ಜಿಲ್ಲೆ

ಕರೊನಾ ವೈರಸ್‌ಗೆ ಸಕ್ಕರೆ ನಾಡು ತತ್ತರ

Belagavi

ಬೆಳಗಾವಿ: ದೆಹಲಿ, ಜಾರ್ಖಂಡ, ಗುಜರಾತ, ರಾಜಸ್ಥಾನ, ಮಹಾರಾಷ್ಟ್ರದ ಮುಂಬೈ, ಪುಣೆಯ ಕರೊನಾ ನಂಜಿಗೆ ತತ್ತರಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ (ಏಪ್ರಿಲ್ 3 ರಿಂದ ಜೂನ್ 24ರ ವರೆಗೆ) 306 ಜನರಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ 291 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೆ, ಇನ್ನೂ 20,140 ಜನರ ಮೇಲೆ ಆರೋಗ್ಯ ಇಲಾಖೆ ವಿಶೇಷ ನಿಗಾ ವಹಿಸಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ 2020 ಏಪ್ರಿಲ್ 3ರಂದು ಬೆಳಗಾವಿ ತಾಲೂಕಿನ ಬೆಳಗುಂದಿ, ಹಿರೇಬಾಗೇವಾಡಿ ಮತ್ತು ಬೆಳಗಾವಿ ನಗರ ಕ್ಯಾಂಪ್ ಪ್ರದೇಶದಲ್ಲಿ 3 ಜನರಲ್ಲಿ ಕರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಇವರೆಲ್ಲರೂ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದಿದ್ದ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು. ಬಳಿಕ ಏಪ್ರಿಲ್ 12ರಂದು ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ ನಂಜಿನಿಂದ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಐವರಲ್ಲಿ ಸೋಂಕು ಪತ್ತೆಯಾಯಿತು.

ದೇಶದಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿತ್ತು. ಆದರೆ, ಬೆಳಗಾವಿ ಜಿಲ್ಲೆಗೆ, ದೆಹಲಿ, ಹೈದರಾಬಾದ್, ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಜನ ಬರುತ್ತಿರುವುದು ನಿಂತಿರಲಿಲ್ಲ. ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಕೇವಲ ನಗರ, ಪಟ್ಟಣ ಪ್ರದೇಶಗಳ ಮೇಲೆ ನಿಗಾ ವಹಿಸಿತ್ತು.

ಪರಿಣಾಮ ಹಿರೇಬಾಗೇವಾಡಿ ಒಂದೇ ಗ್ರಾಮದಲ್ಲಿ 35 ಜನರಲ್ಲಿ ಸೋಂಕು ತಗುಲಿತ್ತು. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆ, ನಿವೃತ್ತ ಪೊಲೀಸ್ ಅಧಿಕಾರಿ ಸೇರಿದ್ದರು. ಪರಿಣಾಮ ದೆಹಲಿ ತಬ್ಲಿಘಿ ನಂಜಿನಿಂದ 40 ದಿನಗಳ ಅವಧಿಯಲ್ಲಿ ಹಿರೇಬಾಗೇವಾಡಿ 47, ಕುಡಚಿ 38 ಮತ್ತು ಬೆಳಗಾವಿ ನಗರದ 15 ಜನರಲ್ಲಿ ಸೋಂಕು ಪತ್ತೆಯಾಯಿತು. ಬಳಿಕ ಹಿರೇಬಾಗೇವಾಡಿ, ಬೆಳಗುಂದಿ, ಕುಡಚಿ, ಸಂಕೇಶ್ವರ, ಹುಕ್ಕೇರಿ ಪಟ್ಟಣವನ್ನು ಬರೋಬ್ಬರಿ 28 ದಿನಗಳ ಸಂಪೂರ್ಣ ಸೀಲ್‌ಡೌನ್ ಮಾಡಲಾಯಿತು. ಅಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರು ಸೀಲ್‌ಡೌನ್ ಪ್ರದೇಶದ ಜನರೊಂದಿಗಿನ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಿದರು.

ಇದರಿಂದ ಒಂದು ತಿಂಗಳ ಕಾಲ ಸೀಲ್‌ಡೌನ್ ಪ್ರದೇಶದ ಜನರು ಅಜ್ಞಾತವಾಸ ಅನುಭವಿಸಿದರು. ಜಿಲ್ಲೆಯ ಅಥಣಿ ತಾಲೂಕಿನ 44 ಜನರು ಜಾರ್ಖಂಡ್ ರಾಜ್ಯದ ಧಾರ್ಮಿಕ ಪುಣ್ಯ ಕ್ಷೇತ್ರಗಳಿಗೆ ಪ್ರವಾಸಿ ಹೋಗಿ ಗ್ರಾಮಗಳಿಗೆ ವಾಪಸ್ ಬಂದಿದ್ದರು. ಇವರಲ್ಲಿ ಸವದಿ ಗ್ರಾಮ-7, ಬೆಳವಕ್ಕಿ-1, ನಂದಗಾಂವ-3, ಜುಂಜರವಾಡ-1 ಹಾಗೂ ಹುಕ್ಕೇರಿ ಪಟ್ಟದಲ್ಲಿ 1 ಸೇರಿದಂತೆ ಒಟ್ಟು 13 ಜನರಲ್ಲಿ ಕರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಸೋಂಕಿತರಲ್ಲಿ 17 ವರ್ಷದ ಬಾಲಕಿ ಸೇರಿದಂತೆ 6 ಮಹಿಳೆಯರು ಮತ್ತು 6 ಪುರುಷರಿದ್ದರು. ಅಲ್ಲದೆ, ಇವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಬರೋಬ್ಬರಿ 70ಕ್ಕೂ ಅಧಿಕ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು.

ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿ ಜಿಲ್ಲೆಗೆ ಆಗಮಿಸಿದ 4ಕ್ಕೂ ಅಧಿಕ ಗರ್ಭಿಣಿ ಮತ್ತು 12ಕ್ಕೂ ಅಧಿಕ ಚಿಕ್ಕ ಮಕ್ಕಳಲ್ಲಿ ಕರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದ 27 ವರ್ಷದ ಗರ್ಭಿಣಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾನಿಗಳ ಮೇಲೆ ಹಲ್ಲೆ: ಕರೊನಾ ಸೋಂಕಿತರ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಿಡಿಒ, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಮತ್ತು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದವರ ವಿರುದ್ಧ ವಿವಿಧ ಠಾಣೆಗಳಲ್ಲಿ 28ಕ್ಕೂ ಅಧಿಕ ಕೇಸ್‌ಗಳು ದಾಖಲಾಗಿದ್ದು, 22 ಜನರನ್ನು ಬಂಧಿಸಲಾಗಿದೆ.