ಬೆಂಗಳೂರು: ಇತರ ವಿದ್ಯಾರ್ಥಿಗಳೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದ ಬಾಲಕನಿಗೂ ಕರೊನಾ ಪಾಸಿಟಿವ್ ಬಂದಿದೆ. ಈತನ ಜತೆ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳು ಮತ್ತು ಕೊಠಡಿ ಸಿಬ್ಬಂದಿಗೆ ಕೋವಿಡ್ ಭೀತಿ ಆವರಿಸಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಇಂದು ಗಣಿತ ವಿಷಯದ ಪರೀಕ್ಷೆ ಇತ್ತು. ಎಂದಿನಂತೆ ಬಾಲಕ ಪರೀಕ್ಷೆ ಬರೆಯುತ್ತಿದ್ದ. ಕಳೆದ ವಾರ ಡೆಂಘೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅಂದರೆ ಜೂನ್ 23ರಂದು ಈ ಬಾಲಕನಿಗೆ ಡೆಂಘೆ ಜತೆಗೆ ಕರೊನಾ ಟೆಸ್ಟ್ ಕೂಡ ಮಾಡಿಸಲಾಗಿತ್ತು. ಬಳಿಕ ಜ್ವರ ಇರಲಿಲ್ಲ. ಹಾಗಾಗಿ ಈತ ಮೊನ್ನೆಯಷ್ಟೇ ಇಂಗ್ಲಿಷ್ ಪರೀಕ್ಷೆ ಬರೆದು, ಇಂದು ಗಣಿತ ಪರೀಕ್ಷೆಗೆ ಹಾಜರಾಗಿದ್ದ. ಆದರೆ, ಗಣಿತ ಪರೀಕ್ಷೆ ಮುಗಿಯುವಷ್ಟರಲ್ಲಿ ಆತನ ವರದಿಯಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಇದನ್ನೂ ಓದಿರಿ ಥರ್ಮಲ್ ಸ್ಕ್ರೀನಿಂಗ್ ವೇಳೆ ಕುಸಿದುಬಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ
ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗೆ ಕರೊನಾ ಪಾಸಿಟಿವ್ ಇದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ಆ ಬಾಲಕನಿಗೆ ಪ್ರತ್ಯೇಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತು. ಸೋಂಕಿತ ವಿದ್ಯಾರ್ಥಿಗೆ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಸೋಂಕಿತ ವಿದ್ಯಾರ್ಥಿ ಸಂಪರ್ಕಕ್ಕೆ ಬಂದವರ ಪತ್ತೆಗಾಗಿ ಆರೋಗ್ಯ ಇಲಾಖೆ ಮುಂದಾಗಿದೆ.
ಇನ್ನು ಮೊದಲ ದಿನ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ಬಾಗಲಕೋಟೆಯ ಕಲಾದಗಿ ಗ್ರಾಮದ ಇಬ್ಬರು ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಪರೀಕ್ಷೆ ರದ್ದುಗೊಳಿಸಲು ಪಾಲಕರು ಆಗ್ರಹಿಸಿದ್ದಾರೆ.