ಜಿಲ್ಲೆ

ಸುಭಾಷ್‌ನಗರ ಎಂಟನೇ ಕ್ರಾಸ್ ಸೀಲ್‌ಡೌನ್

ವಿಜಯವಾಣಿ ಸುದ್ದಿಜಾಲ ಮಂಡ್ಯ

ಇಲ್ಲಿನ ಸುಭಾಷ್‌ನಗರ ನಿವಾಸಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎಂಟನೇ ಕ್ರಾಸ್ ಅನ್ನು ನಿರ್ಬಂಧಿತ ವಲಯ ಎಂದು ಜಿಲ್ಲಾಡಳಿತ ಘೋಷಿಸಿ ಸೀಲ್‌ಡೌನ್ ಮಾಡಿದೆ.

ಸೋಂಕಿತ ವ್ಯಕ್ತಿ ಆರ್‌ಟಿಒ ಕಚೇರಿ ಏಜೆಂಟ್ ಆಗಿದ್ದರು. ಜೂ.19ರಂದು ಬೆಂಗಳೂರಿನ ಕಲಾಸಿಪಾಳ್ಯಕ್ಕೆ ತೆರಳಿ ಹೋಟೆಲ್‌ವೊಂದರಲ್ಲಿ ವಾಸ್ತವ್ಯವಿದ್ದರು. ಕಲಾಸಿಪಾಳ್ಯದಲ್ಲಿ 13 ಜನರಿಗೆ ಸೋಂಕು ದೃಢಪಟ್ಟಿತ್ತು. ಇದೇ ಆತಂಕದಲ್ಲಿ ಮಂಡ್ಯಕ್ಕೆ ವಾಪಸ್ ಬಂದ ನಂತರ ಹೋಂ ಕ್ವಾರಂಟೈನ್‌ನಲ್ಲಿದ್ದರು. ಜೂ.25ರಂದು ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದರಿಂದ ಸ್ವಯಂಪ್ರೇರಿತವಾಗಿ ಅವರೇ ಆಸ್ಪತ್ರೆಗೆ ತೆರಳಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದರು. ಇದೀಗ ಪರೀಕ್ಷಾ ವರದಿಯಿಂದ ಸೋಂಕು ಇರುವುದು ದೃಢಪಟ್ಟಿದೆ.

ಇನ್ನು ಇವರ ಕುಟುಂಬದ ಏಳು ಸದಸ್ಯರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಬಡಾವಣೆಯ 7ನೇ ಕ್ರಾಸ್‌ಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ನಿರ್ಬಂಧಿತ ವಲಯವಾಗಿ ಘೋಷಿಸಿದ್ದಾರೆ.

ಇದಲ್ಲದೆ, ಸೋಂಕಿತ ವ್ಯಕ್ತಿ ಆರ್‌ಟಿಒ ಕಚೇರಿಯಲ್ಲಿ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರಿಂದ ಕಚೇರಿಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕು ನಿವಾರಕ ದ್ರಾವಣ ಸಿಂಪರಣೆ ಮಾಡಿದ್ದಾರೆ. ಈತನ ಸಂಪರ್ಕದಲ್ಲಿ ಮಂಡ್ಯದ ಮತ್ತೊಬ್ಬ ವ್ಯಕ್ತಿ ಇದ್ದು, ಆತನ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ನಿವಾಸವೂ ಇದೇ ಬಡಾವಣೆಯಲ್ಲಿದ್ದು, ಇವರು ಸಹ ನಿರ್ಬಂಧಿತ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ಮಳವಳ್ಳಿಗೆ ಮತ್ತೆ ಆತಂಕ : ಕರೊನಾ ಸೇನಾನಿ, ಇಬ್ಬರು ಗರ್ಭಿಣಿಯರು ಸೇರಿ ಎಂಟು ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಮಳವಳ್ಳಿ ತಾಲೂಕಿನಲ್ಲಿ ಮತ್ತೆ ಆತಂಕ ಶುರುವಾಗಿದೆ. ಅದರಲ್ಲಿಯೂ ಗ್ರಾಮೀಣ ಭಾಗದವರಲ್ಲಿ ಸೋಂಕು ಧೃಡಪಟ್ಟಿರುವುದು ಜನರ ನಿದ್ದೆಗೆಡಿಸಿದೆ.

ಮದ್ದೂರು ತಾಲೂಕಿನ ಮಹಿಳೆ ತಳಗವಾದಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೆಸ್ಟ್‌ಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಅಂತೆಯೇ, ತಾಲೂಕಿನ ಎರಡು ಪ್ರತ್ಯೇಕ ಗ್ರಾಮದ ಇಬ್ಬರು ಗರ್ಭಿಣಿಯರು, ಇನ್ನೊಂದು ಗ್ರಾಮದ ದಂಪತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ದಂಪತಿ ಹರಿಯಾಣದಲ್ಲಿ ಉದ್ಯೋಗ ಮಾಡುತ್ತಿದ್ದು, ಇತ್ತೀಚೆಗಷ್ಟೇ ಗ್ರಾಮಕ್ಕೆ ಬಂದಿದ್ದರು.

ಮತ್ತೊಂದು ಗ್ರಾಮದ 34 ವರ್ಷ ವ್ಯಕ್ತಿ ಟಯೋಟಾ ಕಂಪನಿಯಲ್ಲಿ ಹೊರ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು, ಆ ಸಂಸ್ಥೆಯಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿದಾಗ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಮನೆ ಕೆಲಸ ಮಾಡುತ್ತಿದ್ದ ಇನ್ನೊಂದು ಗ್ರಾಮದ 35 ವರ್ಷದ ಮಹಿಳೆ ಕೆಲ ದಿನದ ಹಿಂದೆ ಆಗಮಿಸಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ ಸೋಂಕು ತಗುಲಿರುವುದು ಗೊತ್ತಾಗಿದೆ.

ಇನ್ನು ಹಲಗೂರು ವ್ಯಾಪ್ತಿಯ ಗ್ರಾಮವೊಂದರ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈತ ಫೋಟೋಗ್ರಾಫರ್ ಆಗಿದ್ದಾನೆ. ಇದೀಗ ಕಾರ್ಯಾಚರಣೆಗಿಳಿದಿರುವ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸುವುದರ ಜತೆಗೆ ಅವರು ವಾಸವಿದ್ದ ಮನೆಯ ನೂರು ಮೀಟರ್ ವ್ಯಾಪ್ತಿಯನ್ನು ಸೀಲ್‌ಡೌನ್ ಮಾಡಿದ್ದಾರೆ.