ಜಿಲ್ಲೆ

ಜಿಲ್ಲೆಯಲ್ಲಿ ಕರೊನಾ ನಗಾರಿ, 2 ದಿನದಲ್ಲೇ 8 ಪ್ರಕರಣ, ಹೊಸಕೋಟೆ ನಗರ ಸೀಲ್‌ಡೌನ್

Bengaluru Rural

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ನಗಾರಿ ಬಾರಿಸುತ್ತಿದ್ದು, ಕಳೆದೆರಡು ದಿನದಿಂದ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸೋಮವಾರ ಮತ್ತೆ 4 ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಪ್ರಕರಣ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

62 ಪ್ರಕರಣಗಳ ಪೈಕಿ 43 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸಮಾಧಾನಕರ ಸಂಗತಿಯಾಗಿದ್ದರೂ 18 ಪ್ರಕರಣಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿದ್ದು, ಕರೊನಾ ಮರಣ ಮೃದಂಗ ಬಾರಿಸಲು ಅಣಿಯಾಗಿರುವ ಆತಂಕ ಎದುರಾಗಿದೆ.

24ರಿಂದ ಸಂಜೆ 5 ಬಳಿಕ ಹೊಸಕೋಟೆ ಲಾಕ್‌ಡೌನ್: ಹೊಸಕೋಟೆ: ನಗರ ಪ್ರದೇಶದಲ್ಲಿ ಕರೊನಾ ಸೋಂಕಿತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜೂ.24ರಿಂದ 1 ವಾರ ಸಂಜೆ 5ಗಂಟೆ ಬಳಿಕ ನಗರವನ್ನು ಲಾಕ್‌ಡೌನ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಶಾಸಕ ಶರತ್‌ಬಚ್ಚೇಗೌಡ ಸ್ಪಷ್ಟಪಡಿಸಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಡೀ ನಗರವನ್ನೇ ಸೀಲ್‌ಡೌನ್ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ವಾಣಿಜ್ಯ ವ್ಯಾಪಾರಿಗಳ ಸಂಘದ ಮುಖಂಡರೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ಸಾರ್ವಜನಿಕರು ಮುಂಜಾಗ್ರತೆ ನಿರ್ಲಕ್ಷಿಸುತ್ತಿದ್ದಾರೆ. ಬಹುತೇಕ ಜನ ಮಾಸ್ಕ್ ಧರಿಸದೆ ಓಡಾಡುವುದು ಕಂಡುಬರುತ್ತಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದವರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವ ಮಾಹಿತಿ ಇದ್ದು ಅಂಥವರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತರಕಾರಿ ವ್ಯಾಪಾರಿಗಳಿಗೆ ಬೆಳಗ್ಗೆ 7 ರಿಂದ 12ರವರೆಗೆ ವ್ಯವಹರಿಸಲು ಅವಕಾಶ, ದಿನಸಿ ಅಂಗಡಿ, ಬಟ್ಟೆ ವ್ಯಾಪಾರ ಮಳಿಗೆ, ಜುವೆಲರಿ ಮಳಿಗೆಗಳಿಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಅವಕಾಶ. ಸಲೂನ್‌ಗಳಿಗೆ ಮುಂಜಾನೆ 7 ರಿಂದ 11 ರವರೆಗೆ, ದೇವಾಲಯಗಳು ಬೆಳಗ್ಗೆ 6 ರಿಂದ 11 ರವರೆಗೆ, ಮಸೀದಿಗಳಲ್ಲಿ ಕೇವಲ 5 ಜನರಿಗೆ ಪ್ರಾರ್ಥನೆಗೆ ಅವಕಾಶ, ಜತೆಗೆ ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳಿಗಷ್ಟೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

ಹೊಸಕೋಟೆಯ 60 ವರ್ಷದ ಮಹಿಳೆಯೊಬ್ಬರು ಕರೊನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕರೊನಾ ಸೋಂಕು ಸಮುದಾಯಕ್ಕೆ ಹರಡಿರುವ ಶಂಕೆ ವ್ಯಕ್ತಪಡಿಸಿ ವಿಜಯವಾಣಿ ಜೂ.22ರಂದು ವರದಿ ಪ್ರಕಟಿಸಿತ್ತು.

ವಿಜಯಪುರದಲ್ಲಿ ಸ್ವಯಂ ನಿರ್ಬಂಧ: ಪಟ್ಟಣದಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ಸ್ವಯಂ ನಿರ್ಬಂಧದ ವಾತಾವರಣ ಕಂಡುಬರುತ್ತಿದೆ. ಪಟ್ಟಣದ ಹೃದಯ ಭಾಗವಾದ ಗಾಂಧಿ ಚೌಕ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಕೇಂದ್ರಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿದ್ದು, ಅಲ್ಲಲ್ಲಿ ತೆರೆದಿದ್ದ ಒಂದೊಂದು ಅಂಗಡಿಗಳನ್ನು ಪುರಸಭಾ ಸಿಬ್ಬಂದಿ ಮುಚ್ಚಿಸಿದ್ದರಿಂದ ಪಟ್ಟಣದಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿದೆ.

ಕ್ವಾರಂಟೈನ್ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ತೆರಳುವ ಪೌರಕಾರ್ಮಿಕರಿಗೆ ಪುರಸಭೆ ವತಿಯಿಂದ ಪಿಪಿಇ ಕಿಟ್ ನೀಡಲಾಗುತ್ತಿದ್ದು, ಪೌರಕಾರ್ಮಿಕರು ಹೆಚ್ಚಿನ ಜಾಗೃತಿ ವಹಿಸುವಂತೆ ಸೂಚನೆ ನೀಡಲಾಗಿದೆ.