ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಹೀಗಾಗಿ ವಿಘ್ನ ನಿವಾರಕ ಗಣೇಶನ ಹಬ್ಬ ಆಚರಣೆಗೂ ಕರೊನಾ ವಿಘ್ನ ಎದುರಾಗುವ ಆತಂಕ ಎದುರಾಗಿದೆ.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಆಡಳಿತ ಅವಕಾಶ ಕೊಡುತ್ತದೋ ಇಲ್ಲವೋ ಎಂಬ ಆತಂಕ ಮೂರ್ತಿ ತಯಾರಕರನ್ನು ಕಾಡುತ್ತಿದೆ.
ವೈರಸ್ ಭೀತಿಯಿಂದ ಮೂರ್ನಾಲ್ಕು ತಿಂಗಳಿಂದ ಮನೆಯಲ್ಲಿಯೇ ಇರುವ ಕಲಾವಿದರು ಪ್ರತಿ ವರ್ಷಕ್ಕಿಂತ ಅಧಿತ ಗಾತ್ರದ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಮೂರ್ತಿಗಳಿಗೆ ಬಣ್ಣ ಬಳಿಯುವ ಮೂಲಕ ಅಂತಿಮ ರೂಪ ಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿ ಬ್ಯಾನ್ ಮಾಡಿದ್ದರಿಂದ ಈ ವರ್ಷ ಕಲಾವಿದರು ಹೆಚ್ಚು ಬಂಡವಾಳ ಹಾಕಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಮಣ್ಣಿನಿಂದಲೇ ದೊಡ್ಡ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.
ಗೊಂದಲದಲ್ಲಿ ಮೂರ್ತಿ ತಯಾರಕರು: ಗಣೇಶನ ಹಬ್ಬ ಸಮೀಪಿಸುತ್ತಿದ್ದರೂ ಸರ್ಕಾರವಾಗಲೀ ಜಿಲ್ಲಾಡಳಿತವಾಗಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾನೆಗೆ ಅವಕಾಶ ನೀಡುವ ಬಗ್ಗೆ ಮತ್ತು ನೀಡಿದರೆ ಮಾರ್ಗಸೂಚಿಗಳೇನು? ಎಂಬ ಬಗ್ಗೆ ಮೂರ್ತಿ ತಯಾರಿಕರಿಗೆ, ಸಂಘಟಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಮೂರ್ತಿ ತಯಾರಕರು ಗೊಂದಲದಲ್ಲಿ ಮುಳುಗಿದ್ದಾರೆ. ಜನರ ಆರೋಗ್ಯದ ದೃಷ್ಟಿಯಿಂದ ಗಣೇಶ ಹಬ್ಬದ ಸಡಗರಕ್ಕೆ ಸರ್ಕಾರ ಬ್ರೇಕ್ ಹಾಕಿದರೆ ಹೂವು, ಹಣ್ಣು, ದಿನಸಿ, ಬಟ್ಟೆ, ಪಟಾಕಿ, ಅಲಂಕಾರಿಕ ವಸ್ತುಗಳು, ಪೆಂಡಾಲ್ ಸೇರಿ ಎಲ್ಲ ಬಗೆಯ ವ್ಯಾಪಾರದ ಮೇಲೂ ಕರಿನೆರಳಿನ ಛಾಯೆ ಮೂಡಲಿದೆ. ಗಣೇಶ ಹಬ್ಬದ ಸಡಗರ, ಸಂಭ್ರಮಕ್ಕೆ ಕರೊನಾ ಕಂಟಕವಾಗಲಿದೆ.
ಲಕ್ಷೆ್ಮೕಶ್ವರ ಪಟ್ಟಣವೊಂದರಲ್ಲಿಯೇ 50ಕ್ಕೂ ಹೆಚ್ಚು ಮೂರ್ತಿ ತಯಾರಿಕರ ಕುಟುಂಬಗಳು 50 ಸಾವಿರ ಮೂರ್ತಿಗಳನ್ನು ಸಿದ್ಧಗೊಳಿಸಿವೆ. ಇದರಲ್ಲಿ ಕೆಲವರು 2 ಸಾವಿರಕ್ಕಿಂತ ಹೆಚ್ಚು ಮೂರ್ತಿಗಳಿಗೆ ಬಣ್ಣ ಬಳಿದು ಅಂತಿಮ ರೂಪ ನೀಡುತ್ತಿದ್ದಾರೆ.
ತಾಲೂಕಿನ ಹಲವು ಗ್ರಾಮಗಳಿಗೆ ಪಟ್ಟಣದಿಂದಲೇ ಮೂರ್ತಿಗಳು ಹೋಗುತ್ತವೆ. ಪಿಒಪಿ ಗಣಪತಿ ಮೂರ್ತಿಗಳು ನಿಷೇಧಗೊಂಡ ಹಿನ್ನೆಲೆಯಲ್ಲಿ ಮಣ್ಣಿನಿಂದ ಪರಿಸರ ಸ್ನೇಹಿ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಆದರೆ, ಇದುವರೆಗೆ ಯಾರೂ ಮೂರ್ತಿಗಳನ್ನು ಬುಕ್ ಮಾಡಿಲ್ಲ.
ವಂಶಪಾರಂಪರ್ಯವಾಗಿ ಗಣೇಶನ ಮೂರ್ತಿ ತಯಾರಿಸುವುದನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕು ಸಾಗಿಸುತ್ತಿರುವವರ ಜೀವನ ಅತಂತ್ರವಾಗುತ್ತಿದೆ. ಆದ್ದರಿಂದ ಸರ್ಕಾರ ಗಣೇಶ ಮೂರ್ತಿ ತಯಾರಿಸುವ ಕುಂಬಾರ, ಬಡಿಗೇರ ಮತ್ತು ಸಾಂಪ್ರದಾಯಿಕ ಮೂರ್ತಿ ಕಲಾವಿದರಿಗೆ ಸೂಕ್ತ ಸಹಾಯಧನ ನೀಡುವ ಮೂಲಕ ಅವರ ನೆರವಿಗೆ ಬರಬೇಕು ಎಂದು ಲಕ್ಷೆ್ಮೕಶ್ವರದ ಮೂರ್ತಿ ಕಲಾವಿದರಾದ ಸಹನರಾಜ ಚಕ್ರಸಾಲಿ, ಪ್ರವೀಣ ಗಾಯಕರ, ಫಕೀರೇಶ ಕುಂಬಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೋ? ಬೇಡವೊ ಎಂಬ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ. ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಗಣೇಶ ಹಬ್ಬದ ಆಚರಣೆಗಿಂತ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು.| ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್ಪ್ರತಿ ವರ್ಷದಂತೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕಲ್ಪಿಸಬೇಕು. ದೇವರು, ಧರ್ಮ, ಆಚರಣೆ, ನಂಬಿಕೆಗಳ ಮೂಲಕ ಬದುಕುವ ಹಿಂದುಗಳ ಭಾವನೆಗೂ ಅಡ್ಡಿಯಾಗುವುದಿಲ್ಲ ಮತ್ತು ಮೂರ್ತಿ ತಯಾರಕರು, ಅವಲಂಬಿತ ವ್ಯಾಪಾರಸ್ಥರ ಬದುಕಿಗೂ ಆಸರೆ ಕಲ್ಪಿಸಿದಂತಾಗುತ್ತದೆ. ಸರ್ಕಾರ ಕೆಲವು ಷರತ್ತು, ನಿರ್ಬಂಧಗಳನ್ನು ವಿಧಿಸಬಹುದು.| ಪ್ರಕಾಶ ಮಾದನೂರ ಶ್ರೀರಾಮ ಸೇನೆ ತಾಲೂಕಾಧ್ಯಕ್ಷ