ಜಿಲ್ಲೆ

ಕರೊನಾ ಕೊಡ್ತು ಗುಡ್​ನ್ಯೂಸ್​ - ವಿಚಾರಣಾಧೀನ ಕೈದಿಗಳಿಗೆ ಬಿಡುಗಡೆ ಭಾಗ್ಯ: ವಿವಿಧ ಜೈಲುಗಳ 383 ಬಂಧಿಗಳ ಪಟ್ಟಿ ಸಿದ್ಧ

ಬೆಂಗಳೂರು: ಜೈಲುಗಳಲ್ಲಿರುವ ಕೈದಿಗಳಿಗೆ ಕರೊನಾ ಸೋಂಕು ಹರಡುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ 180 ಕೈದಿಗಳು ಸೇರಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಇರುವ 383 ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಕೈದಿಗಳಿಗೆ ಕರೊನಾ ವೈರಸ್ ಹರಡದಂತೆ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮಾ.23ರಂದು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದಕುಮಾರ್ ನೇತೃತ್ವದ ಉನ್ನತಾಧಿಕಾರ ಸಮಿತಿಯು ಮಧ್ಯಂತರ ಜಾಮೀನು ನೀಡುವ ಕುರಿತು ಮಾರ್ಗಸೂಚಿ ರಚಿಸಿತ್ತು. ಅದರನ್ವಯ ಕಾರಾಗೃಹಗಳಲ್ಲಿರುವ ವಿಚಾರಣಾಧೀನಾ ಕೈದಿಗಳಿಗೆ ಜಾಮೀನು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಬುಧವಾರ 383 ಮಂದಿಗೆ ಜಾಮೀನು ನೀಡಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜು ಮಾಹಿತಿ ನೀಡಿದ್ದಾರೆ.

2 ಹಂತದಲ್ಲಿ ಬಿಡುಗಡೆ: 2 ಹಂತದಲ್ಲಿ ಬಂಧಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 7 ವರ್ಷದೊಳಗಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ ಆರೋಪಿಗಳಾಗಿ ಜೈಲಿಗೆ ಬಂದು ಇನ್ನೂ ವಿಚಾರಣೆ ಎದುರಿಸುತ್ತಿರುವರನ್ನು ಬಿಡುಗಡೆ ಮಾಡಲಾಗುತ್ತದೆ. ಕಳ್ಳತನ, ಸುಲಿಗೆ, ಸರಗಳ್ಳತನ, ವಂಚನೆಯಂತಹ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ 180 ಮಂದಿ ವಿಚಾರಣಾಧೀನ ಬಂಧಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಅದೇರೀತಿ ರಾಜ್ಯದ ವಿವಿಧ ಕಾರಾಗೃಹಗಳ 203 ಮಂದಿ ಪಟ್ಟಿ ಸಿದ್ಧವಾಗಿದೆ.

2ನೇ ಹಂತದಲ್ಲಿ ಸಜಾಬಂಧಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಮೊದಲು ವಿಚಾರಣಾಧೀನ ಬಂಧಿಗಳನ್ನು ಬಿಡುಗಡೆಗೊಳಿಸಿದ ಬಳಿಕ, ಸಜಾ ಬಂಧಿಗಳ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ವಿಚಾರಣಾಧೀನ ಬಂಧಿಗಳಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಲಾಗುವುದು. ಸಜಾ ಬಂಧಿಗಳನ್ನು ಪರೋಲ್ ಮೇಲೆ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.