ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿಯ ಗ್ರಾಮವೊಂದರ ನಿವಾಸಿ ಸುಮಾರು 52 ವರ್ಷದ ಮಹಿಳೆಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮವನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದ್ದು ಸೋಂಕಿತ ಮಹಿಳೆಯ ಮನೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.
ಸೋಂಕಿತ ಮಹಿಳೆ ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳುವ ಸಲುವಾಗಿ ಶ್ರವಣಬೆಳಗೊಳ ಹೋಬಳಿಯ ಗ್ರಾಮವೊಂದಲ್ಲಿರುವ ಮಗಳ ಮನೆಗೆ ಕಳೆದ ವಾರ ಹೋಗಿದ್ದರು.
ಮಗಳ ಮನೆಯಿಂದ ಜು.7 ರಂದು ಬೆಂಗಳೂರಿಗೆ ತೆರಳಿ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದಾರೆ. ಮಹಿಳೆ ತೀವ್ರ ಬಳಲಿದ್ದ ಪರಿಣಾಮ ವೈದ್ಯರು ಆಕೆಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಮಹಿಳೆ ಆಸ್ಪತ್ರೆಯಿಂದ ಹಿರೀಸಾವೆ ಹೋಬಳಿಯ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.
ಪರೀಕ್ಷೆಗೆ ಕಳಿಸಿದ್ದ ಗಂಟಲು ದ್ರವದ ವರದಿ ಜು.8 ರಂದು ಸಂಜೆ ಲಭ್ಯವಾಗಿದ್ದು ಮಹಿಳೆಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಬೆಂಗಳೂರಿನಿಂದ ತಾಲೂಕು ಆರೋಗ್ಯ ಇಲಾಖೆ ಹಾಗೂ ವ್ಯಾಪ್ತಿಯ ಆಶಾಕಾರ್ಯಕರ್ತೆಗೆ ಮಾಹಿತಿ ರವಾನೆಯಾಗಿದೆ.
ತಕ್ಷಣ ಸೋಂಕಿತ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ದು ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮನೆಯಲ್ಲಿದ್ದ ಸೋಂಕಿತ ಮಹಿಳೆಯ ಪತಿ, ಮಗ, ಸೊಸೆ ಹಾಗೂ ಎರಡು ವರ್ಷದ ಮೊಮ್ಮಗಳನ್ನು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಗ್ರಾಮಕ್ಕೆ ಗುರುವಾರ ಬೆಳಗ್ಗೆ ತಹಸೀಲ್ದಾರ್ ಜೆ.ಬಿ.ಮಾರುತಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಮಾಹಿತಿ ಪಡೆದ ಬಳಿಕ ಗ್ರಾಮವನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸುವುದರ ಜತೆಗೆ ಸೋಂಕಿತ ಮಹಿಳೆಯ ಮನೆ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಯಿತು.
ಔಷಧ ಸಿಂಪಡಣೆ: ಹಿರೀಸಾವೆ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು 2 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್‌ಗೆ ನೀರು ತುಂಬಿಸಿ ಅದರಲ್ಲಿ ಸುಮಾರು 50 ಲೀಟರ್ ಹೈಫೊಕ್ಲೋರೈಡ್ ದ್ರಾವಣ ಮಿಶ್ರಣ ಮಾಡಿ ಗ್ರಾಪಂ ಸಿಬ್ಬಂದಿ ಸಹಕಾರದೊಂದಿಗೆ ಗ್ರಾಮದ ಎಲ್ಲ ಬೀದಿಗಳು ಸೇರಿ ಚರಂಡಿ ಹಾಗೂ ಪ್ರತಿಯೊಂದು ಮನೆಗಳ ಅಂಗಳಕ್ಕೆ ಔಷಧ ಸಿಂಪಡಿಸಲಾಯಿತು. ಗ್ರಾಮ ಪಂಚಾಯಿತಿ ಪಿಡಿಒ ದರ್ಶನ್ ಹಾಗೂ ಸಿಬ್ಬಂದಿ ಇದ್ದರು.