ಮಂಗಳೂರು: ಚುನಾವಣೆ ಬಂದಾಗ ಮತ ಹಾಕಿಸಲು ಹೊರರಾಜ್ಯ, ವಿದೇಶಗಳಲ್ಲಿ ಇರುವ ನಮಗೆ ಪೂರ್ಣ ವ್ಯವಸ್ಥೆ ಮಾಡಿ, ಎಲ್ಲ ಖರ್ಚು ವೆಚ್ಚ ಭರಿಸಿ ಊರಿಗೆ ಕರೆತರುತ್ತೀರಿ. ಈಗ ತಿನ್ನಲು, ಉಳಿದುಕೊಳ್ಳಲು ವ್ಯವಸ್ಥೆಗೆ ಪರದಾಡುತ್ತಿರುವ ನಮ್ಮನ್ನು ಊರಿಗೆ ಕರೆತರುವುದು ಸರ್ಕಾರ ನಡೆಸುವ ನಿಮಗೆ ಅಸಾಧ್ಯವೇ?
ಇದು ಲಾಕ್‌ಡೌನ್ ಸಂದರ್ಭ ವಿವಿಧ ರಾಷ್ಟ್ರಗಳು ಹಾಗೂ ದೂರದ ಊರುಗಳಲ್ಲಿ ಬಾಕಿಯಾಗಿರುವ ಕರಾವಳಿಯ ಕನ್ನಡಿಗರು ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ಜಿಲ್ಲಾಡಳಿತ, ಸರ್ಕಾರದ ಮುಂದಿಡುತ್ತಿರುವ ಪ್ರಶ್ನೆ.
ಮುಂಬೈಯ ಹೋಟೆಲ್ಗಳಲ್ಲಿ ಸಾಮಾನ್ಯ ಕಾರ್ಮಿಕರಾಗಿ ದುಡಿಯುವಂತಹ ಜನರಿಗೆ ಊಟ ಮಾಡುವುದಕ್ಕೂ ಕಷ್ಟವಾಗಿದೆ. ರೇಷನ್ ಕಾರ್ಡ್ ಇಲ್ಲದಿರುವುದರಿಂದ ಪಡಿತರ ಸಾಮಗ್ರಿ ಪಡೆಯುವುದು ಕೂಡ ಕಷ್ಟವಾಗಿದೆ ಎನ್ನುವ ವಾಟ್ಸಾಪ್ ಧ್ವನಿ ಸಂದೇಶವೊಂದು ಇತ್ತೀಚೆಗೆ ವೈರಲ್ ಆಗಿತ್ತು.
ವಿಶೇಷ ವಿಮಾನಕ್ಕೆ ಒತ್ತಾಯ: ಕೊಲ್ಲಿ ರಾಷ್ಟ್ರಗಳ ಆಡಳಿತ ವ್ಯವಸ್ಥೆ ಭಾರತೀಯರಿಗೆ ಬೆಂಬಲ ನೀಡುತ್ತಿದೆ. ಆದರೆ ಬದಲಾದ ಪರಿಸ್ಥಿತಿಯಿಂದ ಇಲ್ಲಿ ಉದ್ಯೋಗ ಕಳೆದುಕೊಂಡವರು, ಸಾಮಾನ್ಯ ಕಾರ್ಮಿಕರು, ಪ್ರವಾಸಿಗರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರನ್ನು ಊರಿಗೆ ಕರೆದೊಯ್ಯಲು ಭಾರತ ಸರ್ಕಾರ ವಿಶೇಷ ವಿಮಾನದ ವ್ಯವಸ್ಥೆ ಮಾಡಬೇಕು. ಇಲ್ಲಿನ ಕನ್ನಡ ಸಂಘಟನೆಗಳು ಈ ವಿಷಯದಲ್ಲಿ ಪೂರ್ಣ ಸಹಕಾರ ಒದಗಿಸಲು ಸಿದ್ಧವಾಗಿರುವುದಾಗಿ ಯುಎಇ ಕನ್ನಡಿಗರ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ವೀಸಾ ಅವಧಿ ಮುಗಿದವರಿಗೆ ಅವಧಿ ವಿಸ್ತರಣೆ ನಡೆಸುವ ಕುರಿತು ಆಡಳಿತ ವ್ಯವಸ್ಥೆ ಭರವಸೆ ನೀಡಿದೆ. ಆದರೆ ಕೆಲಸವನ್ನೇ ಕಳೆದುಕೊಂಡವರಿಗೆ, ಕರೊನಾ ಹೊರತುಪಡಿಸಿ ಇತರ ಆರೋಗ್ಯ ಸಮಸ್ಯೆ ಇರುವವರಿಗೆ, ಸಂದರ್ಶನ ವೀಸಾದಲ್ಲಿ ಬಂದವರಿಗೆ ಇನ್ನಷ್ಟು ದಿನ ಇಲ್ಲಿ ಉಳಿದುಕೊಳ್ಳುವುದು ಕಷ್ಟವಾಗಿದೆ. ಕೆಲವರು, ಉಪಹಾರ, ವಾಸ್ತವ್ಯ ವ್ಯವಸ್ಥೆಗೂ ಪರದಾಡುತ್ತಿದ್ದಾರೆ ಎನ್ನುವ ಆಕ್ಷೇಪಗಳು ಕೇಳಿಬಂದಿವೆ.
ಮುಂಬೈಯಲ್ಲಿ ಒತ್ತಡ ತಂತ್ರ: ಮುಂಬೈ ಮಹಾನಗರದಲ್ಲಿ ಕರಾವಳಿಯ ಜನರು ಮಾತ್ರವಲ್ಲದೆ, ದೇಶದ ವಿವಿಧೆಡೆಗಳ ನಿವಾಸಿಗಳು ಅಧಿಕ ಸಂಖ್ಯೆಯಲ್ಲಿ ಬಾಕಿಯಾಗಿದ್ದಾರೆ. ಅವರಿಗೆ ಅಲ್ಲಿ ಮನೆಗಳಿಂದ ಹೊರಗೆ ಬರಲಾಗದ ಪರಿಸ್ಥಿತಿ ಇದೆ. ಹೇಗಾದರೂ ಊರಿಗೆ ಬರಲು ಜಿಲ್ಲಾಡಳಿತ, ಸರ್ಕಾರ ವ್ಯವಸ್ಥೆ ಮಾಡಬೇಕೆಂಬುದು ಅವರ ಬೇಡಿಕೆ. ಕೆಲದಿನಗಳ ಹಿಂದೆ ಮುಂಬೈಯಲ್ಲಿ ಕಾರ್ಮಿಕರು ಊರು ತಲುಪಲು ಒತ್ತಾಯಿಸಿ ಸಂಘರ್ಷದ ಹಾದಿ ಹಿಡಿದ ಪ್ರಕರಣಗಳು ನಡೆದವು. ಕೇಂದ್ರ ಗೃಹಸಚಿವ ಅಮಿತ್ ಷಾ ಮಹಾರಾಷ್ಟ್ರ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ ಪರಿಸ್ಥಿತಿ ಅವಲೋಕನ ಕೂಡ ನಡೆಸಿದ್ದಾರೆ. ಸದ್ಯ ಯಾವುದೇ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿಲ್ಲ.
ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರಯತ್ನ: ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಎಲ್ಲ ವರದಿಗಳು ಜನರ ಸಾಗಾಟ ಸಂಬಂಧಿಸಿ ಪ್ರತಿಕೂಲವಾಗಿವೆ. ಕೊವಿಡ್ 19 ಸೋಂಕು ಅಪಾಯಕಾರಿ ಸ್ಥಿತಿಯಲ್ಲಿ ಇರುವ ದೇಶ ಮತ್ತು ನಗರಗಳಲ್ಲಿ ಇರುವವರನ್ನು ಕರೆ ತರುವುದಕ್ಕೆ ಜನರೂ ವಿರೋಧವಾಗಿದ್ದಾರೆ. ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಬಗೆಹರಿಸಿಕೊಳ್ಳಬಹುದಾದ ವಿಷಯ. ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಕರಾವಳಿಯ ಜನರು ದೂರದ ಊರು, ಹೊರ ರಾಷ್ಟ್ರಗಳಲ್ಲಿ ಬಾಕಿಯಾದವರಲ್ಲಿ ಕೆಲವರು ಭಿನ್ನವಾದ ಸಮಸ್ಯೆ ಎದುರಿಸುತ್ತಿದ್ದಾರೆ. ತುರ್ತಾಗಿ ಅವರು ಇರುವ ಕಡೆಯಲ್ಲೇ ಸುರಕ್ಷಿತವಾಗಿ ಮತ್ತು ಸೂಕ್ತ ವ್ಯವಸ್ಥೆ ಪಡೆಯಲು ಏನು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ನಂತರದ ಹಂತದಲ್ಲಿ ಅವರನ್ನು ಊರಿಗೆ ಕರೆತರಲು ವ್ಯವಸ್ಥೆ ಆಗಲಿದೆ.
ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ