ಬೆಳಗಾವಿ: ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದಿರುವ ಕರೊನಾ ಸೋಂಕಿತರನ್ನು ಸಾಮೂಹಿಕ ಕ್ವಾರಂಟೈನಲ್ಲಿಡಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮ ಖಂಡಿಸಿ ಸೋಮವಾರ ನಗರದ ಪಾಂಗೂಳ ಗಲ್ಲಿಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
ನಗರದ ಖಡೇಬಜಾರ್ ನಲ್ಲಿರುವ ಖಾಸಗಿ ಲಾಡ್ಜ್ ವೊಂದರಲ್ಲಿ ಜಮಾತ್‌ನಲ್ಲಿ ಪಾಲ್ಗೊಂಡು ಬಂದಿರುವ ಹುಕ್ಕೇರಿ ತಾಲೂಕಿನವರನ್ನು ಸಾಮೂಹಿಕ ಕ್ವಾರಂಟೈನಲ್ಲಿಡಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕು ಎಂದು ಮಹಿಳೆಯರು ಆಗ್ರಹಿಸಿದರು. ನಗರದ ಲಾಡ್ಜ್ ಸುತ್ತಮುತ್ತ ಬಡವರು, ಕೂಲಿ ಕಾರ್ಮಿಕರು, ರೈತರು ವಾಸಿಸುತ್ತಿರುವ ಪ್ರದೇಶದಲ್ಲಿ ಕರೊನಾ ಸೋಂಕಿತರನ್ನು ಇಡುತ್ತಿರುವುದರಿಂದ ಜನರಲ್ಲಿ ಭಯ ಸೃಷ್ಟಿಯಾಗಿದೆ. ಹುಕ್ಕೇರಿ ತಾಲೂಕಿನಿಂದ ಕರೆದುಕೊಂಡು ಬರುವ ಬದಲು ಅಲ್ಲಿಯ ಲಾಡ್ಜ್, ಸರ್ಕಾರಿ ವಸತಿಗಳಲ್ಲಿಡಬಹುದು. ನಗರಕ್ಕೆ ಏಕೆ ಕರೆದುಕೊಂಡು ಬರುತ್ತಿದ್ದೀರಿ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ವದಂತಿಗಳಿಂದ ನಿತ್ಯ ಭಯದಲ್ಲಿ ದಿನ ಕಳೆಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸೋಂಕಿತರನ್ನು ನಮ್ಮ ಪ್ರದೇಶದಲ್ಲಿಡುತ್ತಿರುವುದು ಮತ್ತಷ್ಟು ಆತಂಕ ಉಂಟು ಮಾಡಿದೆ. ಸೋಂಕಿತರನ್ನು ಕ್ವಾರಂಟೈನಲ್ಲಿ ಇಡಲು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ನಿತಿನ್ ಭಾತ್ಕಂಡೆ ಸೇರಿ ಮಹಿಳೆಯರು, ಮಕ್ಕಳಿದ್ದರು.