ಬಳ್ಳಾರಿ: ಜಿಲ್ಲೆಯ ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯ ಸೇರಿ ಪ್ರಮುಖ ದೇವಸ್ಥಾನಗಳಲ್ಲಿ ಶನಿವಾರದಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಜನಸಂದಣಿ ಒಂದು ಕಡೆ ಸೇರಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಕ್ತರಿಂದ ಸದಾ ಗಿಜಿಗಿಡುವ ನಗರದ ಕನಕದುರ್ಗಮ್ಮ ದೇವಸ್ಥಾನ ಶನಿವಾರ ನಿರ್ಜನವಾಗಿತ್ತು. ದೇವಸ್ಥಾನದ ನಾಲ್ಕು ಗೇಟ್‌ಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರು ದೂರದಿಂದಲೇ ನಮಸ್ಕಾರ ಮಾಡಿ ಹೋಗಬೇಕಾಗಿದೆ. ದೇವಸ್ಥಾನ ಮುಚ್ಚಿರುವ ಬಗ್ಗೆ ಮಾಹಿತಿ ಇಲ್ಲದ ಭಕ್ತರು ಶನಿವಾರ ಬಂದು ಹಿಂದಿರುಗಿದರು. ದೇವಸ್ಥಾನದ ಆವರಣದಲ್ಲಿ ಕಾಯಿ ಹಾಗೂ ಇತರ ಪೂಜಾ ಸಾಮಗ್ರಿಗಳ ಮಾರಾಟವೂ ಸ್ಥಗಿತವಾಗಿದೆ.
ಕರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಶನಿವಾರ ಸಂಜೆ 4ರಿಂದ ಮಾ.31ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ. ಜನಸಂಪರ್ಕಕ್ಕೆ ಕಾರಣವಾಗುವ ಸ್ಥಳಗಳಾದ ಹೋಟೆಲ್, ಖಾಸಗಿ ಹಾಗೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳು, ಮಸೀದಿ, ಚರ್ಚ್‌ಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಜಾತ್ರೆ ಹಾಗೂ ವಾರದ ಸಂತೆಗಳನ್ನು ಕೂಡ ನಿರ್ಬಂಧಿಸಲಾಗಿದೆ. ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ.
ಹೊಸಪೇಟೆ: ಕರೊನಾ ಸೋಂಕು ಸಾರ್ವಜನಿಕರನ್ನು ಕಂಗೆಡಿಸಿದರೆ, ದೇವಾಲಯಗಳಿಗೆ ಭಕ್ತರು ಸುಳಿಯದಂತೆ ಮಾಡಿದೆ. ದಕ್ಷಿಣಕಾಶಿ ಎಂದೇ ಕರೆಯುವ ಐತಿಹಾಸಿಕ ಪುಣ್ಯಕ್ಷೇತ್ರವಾದ ಹಂಪಿ ದೇವಸ್ಥಾನದಲ್ಲಿ ಮಾ.31ವರೆಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಭಾಗ್ಯ ನಿಷೇಧಿಸಿ ಶನಿವಾರ ದೇವಸ್ಥಾನದ ಬಾಗಿಲು ಮುಚ್ಚಲಾಗಿದೆ. ಇದರಿಂದಾಗಿ ಭಕ್ತರು ದೇವಸ್ಥಾನದತ್ತ ಸುಳಿಯದಂತಾಗಿದೆ.