ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟವರನ್ನು ಸಾಮಾನ್ಯ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ಮಾಡಲು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಶವ ಸಂಸ್ಕಾರಕ್ಕೆ ಸರ್ಕಾರದ ಸ್ವತ್ತಿನ ಸ್ಥಳವನ್ನು ಗುರುತಿಸಲಾಗಿದೆ.
ಬೆಂಗಳೂರು ನಗರ ಜಿಲ್ಲಾಡಳಿತದಿಂದ ಸರ್ಕಾರದ ಸ್ವತ್ತಿನ 35.18 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 12 ವಿದ್ಯುತ್ ಚಿತಾಗಾರಗಳಲ್ಲಿ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಮೃತರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ವಾರದ ಹಿಂದೆ ಕಂದಾಯ ಸಚಿವ ಆರ್. ಅಶೋಕ್, ಸರ್ಕಾರದ ಗೋಮಾಳ ಜಮೀನುಗಳಲ್ಲಿ ಮೃತರ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಬೆಂ.ನಗರ ಜಿಲ್ಲೆಯ 4 ತಾಲೂಕುಗಳಲ್ಲಿ 35 ಎಕರೆ 18 ಗುಂಟೆ ಜಮೀನನ್ನು ಗುರುತಿಸಿದ್ದಾರೆ. ಇದನ್ನೂ ಓದಿರಿ ಜಿಲ್ಲಾಧಿಕಾರಿಗೂ ಕೋವಿಡ್ ಸೋಂಕು, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ!
ಎಲ್ಲಿವೆ ಸ್ಥಳಗಳು?: ಬೆಂ. ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಗಿಡ್ಡನಹಳ್ಳಿಯಲ್ಲಿ 4 ಎಕರೆ, ಬೆಂ. ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಗುಳಿಕಮಲೆಯಲ್ಲಿ 8, ಸೋಮನಹಳ್ಳಿಯಲ್ಲಿ 1.18, ತಾವರೆಕೆರೆ ಹೋಬಳಿಯಲ್ಲಿ 5, ಆನೇಕಲ್ ತಾಲೂಕಿನ ಗಿಡ್ಡನಹಳ್ಳಿಯಲ್ಲಿ 3, ಯಲಹಂಕ ತಾಲೂಕಿನ ಜಾಲ ಹೋಬಳಿಯ ಎಂ. ಹೊಸಹಳ್ಳಿಯಲ್ಲಿ 2, ಮಾರೇನಹಳ್ಳಿಯಲ್ಲಿ 5, ಹೆಸರಘಟ್ಟ ಹೋಬಳಿಯ ಮಾವಳ್ಳಿಪುರದಲ್ಲಿ 5 ಹಾಗೂ ಹುತ್ತನಹಳ್ಳಿಯಲ್ಲಿ 2 ಎಕರೆ ಸ್ಥಳವನ್ನು ಸ್ಮಶಾನಕ್ಕೆ ನಿಗದಿಗೊಳಿಸಲಾಗಿದೆ.
ಜಿಲ್ಲಾಡಳಿತದಿಂದ ಗುರುತಿಸಿದ ಸರ್ವೇ ನಂಬರ್ ಜಮೀನಿನ ಗಡಿ ಗುರುತಿಸಿ ತಂತಿಬೇಲಿ ಹಾಕಿ ಒತ್ತುವರಿಯಾಗದಂತೆ ರಕ್ಷಣೆ ಮಾಡಿ, ಅದನ್ನು ಸ್ಮಶಾನಕ್ಕಾಗಿ ಬಳಸಲು ಹಸ್ತಾಂತರಿಸುವಂತೆ ಸಂಬಂಧಿಸಿದ ತಾಲೂಕಿನ ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ.