ಜಿಲ್ಲೆ

ಸಾಮೂಹಿಕ ವಿವಾಹಕ್ಕೆ ಕರೊನಾ ಅಡ್ಡಿ!

ತುಮಕೂರು: ಧಾರ್ಮಿಕ ದತ್ತಿ ಇಲಾಖೆ ಆಯೋಜಿಸಿರುವ ಸಪ್ತಪದಿ ಸಾಮೂಹಿಕ ವಿವಾಹದ ಮೇಲೆ ಕರೊನಾ ಕಾರ್ಮೋಡ ಆವರಿಸಿದೆ. ಈವರೆಗೆ ಜಿಲ್ಲೆಯಲ್ಲಿ ಕೇವಲ 60 ಅರ್ಜಿಗಳು ವಿವಾಹಕ್ಕೆ ಸಲ್ಲಿಕೆಯಾಗಿವೆ.

ಮೊದಲ ಬಾರಿಗೆ ರಾಜ್ಯಾದ್ಯಂತ ಧಾರ್ಮಿಕ ಇಲಾಖೆಗೆ ಸೇರಿದ 100 ‘ಎ’ ವರ್ಗದ ಆಯ್ದ ದೇವಸ್ಥಾನಗಳಲ್ಲಿ ಏಕಕಾಲಕ್ಕೆ ಏ.26 ‘ಅಕ್ಷಯತೃತೀಯ’ದಂದು ‘ಸಪ್ತಪದಿ’ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಆದರೆ, ಸಪ್ತಪದಿ ತುಳಿಯಲು ತುದಿಗಾಲಲ್ಲಿ ನಿಂತಿರುವ ಜೋಡಿಗಳು ಕರೊನಾಘಾತಕ್ಕೆ ಸಿಲುಕಿವೆ.

ಜಿಲ್ಲೆಯಲ್ಲಿ 3 ‘ಎ; ವರ್ಗದ ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಂಡಿದ್ದು, ದೇವರಾಯನ ದುರ್ಗದ ಭೋಗ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಕುಣಿಗಲ್ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಹಾಗೂ ಹುಲಿಯೂರುದುರ್ಗ ಹುಲಿಯೂರಮ್ಮನ ದೇವಸ್ಥಾನಗಳಲ್ಲಿ ವಿವಾಹ ಸಿದ್ಧತೆಗೆ ಫೆ.13ರಂದೇ ಚಾಲನೆ ನೀಡಲಾಯಿತು.

60 ಅರ್ಜಿ ಸ್ವೀಕಾರ: 3 ದೇವಸ್ಥಾನಗಳಲ್ಲಿ ಈವರೆಗೆ ಕೇವಲ 60 ಅರ್ಜಿಗಳು ಸ್ವೀಕೃತವಾಗಿವೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮಾ.27ಕ್ಕೆ ಅರ್ಜಿ ಸಲ್ಲಿಸಲು ಕೊನೇ ದಿನವಾಗಿದ್ದು ಕರೊನಾ ಹಿನ್ನೆಲೆಯಲ್ಲಿ ಏ.7ರವರೆಗೆ ವಿಸ್ತರಿಸಲಾಗಿದೆ. ಹುಲಿಯೂರಮ್ಮನ ದೇವಸ್ಥಾನದಲ್ಲಿ ಈವರೆಗೆ ಒಂದೇ ಒಂದು ಅರ್ಜಿ ಸಲ್ಲಿಕೆಯಾದರೆ, ದೇವರಾಯನದುರ್ಗ ದೇವಸ್ಥಾನದಲ್ಲಿ 11 ಹಾಗೂ ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ 48 ಅರ್ಜಿಗಳು ಸ್ವೀಕೃತವಾಗಿವೆ.

ಜಿಲ್ಲೆಯಲ್ಲಿ ಫೆ.15ರಿಂದ ಆರಂಭವಾದ ಸಪ್ತಪದಿ ರಥ ಜಿಲ್ಲೆಯ 10 ತಾಲೂಕುಗಳ ಹೋಬಳಿ, ಗ್ರಾಪಂನಲ್ಲಿ ಸಂಚರಿಸಿದೆ. ಮಾ.17ರವರೆಗೆ 1 ತಿಂಗಳು ಸಪ್ತಪದಿ ರಥ ಜಿಲ್ಲೆಯೆಲ್ಲೆಡೆ ವ್ಯಾಪಕ ಪ್ರಚಾರ ನಡೆಸಿದ್ದರ ಹೊರತಾಗಿಯೂ ಸಾಮೂಹಿಕ ವಿವಾಹದ ಬಗ್ಗೆ ಜನರ ಸ್ಪಂದನೆ ಅಷ್ಟಕಷ್ಟೇ. ಸಪ್ತಪದಿ ರಥದ ಜತೆ ಸ್ಥಳದಲ್ಲಿಯೇ ಅರ್ಜಿ ನೀಡಿ, ಭರ್ತಿ ಮಾಡಿದ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ಸುಲಭವಾಗಲಿ ಎಂಬ ಕಾರಣಕ್ಕೆ ಆಯಾ ತಾಲೂಕು ತಹಸೀಲ್ದಾರ್ ಕಚೇರಿ ಅಥವಾ ಸಂಬಂಧಪಟ್ಟ ದೇವಸ್ಥಾನಗಳಿಗೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ರೂಪಾಯಿ ಸಾಲ ಮಾಡಿ ಮಕ್ಕಳ ಮದುವೆ ಮಾಡುತ್ತಾರೆ. ಆದರೆ, ಸರ್ಕಾರದ ನೆರವಿನಲ್ಲಿ ಆಯೋಜಿಸಿರುವ ಸಾಮೂಹಿಕ ವಿವಾಹ ‘ಸಪ್ತಪದಿ’ ಯೋಜನೆ ಬಗ್ಗೆ ನಿರಾಸಕ್ತಿ ತೋರಿರುವುದು ನಿಜಕ್ಕೂ ವಿಪರ್ಯಾಸವೆನಿಸಿದೆ.

ಸಪ್ತಪದಿ ಜೋಡಿಗೆ 55 ಸಾವಿರ ರೂ., ವೆಚ್ಚ !: ವಧುವಿಗೆ ಸೀರೆ ಹಾಗೂ ರವಿಕೆ ಕಣಕ್ಕಾಗಿ 10000 ರೂ.,ಗಳನ್ನು , ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ ವರನಿಗೆ 5000 ರೂ.,ಗಳನ್ನು ನೀಡಲಾಗುವುದು. ಜತೆಗೆ ವಧುವಿಗೆ 8 ಗ್ರಾಂ ಚಿನ್ನದ ತಾಳಿ, 2 ಚಿನ್ನದ ಗುಂಡು ಅಂದಾಜು 40 ಸಾವಿರ ರೂ., ಸೇರಿ ಪ್ರತಿ ನವ-ಜೋಡಿಗೆ 55 ಸಾವಿರ ರೂ.ಗಳನ್ನು ಸರ್ಕಾರದಿಂದ ವೆಚ್ಚಮಾಡಲಾಗುವುದು. ಸಪ್ತಪದಿ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿಗಳಿಗೆ ಕಂದಾಯ ಇಲಾಖೆ ವತಿಯಿಂದ ‘ಆದರ್ಶ ವಿವಾಹ’ ಯೋಜನೆಯಡಿ 10 ಸಾವಿರ ರೂ., ಬಾಂಡ್ ಸಹ ನೀಡಲಾಗುವುದು. ಜತೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ 50 ಸಾವಿರ ರೂ., ಪ್ರೋತ್ಸಾಹಧನ ನೀಡಲಾಗುವುದು. ಇಷ್ಟೆಲ್ಲಾ ಇದ್ದರೂ ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿಯಲು ಜೋಡಿ ಹಿಂದೇಟು ಹಾಕಿರುವುದು ವಿಪರ್ಯಾಸವೆನಿಸಿದೆ.

ಮೊದಲ ಬಾರಿ ಸರ್ಕಾರದ ನೆರವಿನಲ್ಲಿ ವಿವಾಹ ಏರ್ಪಡಿಸಲಾಗಿದೆ. ಈವರೆಗೆ 48 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು 140 ಅರ್ಜಿಗಳನ್ನು ಸಾರ್ವಜನಿಕರಿಗೆ ನೀಡಲಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹ ಸಿದ್ಧತೆ ಸದ್ಯ ಸ್ಥಗಿತಗೊಂಡಿದೆ. ಸರ್ಕಾರದ ಆದೇಶದಂತೆ ಮುಂದಿನ ಕಾರ್ಯಕ್ರಮ ರೂಪಿಸಲಾಗುವುದು. ಲಕ್ಷ್ಮೀ, ಇಒ, ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನ