ಬೆಂಗಳೂರು ಗ್ರಾಮಾಂತರ: ಮೈಸೂರು ದಸರಾದಷ್ಟೇ ಇತಿಹಾಸವಿರುವ ಜಿಲ್ಲಾ ದಸರಾ ಕ್ರೀಡಾಕೂಟ ಸಂಭ್ರಮವನ್ನು ಕರೊನಾ ನುಂಗಿಹಾಕಿದೆ. ಜಿಲ್ಲೆಯಲ್ಲಿ ದಸರಾ ಕ್ರೀಡಾಕೂಟ ರದ್ದಾಗಿರುವುದು ಕ್ರೀಡಾಪಟುಗಳನ್ನು ನಿರಾಸೆಗೊಳಿಸಿದೆ.
ಕಳೆದ ವರ್ಷ ಜಿಲ್ಲಾಮಟ್ಟದಿಂದ 400 ಪ್ರತಿಭಾನ್ವಿತ ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ವಿಭಾಗಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. 100 ಕ್ರೀಡಾಪಟುಗಳು ರಾಜ್ಯಮಟ್ಟದ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲೆಯ ಕೀರ್ತಿ ಬೆಳಗಿಸಿದ್ದರು. ಆದರೆ ಈ ಬಾರಿ ಕರೊನಾ ಮಾರಿ ಪ್ರತಿಭೆಗಳ ಉತ್ಸಾಹಕ್ಕೆ ತಣ್ಣೀರೆರಚಿದೆ. ಈ ವರ್ಷ ಕರೊನಾ ಕಾರಣದಿಂದ ಸರ್ಕಾರದಮಟ್ಟದಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಣೆ ಮಾಡುತ್ತಿರುವುದರಿಂದ ಕ್ರೀಡಾ ಇಲಾಖೆಯ ದಸರಾ ಕ್ರೀಡಾಕೂಟವನ್ನು ರದ್ದು ಮಾಡಿದೆ.
ತಾಲೂಕು ಮಟ್ಟದಲ್ಲೇ ಕ್ರೀಡೋತ್ಸವ: ಪ್ರತಿ ವರ್ಷ ಯುವಜನ ಮತ್ತು ಸಬಲೀಕರಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕುಗಳಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿತ್ತು. ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಗೆದ್ದ ಕ್ರೀಡಾಪಟುಗಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಿ ಅಲ್ಲಿಂದ ವಿಭಾಗಮಟ್ಟ, ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಕಳುಹಿಸಿಕೊಡಲಾಗುತ್ತಿತ್ತು, ಪ್ರತಿ ವರ್ಷ ನೂರಾರು ಪ್ರತಿಭೆಗಳನ್ನು ಹುಟ್ಟುಹಾಕುತ್ತಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಇದೇ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.
ಕುಸ್ತಿ ಆಕರ್ಷಣೆ: ಮೈಸೂರು ದಸರಾ ಕ್ರೀಡಾಕೂಟದಲ್ಲಿ ಪ್ರಮುಖ ಆಕರ್ಷಣೆ ಎನಿಸುವ ಕುಸ್ತಿ ಕ್ರೀಡೆಯಂತೆ ಜಿಲ್ಲೆಯಲ್ಲೂ ಕುಸ್ತಿ ಅಖಾಡ ಸಾಕಷ್ಟು ಆಕರ್ಷಣೆಯಾಗಿತ್ತು. ಇದೆಲ್ಲ ಸಂಭ್ರಮವನ್ನು ಕರೊನಾ ಕಸಿದುಕೊಂಡಿದೆ ಎಂದು ಕ್ರೀಡಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಕರೊನಾ ಹರಡುವಿಕೆ ನಿಯಂತ್ರಣದ ದೃಷ್ಟಿಯಿಂದ ಸರ್ಕಾರದ ನಿರ್ದೇಶನದಂತೆ ಈ ಬಾರಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಕ್ರೀಡಾಪಟುಗಳು ನಿರಾಶರಾಗಬಾರದು. ಗೀತಾ, ಯುವಜನ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ