ಜಿಲ್ಲೆ

ತುಮಕೂರು ಜಿಲ್ಲೆಯಲ್ಲಿ 11ಕ್ಕೇರಿದ ಸಾವಿನ ಸಂಖ್ಯೆ; ಕೊರಟಗೆರೆ ವ್ಯಕ್ತಿ ಕರೊನಾಕ್ಕೆ ಬಲಿ

ತುಮಕೂರು: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 16 ಮಂದಿಗೆ ಸೋಂಕು ದೃಢಪಟ್ಟಿದೆ. ಗೋಡೆಕೆರೆ, ಕಾಡೇನಹಳ್ಳಿಗಳಲ್ಲಿನ ‘ಸೂಪರ್ ಸ್ಪ್ರೆಡ್ಡರ್’ಗಳಿಂದ ಇಡೀ ಜಿಲ್ಲೆಯೇ ಬೆಚ್ಚಿಬಿದ್ದಿದೆ. ಮಹಾಮಾರಿಗೆ ಮತ್ತೊಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 11ಕ್ಕೇರಿದೆ.

ಹೊಸದಾಗಿ ಬುಧವಾರ 27 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 319ಕ್ಕೇರಿದೆ.  ಕರೊನಾ ಭೀತಿ ನಡುವೆ ಹೆರಿಗೆಗೆ ಮುನ್ನ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದ ತಿಪಟೂರು ತಾಲೂಕು ಚಟ್ಟೇನಹಳ್ಳಿನ 20 ವರ್ಷದ ಗರ್ಭಿಣಿಗೆ ಸೋಂಕು ತಗುಲಿದ್ದು, ಆಕೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಮಗು, ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರಟಗೆರೆ ವ್ಯಕ್ತಿ ಬಲಿ: ಕೊರಟಗೆರೆ ಹಾರ್ಡ್‌ವೇರ್ ಅಂಗಡಿ ಮಾಲೀಕ 53 ವರ್ಷದ ವ್ಯಕ್ತಿ ಕರೊನಾಕ್ಕೆ ಬಲಿಯಾಗಿದ್ದಾರೆ. ಕಳೆದ ವಾರ ಜ್ವರ, ಕೆಮ್ಮು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತ್ತು. ಈ ಸಂದರ್ಭದಲ್ಲಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಮೃತಪಟ್ಟಿದ್ದಾರೆ. ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿದೆ. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಸೋಂಕಿತನ ಐವರು ಸಂಪರ್ಕಿತರನ್ನು ಪತ್ತೆಹಚ್ಚಿದ್ದು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 16 ಪ್ರಕರಣ ಪತ್ತೆಯಾಗಿದ್ದು, ಗೋಡೆಕೆರೆ 8, ಕಾಡೇನಹಳ್ಳಿಯಲ್ಲಿ 6 ಮಂದಿಗೆ ದೃಢಪಟ್ಟಿದೆ. ಮಧುಗಿರಿ-5, ತಿಪಟೂರು-2, ತುಮಕೂರು-2, ಕೊರಟಗೆರೆ ತಾಲೂಕಿನಲ್ಲಿ ಒಬ್ಬರಿಗೆ ಸೋಂಕಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಬುಲ್ಲೇನಹಳ್ಳಿಯ 45 ವರ್ಷದ ಮಹಿಳೆ ತಿಪಟೂರು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದು, ಅವರಿಗೂ ಸೋಂಕು ತಗುಲಿದೆ. ಅದೇ ರೀತಿ ಗೌರಿಬಿದನೂರಿನಲ್ಲಿ ಪರೀಕ್ಷೆಗೊಳಪಟ್ಟಿದ್ದ ಮಧುಗಿರಿ ತಾಲೂಕಿನ ತಿಂಗಳೂರಿನ 40 ವರ್ಷದ ಮಹಿಳೆಗೂ ಸೋಂಕು ತಗುಲಿದೆ.

ತಿಪಟೂರು ಠಾಣೆ ಸೀಲ್‌ಡೌನ್: ತಿಪಟೂರು ನಗರ ಠಾಣೆಯ 56 ವರ್ಷದ ಮುಖ್ಯಪೇದೆಗೆ ಸೋಂಕು ತಗುಲಿದ್ದು ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಠಾಣೆ ಸಿಬ್ಬಂದಿ ಸಹಜವಾಗಿ ಆತಂಕಕ್ಕೊಳಗಾಗಿದ್ದಾರೆ.ತುಮಕೂರು ನಗರದ ದೇವರಾಯಪಟ್ಟಣದ 37 ವರ್ಷದ ವ್ಯಕ್ತಿ ಹಾಗೂ ಹೆಗ್ಗೆರೆಯ 62 ವರ್ಷದ ವೃದ್ಧ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದು ಅವರಿಗೂ ಸೋಂಕು ದೃಢಪಟ್ಟಿದೆ.

14 ಮಹಿಳೆಯರಲ್ಲಿ ಸೋಂಕು ! : ಜಿಲ್ಲೆಯಲ್ಲಿ ಒಂದೇ ದಿನ 27 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇವರಲ್ಲಿ 5 ಹಾಗೂ 15 ವರ್ಷದ ಇಬ್ಬರು ಹೆಣ್ಣುಮಕ್ಕಳು, ಗರ್ಭಿಣಿ ಸೇರಿ ಒಟ್ಟು 14 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಧುಗಿರಿ ತಾಲೂಕಿನಲ್ಲಿ ಮೂವರು ಮಹಿಳೆಯರು ಸೇರಿ ಐದು ಮಂದಿಗೆ ಸೋಂಕು ಕಂಡುಬಂದಿದೆ. ಕೊಡಿಗೇನಹಳ್ಳಿ ಹೋಬಳಿಯ ಮುತ್ತರಾಯಮ್ಮನಹಳ್ಳಿಯ 42 ವರ್ಷದ ಮಹಿಳೆ, ತಿರುಮಲದೇವರಹಳ್ಳಿಯ 39 ವರ್ಷದ ಮಹಿಳೆ, ತೆರಿಯೂರಿನ 56 ವರ್ಷದ ಮಹಿಳೆ, ಕಡಗತ್ತೂರಿನ 66 ವರ್ಷದ ವೃದ್ಧೆ ಹಾಗೂ ಮುದ್ದೇನಹಳ್ಳಿಯ 75 ವರ್ಷದ ವೃದ್ಧರಲ್ಲಿ ಸೋಂಕು ದೃಢಪಟ್ಟಿದೆ.

ಇಬ್ಬರು ಸಾವು: ಮಧುಗಿರಿ ಪುರಸಭೆ ವ್ಯಾಪ್ತಿಯ 19ನೇ ವಾರ್ಡ್ ಬಫರ್ ರೆನ್ ವ್ಯಾಪ್ತಿಯಲ್ಲಿ ಕ್ವಾರೆಂಟೈನ್‌ನಲ್ಲಿದ್ದ ವೃದ್ಧೆ ಮೃತಪಟ್ಟಿದರು. ಕೆ.ಆರ್.ಬಡಾವಣೆಯ ವ್ಯಕ್ತಿಯೊಬ್ಬರು ಬುಧವಾರ ಮೃತಪಟ್ಟಿದ್ದರು. ಇವರಿಬ್ಬರ ಅಂತ್ಯಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿ ನಿಯಮಾವಳಿಯಂತೆ ಪುರಸಭೆಯವರು ನೆರವೇರಿಸಿದರು. ಇತ್ತೀಗೆ ಮಧುಗಿರಿ ಪುರಸಭೆಯ 16ನೇ ವಾರ್ಡ್‌ನ ದಂಪತಿಗೆ ಕರೊನಾ ದೃಡಪಟ್ಟಿದ್ದು, ಇವರಿಬ್ಬರು ಒಂದು ವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕಾರಣ ಖಾಸಗಿ ಆಸ್ಪತ್ರೆ ಬೀಗ ಹಾಕಲಾಗಿದೆ.

ಮೂವರು ಗುಣಮುಖ: ಮಧುಗಿರಿ ತಾಲೂಕಿನ ಮೂವರು ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪುರಸಭೆ ವ್ಯಾಪ್ತಿಯ 19ನೇ ವಾರ್ಡ್‌ನ ಖಾಸಗಿ ಚಾಲಕ, ಅಚೇನಹಳ್ಳಿ ವ್ಯಕ್ತಿ ಹಾಗೂ ಪಟ್ಟಣದ ಕೆ.ಎಚ್.ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ ನಲ್ಲಿದ್ದ ಪೂನಾದಿಂದ ಆಗಮಿಸಿದ್ದ ಎಲ್ಐಸಿ ಉದ್ಯೋಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಚಿ.ನಾಹಳ್ಳಿಯಲ್ಲಿ ಸೂಪರ್ ಸ್ಪ್ರೆಡ್ಡರ್‌ಗಳಿಬ್ಬರ ಕಂಟಕ !: ಚಿಕ್ಕನಾಯಕನಹಳ್ಳಿ ತಾಲೂಕಿಗೆ ಸೂಪರ್ ಸ್ಪ್ರೆಡ್ಡರ್‌ಗಳಿಬ್ಬರ ಕಂಟಕ ಕಾಡುತ್ತಿದೆ. ನೆಲಮಂಗಲದಲ್ಲಿ ಫುಡ್ ಪಾರ್ಸಲ್ ಕೆಲಸ ಮಾಡುತ್ತಿದ್ದ ಗೋಡೆಕೆರೆ ಗೊಲ್ಲರಹಟ್ಟಿಯ ಯುವಕನಿಂದ ಇಡೀ ಗ್ರಾಮಕ್ಕೆ ಸೋಂಕು ತುಗಲಿದೆ. 22 ವರ್ಷದ ಯುವಕ, 45 ವರ್ಷದ ಮಹಿಳೆ, 50 ವರ್ಷದ ವ್ಯಕ್ತಿ, 70 ವರ್ಷದ ವೃದ್ಧೆ, 47 ವರ್ಷದ ಮಹಿಳೆ, 47 ವರ್ಷದ ವ್ಯಕ್ತಿ, 32 ವರ್ಷದ ಮಹಿಳೆ ಹಾಗೂ 18 ವರ್ಷದ ಯುವತಿಯಲ್ಲಿ ಸೋಂಕು ದೃಢವಾಗಿದೆ. ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಕಾಡೇನಹಳ್ಳಿಗೆ ಸೋಂಕು ಹರಡಿಸಿದ್ದಾನೆ. ಇಡೀ ಕುಟುಂಬಕ್ಕೆ ಸೋಂಕು ಹರಡಿಸಿದ್ದು, 19 ವರ್ಷದ ಇಬ್ಬರು ಯುವಕರು, 45 ವರ್ಷದ ವ್ಯಕ್ತಿ, 62 ವರ್ಷದ ವೃದ್ಧೆ, 60 ವರ್ಷದ ಮತ್ತೊಬ್ಬ ವೃದ್ಧೆ ಹಾಗೂ 20 ವರ್ಷದ ಯುವತಿಗೂ ಸೋಂಕು ದೃಢಪಟ್ಟಿದೆ. ಚಿಕ್ಕನಾಯಕನಹಳ್ಳಿ ಪಟ್ಟಣದ 15 ವರ್ಷದ ಬಾಲಕಿ ಹಾಗೂ ತಾಲೂಕಿನ ಹೆಸರಹಳ್ಳಿಯ 5 ವರ್ಷದ ಹೆಣ್ಣುಮಗುವಿಗೂ ಸೋಂಕು ಇರುವುದು ದೃಢಪಟ್ಟಿದೆ.