ಜಿಲ್ಲೆ

ಸಿಗಡಿ ಕೃಷಿಗೂ ಕರೊನಾ ಕರಿನೆರಳು

Udupi

- ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸಿಗಡಿ ಕೃಷಿಕರಲ್ಲಿ ಕರೊನಾ ಕರಿನೆರಳು ಆತಂಕ ಸೃಷ್ಟಿಸಿದೆ. 40 ಲಕ್ಷ ರೂ.ಮೌಲ್ಯದ ಸಿಗಡಿ ಕೆರೆಯಲ್ಲಿದೆ. ಕಟಾವು ಮಾಡಿದರೆ ಸಿಗಡಿ ಕೇಳೋರಿಲ್ಲ. ಬೆಲೆ ಪಾತಾಳಕ್ಕೆ ಇಳಿದಿದೆ. ಸಿಗಡಿ ಹಿಡಿಯಲು ಆಗದೆ, ಫೀಡ್ ಸಿಗದೆ ಕೆರೆಯಲ್ಲೇ ಉಳಿಸಿಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟಾವಿಗೆ ಬಂದ ಸಿಗಡಿ ಕೃಷಿ ಕತೆ ಹೀಗಾದರೆ, ಕೆರೆಗೆ ಇತ್ತೀಚೆಗೆ ಮರಿ ಬಿಟ್ಟವರು ಫೀಡ್ ಇಲ್ಲದೆ ಮರಿಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವ ಚಿಂತೆಯಲ್ಲಿದ್ದಾರೆ.

ಕುಂದಾಪುರ ತಾಲೂಕಿನಲ್ಲಿರುವ ಸಿಗಡಿ ಕೃಷಿಗೆ ವಾರ್ಷಿಕ 4 ಸಾವಿರ ಟನ್ ಫೀಡ್ ಬೇಕಾಗುತ್ತದೆ. ತ್ರಿವಳಿ 15 ಸಾವಿರ ಟನ್ ಬೇಕು. ಕುಂದಾಪುರ ತಾಲೂಕಿಗೆ ತಿಂಗಳಿಗೆ 500 ಟನ್ ಬೇಕು. ದ.ಕ, ಉಡುಪಿ, ಉ.ಕ.ಜಿಲ್ಲೆಯಲ್ಲಿ 6 ಸಾವಿಕ ಹೆಕ್ಟೇರ್ ಪ್ರದೇಶದಲ್ಲಿ ಸಿಗಡಿ ಕೃಷಿ ಇದ್ದು, 300 ಜನ ಸಿಗಡಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಡಳಿತ, ಪೊಲೀಸರಿಂದ ಯಾವುದೇ ಸಮಸ್ಯೆ ಇಲ್ಲ. ಸಿಗಡಿ ಕೃಷಿಕರಿಗೆ ಕರ್ಫ್ಯೂ ಪಾಸ್ ನೀಡಲಾಗಿದೆ. ಸಮಸ್ಯೆಯೆಂದರೆ ಸಿಗಡಿ ಹಿಡಿಯುವುದು ಮತ್ತು ಸಿಗಡಿ ಫೀಡ್ ಸಿಗದಿರುವುದು. ಸಿಗಡಿ ಕೃಷಿಕರು ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಸರ್ಕಾರ ಮಧ್ಯ ಪ್ರವೇಶಿಸಿ ಫೀಡ್ ಹಾಗೂ ಹಾರ‌್ವೆಸ್ಟ್ ವ್ಯವಸ್ಥೆ ಮಾಡದಿದ್ದರೆ ಸಿಗಡಿ ಕೃಷಿಕರ ಬದುಕು ಕತ್ತಲೆಯಾಗಲಿದೆ.

ಕೃಷಿಯಲ್ಲಿ ಅಪಾರ ಹಣ, ಪರಿಶ್ರಮ: ಸಿಗಡಿ ಕೃಷಿ ಹಿಂದೆ ಅಪಾರ ಹಣ ಮತ್ತು ಪರಿಶ್ರಮ ಇರುತ್ತದೆ. ಕೆರೆ ಮಾಡಿ ಸಿಗಡಿ ಬಿಟ್ಟರಷ್ಟೇ ಸಾಲದು. ಕೆರೆಯಲ್ಲಿ ಸಮುದ್ರದ ನೀರಿನ ಗುಣಮಟ್ಟವನ್ನು ಕೃತಕವಾಗಿ ಮಾಡಿಕೊಳ್ಳಬೇಕಾಗುತ್ತದೆ. ಸಿಗಡಿ ಕೆರೆ ಮಾಲೀಕರು ಕಟ್ಟುವ ವಿದ್ಯುತ್ ಬಿಲ್ ಲಕ್ಷ ರೂ.ಲೆಕ್ಕದಲ್ಲಿ ಇರುತ್ತದೆ. ಸಿಗಡಿ ಜೀವಿಸಲು ಸಮುದ್ರದಲ್ಲಿ ಪ್ರಾಕೃತಿಕ ಅನುಕೂಲತೆಯಿದ್ದು, ಸಿಗಡಿ ಕೆರೆಗೆ ಸಮುದ್ರ ನೀರಿನ ಗುಣಮಟ್ಟಕ್ಕಾಗಿ, ಸೀಮಿಕ್ಸ್, ಸೋಡಾ ಮಿಕ್ಸ್, ಕ್ರೈಮಿಕ್ಸ್, ನೋಡಲ್ ಬಯೋಟಿಕ್ ಕೆವಾಕ್ಸ್, ಕಾರ್‌ಮ್ಯಾಕ್ ಮುಂತಾದವುಗಳ ಕೆರೆ ನೀರಿಗೆ ಮಿಕ್ಸ್ ಮಾಡಿ, ಸಮುದ್ರ ನೀರಿನ ಗುಣಮಟ್ಟಕ್ಕೆ ತರಲಾಗುತ್ತದೆ. ಹೊಳೆ ನೀರು ಶುದ್ಧೀಕರಿಸಿ ಸಿಗಡಿ ಕೆರೆಗೆ ಬಿಡಬೇಕು. ಹೀಗೆ ಸಿದ್ಧ್ದಪಡಿಸಿದ ಕೆರೆಗೆ ಸಿಗಡಿ ಮರಿ ಬಿಡಲಾಗುತ್ತದೆ. 90ರಿಂದ 120 ದಿನಕ್ಕೆ ಸಿಗಡಿ ಕಟಾವಿಗೆ ಬರುತ್ತದೆ. ಸಿಗಡಿ ಫೀಡ್ ಬೆಲೆ ಒಂದು ಕೆಜಿಗೆ 92 ರೂ. ಟನ್‌ಗಟ್ಟಲೆ ಸಿಗಡಿ ಫೀಡ್ ಬೇಕಾಗುತ್ತದೆ. ಸಿಗಡಿ ಬೆಳೆದ ಹಾಗೆ ಫೀಡ್ ಕೂಡ ಹೆಚ್ಚು ಬೇಕಾಗುತ್ತದೆ.

ಫೀಡ್ ತರುವುದೇ ದೊಡ್ಡ ಸಮಸ್ಯೆ: ಸಿಗಡಿ ಕೃಷಿಗೆ ತುಂಬ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ತಲ್ಲೂರು ರಾಜಾಡಿಯ ಆಧುನಿಕ ಸಿಗಡಿ ಕೃಷಿಕ, ಕೃಷಿಪ್ರಸಾದ್ ಅಡ್ಯಂತಾಯ. ಜಿಲ್ಲಾಡಳಿತ, ಪೊಲೀಸರು ಎಲ್ಲ ರೀತಿಯ ಸಹಕಾರ ನೀಡಿದರೂ, ಫೀಡ್ ತರುವುದೇ ದೊಡ್ಡ ಸಮಸ್ಯೆಯಾಗಿದೆ. ಚೆನ್ನೈ, ಆಂಧ್ರಪ್ರದೇಶ, ಗುಜರಾತ್‌ನಲ್ಲಿ ಮಾತ್ರ ಸಿಗಡಿ ಆಹಾರ ಉತ್ಪಾನೆ ಮಾಡುತ್ತಿದ್ದು, ಚೆನ್ನೈ ಫ್ಯಾಕ್ಟರಿ ಲಾಕ್‌ಔಟ್ ಆಗಿದೆ. ಹೊರ ರಾಜ್ಯದಿಂದ ಫೀಡ್ ತರಬೇಕಿದ್ದು, ಲಾರಿ ಚಾಲಕರು ಸಿಗದೆ ಆಹಾರ ಪೂರೈಕೆಯಾಗುತ್ತಿಲ್ಲ. ಲಾಕ್‌ಡೌನ್ ಇರುವುದರಿಂದ ಸಿಗಡಿ ಲೋಡ್ ತಂದರೂ ವಾಪಾಸ್ ಹೋಗುವ ಲಾರಿ ಖಾಲಿ ಹೋಗಬೇಕಾಗಿದ್ದರಿಂದ ಲಾರಿ ಮಾಲೀಕರು ಬಾಡಿಗೆ ಬರಲು ಹಿಂದೇಟು ಹಾಕುತ್ತಾರೆ. ಅಪ್ ಆ್ಯಂಡ್ ಡೌನ್ ಬಾಡಿಗೆ ನಮಗೆ ಪೂರೈಸುವುದಿಲ್ಲ. ನನ್ನ ಸಿಗಡಿ ಕೃಷಿಗೆ ವರ್ಷಕ್ಕೆ 500 ಟನ್, ತಿಂಗಳಿಗೆ 5 ಟನ್ ಫುಡ್ ಬೇಕಾಗಿದ್ದು, ನಮ್ಮ ಬಳಿ ಇರುವ ಫುಡ್ ಎರಡು ದಿನಕ್ಕೆ ಸಾಕಾಗುತ್ತದೆ. ಮುಂದೆ ಏನು ಮಾಡಬೇಕು ಅಂತ ಗೊತ್ತಿಲ್ಲ ಎಂದು ಅವರು ಹೇಳಿದರು.

ಕೆರೆಯಲ್ಲಿರುವ ಸಿಗಡಿ ಕಟಾವಿಗೆ ಬಂದಿದ್ದು, ಕಂಪನಿಗಳು ಲಾಕ್‌ಡೌನ್ ಇರುವುದರಿಂದ ತಟಸ್ಥವಾಗಿವೆ. ಸಿಗಡಿ ಹಿಡಿದರೂ ಕೊಳ್ಳುವರಿಲ್ಲ. ನನ್ನ ಕೆರೆಯಲ್ಲಿರುವ ಸಿಗಡಿ 25ಕ್ಕೆ ಒಂದು ಕೆಜಿ ತೂಗುತ್ತಿದ್ದ್ದು, 40 ಲಕ್ಷ ರೂ.ಮೌಲ್ಯದ ಸಿಗಡಿ ಕೆರೆಯಲ್ಲಿದೆ. ಇನ್ನೊಂದು ಹದಿನೈದು ದಿನ ಮುಂದುವರಿಸಲು ಫೀಡ್ ಸಾಲದು. ಬೆಳೆದ ಸಿಗಡಿಗೆ ಫೀಡ್ ಜಾಸ್ತಿ ಬೇಕು. ಸ್ಟಾಕ್ ಇನ್ನೆರಡು ದಿನಕ್ಕೆ ಮುಗಿಯಲಿದೆ. ಕಟಾವು ಮಾಡದೆ ಹಾಗೆ ಉಳಿಸಿಕೊಂಡರೆ ಬಿಳಿಚುಕ್ಕೆ ರೋಗದ ಭಯ.

- ವಿಶ್ವನಾಥ ಶೆಟ್ಟಿ ಗುಡ್ಡಮ್ಮಾಡಿ, ಪ್ರಗತಿಪರ ಸಿಗಡಿ ಕೃಷಿಕ ಬಂಟ್ವಾಡಿ