ತುಮಕೂರು: ಕೆಲವು ದಿನಗಳ ನಂತರ ಜಿಲ್ಲೆಯ ಶಿರಾ ನಗರದಲ್ಲಿ ಕರೊನಾ ವೈರಸ್ ಮತ್ತೆ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಿಂದ ಆಗಮಿಸಿದ್ದ ಎರಡು ಕುಟುಂಬದ ನಾಲ್ವರಲ್ಲಿ ಸೋಂಕು ಕಂಡುಬಂದಿದೆ.
ಮುಂಬೈನಿಂದ ಒಂದೇ ವಾಹನದಲ್ಲಿ 2 ಕುಟುಂಬದ ಒಟ್ಟು 6 ಜನರು ಜಿಲ್ಲೆಗೆ ಬಂದಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15ಕ್ಕೇರಿದ್ದು, ಬುಧವಾರ ಪತ್ತೆಯಾದ 4 ಜನರನ್ನೂ ಸೇರಿಸಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 8 ಆಕ್ವೀವ್ ಕೇಸ್‌ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಬೈನಿಂದ ಬಂದ ದಿನವೇ ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಜತೆಗೆ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ನಾಲ್ವರಲ್ಲಿ ಸೋಂಕು ದೃಢವಾಗಿದೆ. ಅವರ ಜತೆಯೇ ಬಂದಿರುವ ಇಬ್ಬರು ಪುರುಷರ ವರದಿ ನೆಗೆಟಿವ್ ಬಂದಿರುವುದು ತುಸು ನೆಮ್ಮದಿ ತಂದಿದೆ. ಸೋಂಕು ದೃಢವಾದ ಕೂಡಲೇ ನಾಲ್ವರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಅವರಲ್ಲಿ ಯಾರಿಗೂ ರೋಗ ಲಕ್ಷಣಗಳು ಕಾಣಿಸುತ್ತಿಲ್ಲ. ಇವರಿಗೆ ಸ್ಥಳೀಯವಾಗಿ ಯಾವುದೇ ಪ್ರಾಥಮಿಕ ಸಂಪರ್ಕ ಇಲ್ಲದಿರುವುದು ಶಿರಾ ನಗರವಾಸಿಗಳ ಆತಂಕವನ್ನು ಸ್ವಲ್ಪ ತಗ್ಗಿಸಿದೆ. ಮುಂಬೈನಿಂದ ಬರುವ ಸಂದರ್ಭದಲ್ಲಿ ಎರಡು ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ದರು ಎನ್ನಲಾಗಿದ್ದು ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಿಂದ ಕಾಣೆಯಾಗುತ್ತಿದ್ದ ಕರೊನಾ ಮುಂಬೈ ಮೂಲಕ ಮತ್ತೆ ವಕ್ಕರಿಸಿದೆ.
ವದಂತಿಯದ್ದೇ ಕಾರುಬಾರು!: ತುಮಕೂರು ಜಿಲ್ಲೆಯಲ್ಲಿ 4 ಪಾಸಿಟಿವ್ ದೃಢವಾಗಿರುವ ಬಗ್ಗೆ ಮಧ್ಯಾಹ್ನದ ಬುಲಿಟಿನ್‌ನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ್ದೇ ತಡ ಜಿಲ್ಲೆಯಲ್ಲಿ ವದಂತಿಗಳಿಗೆ ರೆಕ್ಕೆ ಬಂದು ಹರಿದಾಡಿದವು. ಹುಳಿಯಾರು ಪಟ್ಟಣದವರಂತೆ, ತುರುವೇಕೆರೆಯಂತೆ, ತುಮಕೂರು ನಗರದವರಂತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡಲಾರಂಭಿಸಿತು. ಜಿಲ್ಲಾಧಿಕಾರಿ ಅವರು ವಿಡಿಯೋ ಪ್ರಕಟಣೆ ನೀಡಿದ ನಂತರ ವದಂತಿಗಳಿಗೆ ತೆರೆಬಿತ್ತು.
ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ನೆರೆಯ ರಾಜ್ಯಗಳಿಂದ ಜಿಲ್ಲೆಗೆ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಸಾರ್ವಜನಿಕರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಜನರು ದೈಹಿಕ ಅಂತರ ಕಾಪಾಡಿಕೊಂಡು ಹೆಚ್ಚು ಜಾಗೃತರಾಗಿರಬೇಕು. ಡಾ.ಕೆ.ರಾಕೇಶ್‌ಕುಮಾರ್ ಡಿಸಿ