ಜಿಲ್ಲೆ

ದ.ಕ. ಮತ್ತೋರ್ವ ಬಾಧಿತ ಬಿಡುಗಡೆ, ಕರೊನಾ ಸೋಂಕಿತರು ಇನ್ನು 4 ಮಂದಿ ಮಾತ್ರ

Dakshina Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 9 ದಿನಗಳಿಂದ ಯಾವುದೇ ಪಾಸಿಟಿವ್ ಕರೊನಾ ಪ್ರಕರಣಗಳಿಲ್ಲದೆ ಸಮಾಧಾನಕರ ಸ್ಥಿತಿ ಮುಂದುವರಿದಿದ್ದು, ಸೋಮವಾರ ಮತ್ತೋರ್ವ ಕರೊನಾ ಬಾಧಿತ ವ್ಯಕ್ತಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ದುಬೈನಿಂದ ಮಾರ್ಚ್ 18ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸುಳ್ಯದ ಅಜ್ಜಾವರದಲ್ಲಿರುವ ಮನೆಗೆ ತೆರಳಿದ್ದ 34 ವರ್ಷದ ಯುವಕ 10 ದಿನಗಳ ಬಳಿಕ 28ರಂದು ರೋಗಲಕ್ಷಣಗಳೊಂದಿಗೆ ವೆನ್ಲಾಕ್‌ಗೆ ದಾಖಲಾಗಿದ್ದರು. 31ರಂದು ಅವರ ಪರೀಕ್ಷಾ ವರದಿ ಪಾಸಿಟಿವ್ ಆಗಿತ್ತು. ಚಿಕಿತ್ಸೆ ಪೂರ್ಣಗೊಂಡು, ಏ.11, 12ರಂದು ಎರಡು ಬಾರಿಯ ಗಂಟಲು ದ್ರವ ಪರೀಕ್ಷೆಯಲ್ಲೂ ವರದಿ ನೆಗೆಟಿವ್ ಬಂದಿದೆ. ಅವರನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ದಾಖಲಾಗಿರುವ 12 ಮಂದಿ ಕರೊನಾ ಬಾಧಿತರ ಪೈಕಿ ಒಟ್ಟು 8 ಮಂದಿ ಬಿಡುಗಡೆಯಾದಂತಾಗಿದ್ದು, ನಾಲ್ಕು ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾರಂಭದ ಹಂತದಲ್ಲಿ 12 ಪಾಸಿಟಿವ್ ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ದ.ಕ ಜಿಲ್ಲೆ ಈಗ ನಿಯಂತ್ರಣ ಕ್ರಮಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ 6ನೇ ಸ್ಥಾನಕ್ಕೆ ಇಳಿದಿದೆ.

ಸೋಮವಾರ 72 ಮಂದಿಯ ಸ್ಕ್ರೀನಿಂಗ್ ಕೈಗೊಳ್ಳಲಾಗಿದ್ದು, ಸೋಮವಾರ 1731 ಮಂದಿ ಮನೆಯ ಕ್ವಾರಂಟೈನ್‌ನಲ್ಲಿದ್ದಾರೆ. 4342 ಮಂದಿ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. ಸೋಮವಾರ 18 ಮಂದಿಯ ಸ್ಯಾಂಪಲ್‌ಗೆ ಕಳುಹಿಸಲಾಗಿದ್ದ, ಸೋಮವಾರ ಲಭ್ಯವಾಗಿರುವ ಎಲ್ಲಾ 26 ಸ್ಯಾಂಪಲ್ ವರದಿಗಳೂ ನೆಗೆಟಿವ್ ಆಗಿವೆ. 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ನಿಗಾದಲ್ಲಿರಿಸಲಾಗಿದೆ.

ಮನೆ ಮನೆ ಭೇಟಿ: ಕರೊನಾ ನಿಯಂತ್ರಣಕ್ಕಾಗಿ ಆಶಾ ಕಾರ್ಯಕರ್ತೆಯರು ಮತ್ತು ಬಹೂಪಯೋಗಿ ಕಾರ್ಯಕರ್ತೆಯರು(ಎಂಪಿಡಬ್ಲ್ಯು)ಗಳು ಮನೆ ಮನೆ ಭೇಟಿ ನೀಡಿ ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬಂದು ಯಜಮಾನನ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಆರೋಗ್ಯ ಸಮಸ್ಯೆಗಳಿದ್ದರೆ ಮಾಹಿತಿ ಪಡೆಯಲಿದ್ದಾರೆ. ಪ್ರತಿ ಕುಟುಂಬದ ಹಿತರಕ್ಷಣೆಯ ಸಲುವಾಗಿ ಈ ಮಾಹಿತಿ ಸಂಗ್ರಹಿಸಲಾಗುತ್ತಿದೆ ಹೊರತು ದಾಖಲೆ ಪಡೆಯಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ 41 ಮಂದಿಯದು ನೆಗೆಟಿವ್

ಉಡುಪಿ: ಜಿಲ್ಲಾಡಳಿತ ಸೋಮವಾರ ಸ್ವೀಕರಿಸಿದ ಎಲ್ಲ 41 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ.

ತೀವ್ರತರದ ಶ್ವಾಸಕೋಶದ ಸೋಂಕಿನ ಸಮಸ್ಯೆ ಇಬ್ಬರು, ಕೊವಿಡ್ -19 ಸೋಂಕಿತರ ಸಂಪರ್ಕವಾದ 51 ಮಂದಿಯ ಮಾದರಿಯನ್ನು ಸೋಮವಾರ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸೋಮವಾರ ಐದು ಮಂದಿ ಮಹಿಳೆಯರು, ಮೂವರು ಪುರುಷರು ಸೇರಿದಂತೆ ಒಟ್ಟು 8 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 56 ಮಂದಿಯ ವರದಿ ಬರಲು ಬಾಕಿ ಇದೆ. ಸೋಮವಾರಕ್ಕೆ 141 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 10 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ 29 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಾಸರಗೋಡಿನಲ್ಲಿ ಪ್ರಮಾಣ ಇಳಿಕೆ

ಕಾಸರಗೋಡು: ಕೇರಳದಲ್ಲಿ ಸೋಮವಾರ ಮೂವರಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಸೋಮವಾರ 12 ಮಂದಿ ವೈರಸ್ ಮುಕ್ತರಾಗಿರುವುದು ಒಂದಷ್ಟು ಸಮಾಧಾನ ತಂದುಕೊಟ್ಟಿದೆ.

ಕೇರಳ ರಾಜ್ಯದಲ್ಲಿ ಇದುವರೆಗೆ 378 ಮಂದಿಗೆ ಕೊವಿಡ್-19 ಬಾಧಿಸಿದ್ದು, ಪ್ರಸಕ್ತ 178 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. 112183 ಮಂದಿ ರಾಜ್ಯದಲ್ಲಿ ನಿಗಾದಲ್ಲಿದ್ದು, ಇವರಲ್ಲಿ 111468 ಮಂದಿ ಮನೆ ಹಾಗೂ 715 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಸೋಮವಾರ 86 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ 12 ಮಂದಿ ಕರೊನಾ ಮುಕ್ತರಾಗಿ ತೆರಳುವುದರೊಂದಿಗೆ ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ರೋಗಿಗಳ ಸಂಖ್ಯೆ 93ಕ್ಕಿಳಿದಿದೆ. ಕರೊನಾ ಬಾಧಿಸಿ ನೂರಾರು ಮಂದಿಯ ಸಂಪರ್ಕಕ್ಕೆ ಕಾರಣರಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನಗರದ ಎರಿಯಾಲ್ ನಿವಾಸಿ ಸಹಿತ 23 ಮಂದಿ ಭಾನುವಾರ ಒಂದೇ ದಿನ ಆಸ್ಪತ್ರೆಯಿಂದ ನಿರ್ಗಮಿಸಿದ್ದರು. ಜಿಲ್ಲೆಯಲ್ಲಿ 10056 ಮಂದಿ ನಿಗಾದಲ್ಲಿದ್ದು, ಇವರಲ್ಲಿ 9840 ಮಂದಿ ಮನೆ ಹಾಗೂ 216 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.