ಜಿಲ್ಲೆ

28 ವಿದ್ಯಾರ್ಥಿನಿಯರಿಗೆ ಕರೊನಾ ; ದೇವರಾಜ ಅರಸು ನರ್ಸಿಂಗ್ ಕಾಲೇಜು ಸೀಲ್‌ಡೌನ್

Kolar

ಕೋಲಾರ : ನಗರದ ಶ್ರೀ ದೇವರಾಜ ಅರಸು ನರ್ಸಿಂಗ್ ಕಾಲೇಜಿಗೆ ಹೊರ ರಾಜ್ಯದಿಂದ ಬಂದ 28 ವಿದ್ಯಾರ್ಥಿನಿಯರಿಗೆ ಕರೊನಾ ದೃಢಪಟ್ಟಿದ್ದು, ಕಾಲೇಜನ್ನು ಸೀಲ್‌ಡೌನ್ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಡಿ.8 ಮತ್ತು 21ರಂದು ಎರಡು ತಂಡದಲ್ಲಿ ಕೇರಳದಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಒಟ್ಟು 400 ವಿದ್ಯಾರ್ಥಿಗಳ ಮಾದರಿ ಸಂಗ್ರಹಿಸಲಾಗಿದ್ದು, ವರದಿ ಬಂದಿರುವ 290 ಮಾದರಿಯಲ್ಲಿ ಕೇರಳದ 27, ಪಶ್ಚಿಮ ಬಂಗಾಳದ ಒಬ್ಬ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟಿದೆ. ಇನ್ನೂ 110 ಮಾದರಿಗಳ ಫಲಿತಾಂಶ ಬರಬೇಕಿದೆ ಎಂದು ತಿಳಿಸಿದ್ದಾರೆ.

ನರ್ಸಿಂಗ್ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗೆ ಕರೊನಾ ಪರೀಕ್ಷೆ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಕಾಲೇಜನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸಿ ಸೀಲ್‌ಡೌನ್ ಮಾಡಲಾಗಿದೆ ಎಂದಿದ್ದಾರೆ.

ಬೈದು ಬೈದು ಸಣ್ಣಗಾದೆ: ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಕೋವಿಡ್ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಡಿಸಿ ಸಿ.ಸತ್ಯಭಾಮ, ಕರೊನಾ ನೆಗೆಟಿವ್ ವರದಿ ತರದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿದ್ದು ಸರಿಯಲ್ಲ. ನಗರಸಭೆಗೆ ಸರಿಯಾಗಿ ತೆರಿಗೆಯೂ ಕಟ್ಟುತ್ತಿಲ್ಲ, ಕಷ್ಟ ಕಡಿಮೆ ಆಗಲಿ ಎಂದರೆ ನೀವು ಭಾರ ಆಗುತ್ತಿದ್ದೀರಿ, ಸರ್ಕಾರಿ ಆಸ್ಪತ್ರೆಯೇ ವಾಸಿ ಎಂದು ಜಾಲಪ್ಪ ಆಸ್ಪತ್ರೆ ಪ್ರತಿನಿಧಿ ಡಾ. ಸುನೀಲ್ ಅವರನ್ನು ತರಾಟೆ ತೆಗೆದುಕೊಂಡರು.

ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರಲ್ಲಿ ಬಹುತೇಕರು ಗೈರಾಗಿದ್ದನ್ನು ಕಂಡು ಗರಂ ಆದ ಡಿಸಿ, ಸಭೆ ಕರೆದ ಮೇಲೆ ಎಲ್ಲರನ್ನೂ ಕರೆಸಬೇಕಿತ್ತು, ನಿಮ್ಮ ಕೈಯಲ್ಲಿ ಆಗದಿದ್ದರೆ ನನ್ನಿಂದ ಪತ್ರ ಹಾಕಿಸಬೇಕಿತ್ತು. ನಿಮಗೆ ಬೈದು ಬೈದು ನಾನು ಸಣ್ಣಗಾಗಿದ್ದೀನಿ, ಆರೋಗ್ಯ ಇಲಾಖೆಯವರಿಗೆ ಕೊಂಬು ಬಂದಿದೆ, ಕೆಲಸನೇ ಮಾಡಲ್ಲ, ಮೃದುಧೋರಣೆ ತಾಳದೆ ಬೆಂಡು ಎತ್ತಬೇಕು ಎಂದು ಗುಡುಗಿದರು.

ಕರೊನಾಗೆ ಒಬ್ಬರು ಬಲಿ : ಜಿಲ್ಲೆಯಲ್ಲಿ ಗುರುವಾರ ಕರೊನಾದಿಂದ ಕೆಜಿಎಫ್‌ನ ಒಬ್ಬರು ಮೃತಪಟ್ಟಿದ್ದು, 14 ಮಂದಿಗೆ ಸೋಂಕು ದೃಢಪಟ್ಟಿದೆ. ಸಾವು 180ಕ್ಕೆ ಏರಿಕೆಯಾಗಿದೆ. ಕೋಲಾರದಲ್ಲಿ 12, ಮಾಲೂರಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ. ಸಂಪರ್ಕದಲ್ಲಿದ್ದ 126 ಮಂದಿ ಮೇಲೆ ನಿಗಾ ಇಡಲಾಗಿದೆ. 19 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 103ಕ್ಕೆ ಇಳಿದಿದೆ.