ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 19ರ ನಂತರ ನಗರದ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯ ಸಂಪರ್ಕಿತರಲ್ಲಷ್ಟೇ ಕರೊನಾ ಸೋಂಕು ಪತ್ತೆಯಾಗುತ್ತಿದೆ. ಶನಿವಾರ ಬಂಟ್ವಾಳದ ಒಂದೇ ಮನೆಯ ಮೂವರಿಗೆ ಸೋಂಕು ಖಚಿತವಾಗಿದ್ದು, ಇದರೊಂದಿಗೆ ಒಂದೇ ಕೇಂದ್ರದಿಂದ ಸೋಂಕು ಪಡೆದುಕೊಂಡವರ ಸಂಖ್ಯೆ ಜಿಲ್ಲೆಯಲ್ಲಿ 17ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಒಟ್ಟು ಪ್ರಕರಣ 25ಕ್ಕೆ ಮುಟ್ಟಿದೆ.
ಜಿಲ್ಲೆಯಲ್ಲಿನ ಮೊದಲ ಸಾವಿನ ಪ್ರಕರಣದ ರೋಗಿ, ಬಂಟ್ವಾಳ ಕಸ್ಬಾ ನಿವಾಸಿ 50 ವರ್ಷದ ಮಹಿಳೆಯ (ರೋಗಿ-390) ಸಂಪರ್ಕದಿಂದ ನೆರೆಮನೆಯ 69ರ ವೃದ್ಧ (ರೋಗಿ- 578)ರಿಗೂ ಸೋಂಕು ತಗುಲಿರುವುದು ಮೇ 1ರಂದು ಖಚಿತವಾಗಿತ್ತು. ಅವರ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸ್ಯಾಂಪಲ್ ಪರೀಕ್ಷೆಯ ವರದಿ ಶನಿವಾರ ಲಭಿಸಿದೆ. ಅದರಲ್ಲಿ ಮನೆಯ ಮೂವರು ಸದಸ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
30 ವರ್ಷದ ಪುರುಷ (ರೋಗಿ- 777), 60 ವರ್ಷದ ಮಹಿಳೆ (ರೋಗಿ-778) ಹಾಗೂ 70ರ ವೃದ್ಧೆ (ರೋಗಿ-779) ಮೂವರನ್ನೂ ಈಗ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿ-578 ಅವರದ್ದು ಅವಿಭಕ್ತ ಕುಟುಂಬವಾಗಿದ್ದು, 10ರಷ್ಟು ಸದಸ್ಯರು ಒಟ್ಟಿಗೆ ವಾಸಿಸುತ್ತಿದ್ದರು. ಅದರಿಂದ ಸುಲಭವಾಗಿ ಕೋವಿಡ್ ಹಬ್ಬುವಂತಾಗಿದೆ. ಇನ್ನುಳಿದವರ ಇದುವರೆಗಿನ ಪರೀಕ್ಷೆಯ ವರದಿಗಳು ನೆಗೆಟಿವ್ ಬಂದಿವೆ.
ಸದ್ಯ ಫಸ್ಟ್ ನ್ಯೂರೋ ಆಸ್ಪತ್ರೆ, ಬಂಟ್ವಾಳ ಕಸ್ಬಾ, ನರಿಮೊಗರು, ಬೋಳೂರು, ಶಕ್ತಿನಗರ ಇವು ಕೋವಿಡ್ ಕೇಂದ್ರೀಕೃತ ಸ್ಥಳಗಳು. ಅದರಲ್ಲಿ ಶಕ್ತಿನಗರ ಮತ್ತು ನರಿಮೊಗರು ಪ್ರಕರಣಗಳಲ್ಲಿ ಇನ್ನು ಹರಡುವ ಸಾಧ್ಯತೆ ಕಡಿಮೆ. ಉಳಿದ ಪ್ರಕರಣಗಳಲ್ಲೂ ಬಹುತೇಕ ಸ್ಯಾಂಪಲ್‌ಗಳೂ ನೆಗೆಟಿವ್ ಇವೆ. 12ನೇ ದಿನದ ಪರೀಕ್ಷಾ ವರದಿ ಬರುವುದು ಬಾಕಿ ಇದ್ದು ಕುತೂಹಲ ಹೆಚ್ಚಿಸಿದೆ.
ಶನಿವಾರ ಒಟ್ಟು 102 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ, 32 ಮಂದಿ ಎನ್‌ಐಟಿಕೆ, 40 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ. 89 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು ಸ್ವೀಕರಿಸಲಾದ 42ರಲ್ಲಿ ಮೂರು ಪಾಸಿಟಿವ್ ಹಾಗೂ 39 ನೆಗೆಟಿವ್ ಆಗಿರುತ್ತವೆ. ಇನ್ನೂ 286ರ ವರದಿ ಬರಲು ಬಾಕಿ ಇದೆ.
10 ಮಂದಿಯನ್ನು ನಿಗಾ ಇರಿಸುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, 10 ಉಸಿರಾಟದ ತೊಂದರೆ ಇರುವ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.
38 ಪ್ರಕರಣಗಳಿಗೆ ಒಂದೇ ಮೂಲ!
ದಕ್ಷಿಣ ಕನ್ನಡ ಜಿಲ್ಲೆಯ 17 ಹಾಗೂ ಭಟ್ಕಳದ 21 ಪ್ರಕರಣಗಳಿಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕವಿರುವುದು ಕಂಡುಬಂದಿದೆ. ಏಪ್ರಿಲ್ ಎರಡನೇ ವಾರ ಫಸ್ಟ್ ನ್ಯೂರೋಗೆ ಚಿಕಿತ್ಸೆಗೆಂದು ಬಂದಿದ್ದ ಭಟ್ಕಳದ ಕುಟುಂಬ ಮರಳಿದ್ದು, ವಿಚಾರವನ್ನು ಅಲ್ಲಿ ಆರೋಗ್ಯ ಇಲಾಖೆಗೆ ತಿಳಿಸಿರಲಿಲ್ಲ. ಇದರಲ್ಲಿ ಪಿ-659 ಪ್ರಥಮ ಸೋಂಕಿತ 18 ವರ್ಷದ ಯುವತಿಯಾಗಿದ್ದು, ದ್ವಿತೀಯ ಸಂಪರ್ಕದಿಂದ ಕಳೆದೆರಡು ದಿನಗಳಲ್ಲಿ ಒಟ್ಟು 21 ಪಾಸಿಟಿವ್ ಪ್ರಕರಣಗಳು ಭಟ್ಕಳದಲ್ಲಿ ದಾಖಲಾಗಿವೆ.
ದಕ್ಷಿಣ ಕನ್ನಡದಲ್ಲಿ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ಅತ್ತೆ(ಪಿ-432)ರನ್ನು ನೋಡಲು ಹೋಗಿದ್ದ ಬಂಟ್ವಾಳದ ಮಹಿಳೆ(ಪಿ-390) ಸೋಂಕು ದೃಢಪಟ್ಟು ಮೃತಪಟ್ಟಿದ್ದರು. ಅಲ್ಲಿಂದ ತೊಡಗಿ, ಬಂಟ್ವಾಳದ ಒಟ್ಟು 10, ಶಕ್ತಿನಗರದ 2 ಹಾಗೂ ಬೋಳೂರಿನ 5 ಪ್ರಕರಣಗಳು ಈ ಆಸ್ಪತ್ರೆ ಸಂಪರ್ಕ ಹೊಂದಿವೆ.
ಆಸ್ಪತ್ರೆ ಮೇಲೆ ಪ್ರಕರಣ ದಾಖಲಿಸುವುದಕ್ಕೆ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಯಲ್ಲಿ ಅವಕಾಶವಿಲ್ಲ. ಯಾವುದೇ ಆಸ್ಪತ್ರೆಗೂ ಕೋವಿಡ್ ಸೋಂಕು ಬರುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳುತ್ತಾರೆ. ಫಸ್ಟ್ ನ್ಯೂರೋಗೆ ಕೇರಳದಿಂದ ಚಿಕಿತ್ಸೆಗೆ ಬಂದ ರೋಗಿಗಳಿಂದ ಮಾಹಿತಿ ಪಡೆಯಲಾಗಿದೆ. ಅನೇಕರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅವರೆಲ್ಲರೂ ಆರೋಗ್ಯವಾಗಿದ್ದಾರೆ, ಕೆಲವರಿಗೆ ಪತ್ರ ಮುಖೇನ ಮಾಹಿತಿ ಕೇಳಿದ್ದೇವೆ, ಎಲ್ಲರಿಂದಲೂ ಮಾಹಿತಿ ಸಿಕ್ಕಿಲ್ಲ ಎನ್ನುತ್ತಾರೆ ಡಾ.ಬಾಯರಿ.
ಬಂಟ್ವಾಳ ಪೇಟೆ ಜನತೆಯಲ್ಲಿ ಆತಂಕ
ಬಂಟ್ವಾಳ: ಬಂಟ್ವಾಳ ಪೇಟೆ ಶಾಲೆಯ ರಸ್ತೆ ಪಕ್ಕದ ಒಂದೇ ಮನೆಯ ಮೂವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಹೆಚ್ಚಿಸಿದೆ. ಇದರೊಂದಿಗೆ ಬಂಟ್ವಾಳ ಪೇಟೆಯಲ್ಲೇ 9 ಪ್ರಕರಣಗಳು ಹಾಗೂ ತಾಲೂಕಿನಲ್ಲಿ ಒಟ್ಟು 12 ಪ್ರಕರಣಗಳು ದಾಖಲಾದಂತಾಗಿದೆ. ಸಜಿಪನಡು ಮತ್ತು ತುಂಬೆಯ ಇಬ್ಬರು ಗುಣಮುಖರಾಗಿದ್ದಾರೆ. ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಪೇಟೆಯ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಇಬ್ಬರು ಪುರುಷರು, ಮೂವರು ಮಹಿಳೆಯರು ಮತ್ತು ಒಬ್ಬ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿಯಲ್ಲಿ 16 ವರದಿ ನೆಗಟಿವ್
ಉಡುಪಿ: ಕರೊನಾ ಶಂಕೆ ಹಿನ್ನೆಲೆಯಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಗಳ 16 ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. 163 ವರದಿಗಳು ಬರಲು ಬಾಕಿ ಇದೆ. ಶನಿವಾರ 67 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇವುಗಳಲ್ಲಿ 8 ಮಂದಿ ತೀವ್ರ ಉಸಿರಾಟ ಸಮಸ್ಯೆ, 1 ಕರೊನಾ ಪಾಸಿಟಿವ್ ವ್ಯಕ್ತಿ ಜತೆಗೆ ಸಂಪರ್ಕ, 8 ಅನಾರೋಗ್ಯ, ಕರೊನಾ ಹಾಟ್‌ಸ್ಪಾಟ್ ಭೇಟಿ ನೀಡಿದ 50 ಮಂದಿ ಸೇರಿದ್ದಾರೆ. 12 ಪುರುಷರು ಹಾಗೂ 5 ಮಂದಿ ಮಹಿಳೆಯರ ಸಹಿತ 17 ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದು, 8 ಮಂದಿ ಬಿಡುಗಡೆ ಹೊಂದಿದ್ದಾರೆ. 124 ಮಂದಿ 28 ದಿನದ ನಿಗಾವಣೆ, 73 ಮಂದಿ 14 ದಿನದ ನಿಗಾ ಅವಧಿ ಪೂರೈಸಿದ್ದಾರೆ.
ಕಾಸರಗೋಡಿನಲ್ಲಿ ಹೊಸ ಪ್ರಕರಣ ಇಲ್ಲ
ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ಯಾರಿಗೂ ಕೋವಿಡ್ ಸೋಂಕು ಖಚಿತವಾಗಿಲ್ಲ. ಜಿಲ್ಲೆಯ 178 ಸೋಂಕಿತರ ಪೈಕಿ 177 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಮನೆಗಳಲ್ಲಿ 896 ಮಂದಿ ಹಾಗೂ ಆಸ್ಪತ್ರೆಗಳಲ್ಲಿ 93 ಮಂದಿ ನಿಗಾದಲ್ಲಿದ್ದಾರೆ. ಶನಿವಾರ ನೂತನವಾಗಿ 28 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 5064 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4442 ಮಂದಿಯ ಸ್ಯಾಂಪಲ್ ನೆಗೆಟಿವ್ ಆಗಿದೆ. 219 ಮಂದಿಯ ಫಲಿತಾಂಶ ಸಿಗಬೇಕಿದೆ. ಕೇರಳದಲ್ಲಿ ಶನಿವಾರ ಹೊಸದಾಗಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ಸೋಂಕಿತರೂ ಶುಕ್ರವಾರ ವಿಮಾನದ ಮೂಲಕ ವಿದೇಶದಿಂದ ಆಗಮಿಸಿದವರು.
ಕರಾವಳಿಗೆ ಎರಡನೇ ಕರೊನಾ ಲ್ಯಾಬ್
ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್‌ಗಾಗಿ ವೆನ್ಲಾಕ್‌ನಲ್ಲಿರುವ ಲ್ಯಾಬ್ ಮೇಲೆ ಒತ್ತಡ ಹೆಚ್ಚುತ್ತಿರುವಾಗಲೇ ಯೆನಪೊಯ ವೈದ್ಯಕೀಯ ಕಾಲೇಜಿನ ಲ್ಯಾಬ್‌ಗೂ ಕೋವಿಡ್ ಪರೀಕ್ಷೆ ನಡೆಸಲು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ಅನುಮತಿ ನೀಡಿದೆ.
ಎರಡು ದಿನಗಳ ಹಿಂದೆಯೇ ಅನುಮತಿ ಲಭಿಸಿದ್ದು, ಶನಿವಾರ ಕರೊನಾ ಟೆಸ್ಟ್ ಶುರು ಮಾಡಲಾಗಿದೆ. ಇದೇ ಹಾದಿಯಲ್ಲಿ ಮಂಗಳೂರಿನ ಕೆಎಂಸಿ ಹಾಗೂ ಫಾದರ್ ಮುಲ್ಲರ್ಸ್ ಕಾಲೇಜು ಕೂಡ ಇದ್ದು, ಕೆಲ ದಿನಗಳಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ.
84 ಸ್ಯಾಂಪಲ್ ಟೆಸ್ಟ್: ಕರಾವಳಿಯ ವಿವಿಧ ಭಾಗಗಳಲ್ಲಿರುವ ವೃತ್ತಿನಿರತರು, ವಿದ್ಯಾರ್ಥಿಗಳೂ ಸೇರಿದಂತೆ ಲಕ್ಷದ್ವೀಪ ಮೂಲದ 84 ಮಂದಿಯನ್ನು ಲಕ್ಷದ್ವೀಪಕ್ಕೆ ಕಳುಹಿಸಬೇಕಾಗಿದೆ. ಅಲ್ಲಿನ ಹಡಗು ಕೂಡ ಮಂಗಳೂರಿಗೆ ಬರಲಿದ್ದು, ತೆರಳಬೇಕಾದರೆ ಈ ನಿವಾಸಿಗಳು ಕರೊನಾ ಟೆಸ್ಟ್‌ನಲ್ಲಿ ನೆಗೆಟಿವ್ ಬರಬೇಕು. ಯಾಕೆಂದರೆ ಇದುವರೆಗೆ ಲಕ್ಷದ್ವೀಪದಲ್ಲಿ ಒಂದೂ ಕರೊನಾ ಪಾಸಿಟಿವ್ ಕೇಸ್ ಬಂದಿಲ್ಲ. ಅದಕ್ಕಾಗಿ ಈ ಮಂದಿಯ ಪರೀಕ್ಷೆಯನ್ನು ಯೆನಪೊಯ ಲ್ಯಾಬ್‌ನಲ್ಲಿ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಂದ 2 ಸ್ಯಾಂಪಲ್‌ಗಳೂ ಬಂದಿವೆ.