ಜಿಲ್ಲೆ

ಕೋವಿಡ್‌ಗೆ ಮತ್ತೊಂದು ಬಲಿ

Dakshina Kannada

ಮಂಗಳೂರು: ದ.ಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯುವಕರೊಬ್ಬರು ತೀವ್ರ ಅಸ್ವಸ್ಥತೆಯಿಂದ ಮೃತಪಟ್ಟಿದ್ದು, ಅವರಿಗೆ ಕರೊನಾ ದೃಢಪಟ್ಟಿದೆ. ಈ ಹಿಂದೆ ಕರೊನಾ ಸೋಂಕಿಗೆ ಬಲಿಯಾದವರೆಲ್ಲ 50 ವರ್ಷಕ್ಕಿಂತ ಮೇಲ್ಪಟ್ಟವರೇ ಆಗಿದ್ದರು.

ಮುಂಬೈನಿಂದ ಮೇ 28ರಂದು ಆಗಮಿಸಿ ಸಾಂಸ್ಥಿಕ ನಿಗಾವಣೆಯಲ್ಲಿದ್ದ 24ರ ಹರೆಯದ ಯುವಕ ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡ ಹೊಂದಿದ್ದರು. ಅವರನ್ನು 7 ದಿನದ ಸಾಂಸ್ಥಿಕ ನಿಗಾವಣೆ ಬಳಿಕ ಎಡದವಿನಲ್ಲಿರುವ ಅವರ ಮನೆಗೆ ಗೃಹ ನಿಗಾವಣೆಗಾಗಿ ಕಳುಹಿಸಲಾಗಿತ್ತು. ನಿಗಾವಣೆ ಅವಧಿ ಮುಗಿದ ಬಳಿಕ ಜೂ.11ರಂದು ಅವರು ಮಧ್ಯರಾತ್ರಿ ರಕ್ತವಾಂತಿ ಮಾಡಿದ್ದು ಖಾಸಗಿ ಆಸ್ಪತ್ರೆಗೆ ತಂದ ಕೆಲ ನಿಮಿಷದಲ್ಲಿ ಮೃತರಾದರು. ಅವರ ಗಂಟಲ ದ್ರವ ಮಾದರಿ ಪರೀಕ್ಷೆಯ ವರದಿ ಭಾನುವಾರ ಬಂದಿದ್ದು ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಮುಂಬೈಯಿಂದ ಬಂದಿದ್ದರು: ಮುಂಬೈನಿಂದ ವಿಮಾನದಲ್ಲಿ 27ಕ್ಕೆ ಬೆಂಗಳೂರಿಗೆ ಬಂದು, ಅಲ್ಲಿಂದ ಮಂಗಳೂರಿಗೆ ವಿಮಾನದಲ್ಲೇ ಆಗಮಿಸಿದ್ದ ಯುವಕ ಬಜ್ಪೆಯಲ್ಲಿ ಉಳಿದಿದ್ದರು. 28ರಂದು ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದು ಅಲ್ಲಿಂದ ಆತನನ್ನು ಸರ್ಕಾರಿ ನಿಗಾವಣಾ ಕೇಂದ್ರಕ್ಕೆ ಸೇರಿಸಲಾಗಿತ್ತು. ನಾಲ್ಕು ದಿನ ಅಲ್ಲೇ ಇದ್ದು ಆ ಬಳಿಕ, ಹೈರಿಸ್ಕ್ ಗ್ರೂಪ್ ಎನ್ನುವ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಲು ಸೂಚಿಸಲಾಗಿತ್ತು. ತೀವ್ರ ಕಿಡ್ನಿ ಸಮಸ್ಯೆ ಹಾಗೂ ಅಧಿಕ ರಕ್ತದೊತ್ತಡವಿದ್ದ ಯುವಕ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಹಿತಿ ಇದೆ. 14 ದಿನಗಳ ಕ್ವಾರಂಟೈನ್ ಮುಗಿದ ಬಳಿಕ ಕಿಡ್ನಿ ಸಮಸ್ಯೆಯಿಂದ ಬಿಪಿ ಏರುಪೇರಾಗಿ ಸಾವು ಸಂಭವಿಸಿರುವ ಸಾಧ್ಯತೆ ಇದೆ, ಆದರೆ ಅವರಲ್ಲಿ ಕರೊನಾ ಸೋಂಕು ಕೂಡ ದೃಢಪಟ್ಟಿದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಕಾರಣದ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ(ಮೂಡುಬಿದಿರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸೇರಿದಂತೆ). ಉಳಿದಂತೆ ಜಿಲ್ಲೆಯಲ್ಲಿ ನಾಲ್ಕು ಪಾಸಿಟಿವ್ ಪ್ರಕರಣ ದಾಖಲಾಗಿವೆ. ಸೌದಿ ಅರೇಬಿಯಾದಿಂದ ಜೂನ್ 10ರಂದು ಆಗಮಿಸಿದ್ದ ಮೂವರು ಹಾಗೂ ಈ ಮೊದಲು ಮುಂಬೈನಿಂದ ಹಿಂದಿರುಗಿ ಕರೊನಾ ಪಾಸಿಟಿವ್ ಆಗಿದ್ದ ರೋಗಿಯ ಸಂಪರ್ಕ ಹೊಂದಿದ್ದ 12ರ ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಮನೆ ಸುತ್ತ ಸೀಲ್‌ಡೌನ್, ಟ್ರಾವೆಲ್ ಹಿಸ್ಟರಿ ಹುಡುಕಾಟ

ಕುಪ್ಪೆಪದವು(ಗುರುಪುರ): ಆಚಾರಿಜೋರ ಎರ್ಮಾಳುವಿನ ನಿವಾಸಿ ಯುವಕ ಶನಿವಾರ ರಾತ್ರಿ ಕರೊನಾದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಯುವಕನ ಮನೆಯ ಸುತ್ತ 100 ಮೀಟರ್ ಅಂತರದಲ್ಲಿ ಸೀಲ್‌ಡೌನ್ ಮಾಡಿದೆ. ಮೃತನ ಟ್ರಾವೆಲ್ ಹಿಸ್ಟರಿ ಹುಡುಕಾಟ ಆರಂಭಿಸಲಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಈತ ಮೇ 27ರಂದು ಮುಂಬೈಯಿಂದ ಬಂದು, ಒಂದು ದಿನ ಮಂಗಳೂರಿನ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ನಂತರ ಕುಪ್ಪೆಪದವಿನಲ್ಲಿರುವ ಕ್ವಾರಂಟೈನ್‌ಗೆ ಸ್ಥಳಾಂತರಗೊಳಿಸಲಾಗಿತ್ತು. ಇಲ್ಲಿ ಎರಡೇ ದಿನದಲ್ಲಿ ಕಿಡ್ನಿ ನೋವು ವಿಪರೀತಗೊಂಡು ಮದ್ದು ಮಾಡಲು ಮನೆಗೆ ತೆರಳಿದ್ದರು. ಕೆಲವು ದಿನಗಳಿಂದ ಈ ಯುವಕ ಕುಪ್ಪೆಪದವು ಹಾಗೂ ಇತರ ಕಡೆ ರಿಕ್ಷಾಗಳಲ್ಲಿ ತಿರುಗಾಡುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಮನೆ ಮದ್ದು ಮಾಡಿದ್ದ ಈತ 12ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಸ್ಪಂದಿಸಲಿಲ್ಲ.

ಪಿಜಕಳ 5 ಮನೆ ಸೀಲ್‌ಡೌನ್

ಕಡಬ: ಕಡಬದ ಶಿಕ್ಷಕರೋರ್ವರಿಗೆ ಕರೊನಾ ಪಾಸಿಟಿವ್ ವರದಿ ಬಳಿಕ ಶಿಕ್ಷಕ ಸಂಪರ್ಕಿಸಿದ ಕಡಬ ಸಿಎ ಬ್ಯಾಂಕ್ ಸೀಲ್‌ಡೌನ್ ಮಾಡಿ ಸಿಬ್ಬಂದಿಯನ್ನು ಸೇರಿದಂತೆ ಬ್ಯಾಂಕಿಗೆ ಭೇಟಿ ನೀಡಿದವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸಿಬ್ಬಂದಿಯೋರ್ವರಿಗೆ ಪಾಸಿಟಿವ್ ವರದಿ ಬಂದಿದೆ. ಈಗ ಆತ ಕ್ವಾರಂಟೈನ್ ಅವಧಿಯಲ್ಲಿ ಕಡಬದಾದ್ಯಂತ ಓಡಾಡಿದ್ದ ಎನ್ನಲಾಗಿದೆ. ಈತನನ್ನು ಮತ್ತು ಇನ್ನೋರ್ವ ಸಿಬ್ಬಂದಿಯೊಂದಿಗೆ ಸಿಎ ಬ್ಯಾಂಕ್ ಕಟ್ಟಡದಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಪ್ರತಿ ದಿನ ತಪಾಸಣಾ ತಂಡ ಇಬ್ಬರನ್ನು ಭೇಟಿ ಬಳಿಕ ಪಾಸಿಟಿವ್ ಬಂದಿರುವ ಸಿಬ್ಬಂದಿ ತನ್ನ ಮನೆಯತ್ತ, ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದ ಎನ್ನಲಾಗಿದೆ. ಆತ ಕಡಬ ಗ್ರಾಮದ ಪಿಜಕಳ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ತೆರಳಿದ ಹಿನ್ನೆಲೆಯಲ್ಲಿ ಈ ಪ್ರದೇಶದ 5 ಮನೆಗಳನ್ನು ಸಾಯಂಕಾಲ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.

ಕಾಸರಗೋಡಿನ 6 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯ ಆರು ಮಂದಿ ಒಳಗೊಂಡಂತೆ ಕೇರಳದಲ್ಲಿ ಭಾನುವಾರ 54 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 23 ಮಂದಿ ವಿದೇಶದಿಂದ, 25ಮಂದಿ ಇತರ ರಾಜ್ಯಗಳಿಂದ ಬಂದವರಲ್ಲಿ ರೋಗ ಪತ್ತೆಯಾಗಿದೆ. ಮೂವರಿಗೆ ಸಂಪರ್ಕದಿಂದ ಹಾಗೂ ಇತರ ಮೂವರು ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ರೋಗ ಕಾಣಿಸಿಕೊಂಡಿದೆ.