ಜಿಲ್ಲೆ

ಯೋಧನಿಗೂ ಕರೊನಾ ಸೋಂಕು ; ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ

ತುಮಕೂರು: ಜಿಲ್ಲೆಯಲ್ಲಿ ಇನ್ನೆರಡು ಕರೊನಾ ಪ್ರಕರಣ ದೃಢಪಟ್ಟಿದೆ. ದೆಹಲಿಯಿಂದ ಹಿಂದಿರುಗಿದ್ದ ಪಾವಗಡ ತಾಲೂಕಿನ ತಿರುಮಣಿಯ ಯೋಧ ಹಾಗೂ ಮುಂಬೈನ ಹೋಟೆಲ್‌ನಲ್ಲಿ ಪರಿಚಾರಕನಾಗಿದ್ದ ಕುಣಿಗಲ್ ಮೂಲದ ವ್ಯಕ್ತಿಗೂ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 30ಕ್ಕೇರಿದೆ.

ಮೇ 25ರಂದು ಬೆಂಗಳೂರಿಗೆ ದೆಹಲಿಯಿಂದ ರೈಲಿನಲ್ಲಿ ಬಂದಿಳಿದು ಪಾವಗಡಕ್ಕೆ ಸ್ವಂತ ವಾಹನದಲ್ಲಿ ಬಂದಿದ್ದ 30 ವರ್ಷದ ಸೋಂಕಿತ ಪಟ್ಟಣದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಹೊರರಾಜ್ಯದಿಂದ ಬಂದಿದ್ದರಿಂದ 26ರಂದು ಗಂಟಲುದ್ರವ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದು, ಶುಕ್ರವಾರ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕಿತನನ್ನು ಪಿ-2771 ಎಂದು ಗುರುತಿಸಲಾಗಿದ್ದು, ಈತನ ಜತೆಯಲ್ಲಿದ್ದ ಮೂವರನ್ನು ಪ್ರಾಥಮಿಕ ಸಂಪರ್ಕ ದಲ್ಲಿದ್ದವರೆಂದು ಪರಿಗಣಿಸಿ ಪ್ರತ್ಯೇಕವಾಗಿ ಇನ್ಸ್ಟಿಟುಷನ್ ಕ್ವಾರಂಟೈನ್‌ನಲ್ಲಿರಿಸ ಲಾಗಿದೆ. ಸೋಂಕಿತನನ್ನು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಯಾವುದೇ ಸೋಂಕಿನ ಲಕ್ಷಣಗಳಿರಲಿಲ್ಲ.

ಕುಣಿಗಲ್‌ಗೆ ವಕ್ಕರಿಸಿದ ಕರೊನಾ: ಮುಂಬೈನಿಂದ ಲಾರಿಯಲ್ಲಿ ಬಂದು ತುಮಕೂರು ಗಡಿಭಾಗದ ಚೆಕ್‌ಪೋಸ್ಟ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ 22 ವರ್ಷದ ವ್ಯಕ್ತಿಯನ್ನು ಕುಣಿಗಲ್ ತಾಲೂಕಿನ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಮೇ 14ರಂದು ಜಿಲ್ಲೆಗೆ ಬಂದಿದ್ದ ಈ ವ್ಯಕ್ತಿಯ ಗಂಟಲುದ್ರವ ಮಾದರಿಯನ್ನು ಮೊದಲ ಬಾರಿಗೆ ಪರೀಕ್ಷೆಗೆ ಕಳುಹಿಸಿದಾಗ ನೆಗೆಟಿವ್ ಬಂದಿತ್ತು.

2ನೇ ಬಾರಿ ಸೋಂಕು ದೃಢ: 26ರಂದು 2ನೇ ಬಾರಿ ಪರೀಕ್ಷೆಗೆ ಕಳುಹಿಸಿದ್ದು ಸೋಂಕು ದೃಢಪಟ್ಟಿದೆ. ಈತನ ಜತೆಯಲ್ಲಿದ್ದ ಇಬ್ಬರನ್ನು ಪ್ರಾಥಮಿಕಸಂಪರ್ಕದಲ್ಲಿದ್ದವರೆಂದು ಪರಿಗಣಿಸಿ ಪ್ರತ್ಯೇಕ ವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈತನಿಗೂ ಯಾವುದೇ ಕರೊನಾ ಸಂಬಂಧಿಸಿದ ರೋಗ ಲಕ್ಷಣಗಳಿರಲಿಲ್ಲ.

22 ವರ್ಷದ ಸೋಂಕಿತನನ್ನು ಪಿ-2772 ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿ-792 ಗುಣಮುಖ: ಈ ಮಧ್ಯೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ಸೋಂಕಿತ ಪಿ-792 ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ.

ಕರೊನಾ ಪರೀಕ್ಷಾ ಲ್ಯಾಬ್‌ಗೆ ಚಾಲನೆ: ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಪರೀಕ್ಷಾ ನೂತನ ಆರ್‌ಟಿಪಿಸಿಆರ್ ಲ್ಯಾಬ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಉದ್ಘಾಟಿಸಿದರು. ಪ್ರತಿದಿನ 280 ಟೆಸ್ಟ್‌ಗಳನ್ನು ಮಾಡುವ ಸೌಲಭ್ಯವಿದ್ದು, ಸದ್ಯಕ್ಕೆ ಕರೊನಾ ಪರೀಕ್ಷೆ ಮಾಡಲಾಗುವುದು. ಈ ಪ್ರಯೋಗಾಲಯದಲ್ಲಿ ಚಿಕೂನ್‌ಗುನ್ಯಾ, ಎಚ್1ಎನ್1, ಡೆಂೆ ಟೆಸ್ಟ್‌ಗಳು ಸೇರಿ ವೈರಸ್‌ಗೆ ಸಂಬಂಧಿಸಿದ ರೋಗಗಳನ್ನು ಪರೀಕ್ಷೆ ನಡೆಸಲಾಗುವುದು. ಈ ಹಿಂದೆ ಕರೊನಾ ಪರೀಕ್ಷೆಗಳನ್ನು ನಡೆಸಲು ಬೆಂಗಳೂರು, ಹಾಸನಕ್ಕೆ ಮಾದರಿಗಳನ್ನು ಕಳುಹಿಸಬೇಕಾಗಿತ್ತು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ಲ್ಯಾಬ್ ಆರಂಭಿಸುವುದರಿಂದ ಜಿಲ್ಲೆಯಲ್ಲಿ ಕರೊನಾ ಪರೀಕ್ಷೆಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದರು.

ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಡಿಎಚ್‌ಒ ಡಾ.ನಾಗೇಂದ್ರಪ್ಪ, ಮೈಕ್ರೋ ಬಾಯಾಲಜಿಸ್ಟ್ ಡಾ.ರುಕ್ಮಿಣಿ, ಪ್ರಯೋಗಾಲಯ ಸಿಬ್ಬಂದಿ ಸುರೇಶ್ ಹಾಗೂ ಉಮೇಶ್ ಇದ್ದರು.