇ ಮೃತಪಟ್ಟಿದ್ದಾನೆ. ಈತನ ಗಂಟಲ ದ್ರವದ ಪರೀಕ್ಷೆ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಶಿರಹಟ್ಟಿ: ತಹಸೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಇದರಿಂದ ಕಂದಾಯ ಇಲಾಖೆ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಜು. 6 ರಂದು ಸ್ಥಳೀಯ ತಹಸೀಲ್ದಾರ್ ಕಚೇರಿ ಅವರಣದಲ್ಲಿ ಸರ್ಕಾರಿ ಇಲಾಖೆ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಆ ವೇಳೆ ಕಂದಾಯ ಇಲಾಖೆ ಸಿಬ್ಬಂದಿಗೂ ತಪಾಸಣೆ ನಡೆಸಿ ಒಟ್ಟು 110 ಜನರ ಗಂಟಲ ದ್ರವವನ್ನು ಜಿಮ್್ಸ ಆಸ್ಪತೆಗೆ ಕಳಿಸಲಾಗಿತ್ತು. ಜು. 9 ರಂದು ವರದಿ ಬಂದಿದ್ದು, ಕಂದಾಯ ನಿರೀಕ್ಷಕನಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ.
ಸಚಿವರೊಂದಿಗೆ ಸಭೆಯಲ್ಲಿ ಭಾಗಿ: ಜು. 7 ರಂದು ಲಕ್ಷ್ಮೇಶ್ವರ ಪುರಸಭೆಯಲ್ಲಿ ಸಚಿವ ಸಿ.ಸಿ. ಪಾಟೀಲ ನೇತೃತ್ವದಲ್ಲಿ ನಡೆದ ಲಕ್ಷೆ್ಮೕಶ್ವರ ಹಾಗೂ ಶಿರಹಟ್ಟಿ ತಾಲೂಕು ಅಧಿಕಾರಿಗಳ ಕೋವಿಡ್ ನಿಯಂತ್ರಣ ಸಭೆಯಲ್ಲಿ ಈ ಕಂದಾಯ ನಿರೀಕ್ಷಕ ಭಾಗಿಯಾಗಿದ್ದರು. ಶಾಸಕ ರಾಮಣ್ಣ ಲಮಾಣಿ, ಎಸಿ ರಾಯಪ್ಪ, ಡಿವೈಎಸ್ಪಿ ಪ್ರಲ್ಹಾದ್ ಸೇರಿ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಮೊಬೈಲ್ ಫೋನ್ ಸ್ವಿಚ್ ಆಫ್: ಸೋಂಕು ತಗುಲಿದ ವಿಷಯ ತಿಳಿದ ನಂತರ ಕಂದಾಯ ನಿರೀಕ್ಷಕರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅವರು ಭುಯದಿಂದ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಡಿ ಗೊಂದಲ ಮೂಡಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ತಹಸೀಲ್ದಾರ್ ಗೋಣೆಣ್ಣವರ, ‘ಆತ ಎಲ್ಲೂ ಹೋಗಿಲ್ಲ. ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಈಗ ಅವರನ್ನು ಜಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು. ತಹಸೀಲ್ದಾರ್ ಕಚೇರಿ ಸ್ಯಾನಿಟೈಸ್ ಮಾಡಲಾಗುವುದು. ಈತನ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಹಸೀಲ್ದಾರ್ ಗೋಣೆಣ್ಣವರ ತಿಳಿಸಿದ್ದಾರೆ.