ರಾಯಚೂರಿನ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಮಾತನಾಡಿದರು. 
ಜಿಲ್ಲೆ

ಕರೊನಾ ಬಗ್ಗೆ ಜನರಲ್ಲಿರುವ ಆತಂಕ, ಭಯ ದೂರವಾಗಿಸಿ : ಸಚಿವ ಡಾ.ಸುಧಾಕರ್ ಸೂಚನೆ

ರಾಯಚೂರು: ಕರೊನಾ ಸೋಂಕಿನ ಬಗ್ಗೆ ಜನಸಾಮಾನ್ಯಲ್ಲಿರುವ ಆತಂಕ, ಭಯ ನಿವಾರಿಸಬೇಕಿದ್ದು, ಸೋಂಕು ಹರಡದಂತೆ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡಸಿ, ಸಾರ್ಸ್, ಮಾರ್ಸ್‌ನಷ್ಟು ಕರೊನಾದ ತೀವ್ರತೆ ಭಯಾನಕವಾಗಿಲ್ಲ. ರಾಜ್ಯದಲ್ಲಿನ ಸೋಂಕಿತರಲ್ಲಿ ಶೇ.50 ಜನರು ಚಿಕಿತ್ಸೆಯಿಲ್ಲದೆ ಗುಣಮುಖರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಪತ್ತೆಯಾಗಿರುವ ಸೋಂಕಿತರಲ್ಲಿ ಬಹುಪಾಲು ಮಹಾರಾಷ್ಟ್ರದಿಂದ ಬಂದವರಾಗಿದ್ದು, ಹೊರ ರಾಜ್ಯದಿಂದ ಆಗಮಿಸುವವರ ಬಗ್ಗೆ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜತೆಗೆ ಕೋವಿಡ್ ಚಿಕಿತ್ಸೆಯಿಂದಾಗಿ ಆಸ್ಪತ್ರೆಗಳಲ್ಲಿ ಇತರ ಚಿಕಿತ್ಸೆಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು.

ಒಪೆಕ್ ಆಸ್ಪತ್ರೆಗೆ ಎರಡ್ಮೂರು ತಿಂಗಳಲ್ಲಿ ಹೊಸ ರೂಪ ಕೊಡುವ ಪ್ರಯತ್ನ ನಡೆಸುವ ಮೂಲಕ ಹಿಂದಿನಂತೆ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು. ರಿಮ್ಸ್‌ನಲ್ಲಿರುವ ನೂನ್ಯತೆಗಳನ್ನು ಸರಿಪಡಿಸಲಾಗುವುದು ಎಂದು ಡಾ.ಸುಧಾಕರ್ ತಿಳಿಸಿದರು.

ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ಕೆ.ಶಿವನಗೌಡ ನಾಯಕ, ರಾಜಾ ವೆಂಕಟಪ್ಪ ನಾಯಕ, ಎಂಎಲ್ಸಿ ಎನ್.ಎಸ್.ಬೋಸರಾಜು, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಸಿಇಒ ಲಕ್ಷ್ಮಿಕಾಂತರೆಡ್ಡಿ, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಇದ್ದರು.