ಗೋಕಾಕ ತಾಪಂ ಸಭಾಭವನದಲ್ಲಿ ಅಧಿಕಾರಿ ಮತ್ತು ಮುಖಂಡರ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು. ಆರೋಗ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಡಿವೈಎಸ್‌ಪಿ ಡಿ.ಟಿ. ಪ್ರಭು, ಬಸವರಾಜ ಹೆಗ್ಗನಾಯಿಕ, ಜಿ.ಬಿ. ಬಳಗಾರ ಇತರರು ಇದ್ದರು. 
ಜಿಲ್ಲೆ

ಕರೊನಾ ನಿಯಂತ್ರಣಕ್ಕೆ ಸಹಕರಿಸಿ

ಗೋಕಾಕ : ಎಲ್ಲರೂ ಒಗ್ಗಟ್ಟಾಗಿ ಕರೋನಾ ವೈರಸ್ ತಡೆಗಟ್ಟಲು ಹೋರಾಡಬೇಕಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಮಹಾಮಾರಿ ಕರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಕೆಲ ಮಹತ್ವದ ಆದೇಶಗಳನ್ನು ಹೊರಡಿಸಿದ್ದು, ಅವುಗಳನ್ನು ಎಲ್ಲರೂ ಪಾಲಿಸಬೇಕು. ದಿನಬಳಕೆ ವಸ್ತುಗಳು ಹಾಗೂ ದಿನಸಿ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಗೋಕಾಕ ನಗರ ಹಾಗೂ ತಾಲೂಕಿನಿಂದ ಯಾರಾದರೂ ಹೋಗಿ ಬಂದಿದ್ದರೆ ಅಂತಹವರು ಸ್ವಯಂ ಪ್ರೇರಣೆಯಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ತಾಲೂಕಿನ ವಿವಿಧ ಗ್ರಾಮಗಳಿಂದ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಕೆಲಸಕ್ಕೆ ಹೋಗಿ ಮರಳಿದವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕರು ಗುಂಪು ಗುಂಪಾಗಿ ಓಡಾಡದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರೇಷನ್ ಹಾಗೂ ತರಕಾರಿ, ದಿನಸಿ ಸಾಮಗ್ರಿಗಳ ಬಗ್ಗೆ ಯಾವುದೇ ತಕರಾರು ಇದ್ದರೆ ನಮ್ಮ ಗಮನಕ್ಕೆ ತಂದರೆ ಅದನ್ನು ತಕ್ಷಣ ಸರಿಪಡಿಸಲಾಗುವುದು. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಧಾರ್ಮಿಕ ಸಭೆಗೆ ತೆರಳಿದಾಗ ಲಾಕ್‌ಡೌನ್ ಜಾರಿಯಾಗಿತ್ತು. ಹಾಗಾಗಿ ಕೆಲವರು ದೆಹಲಿಯಲ್ಲಿಯೇ ಉಳಿದುಕೊಂಡಿದ್ದರು. ಸರ್ಕಾರದಿಂದ ಅಂತಹವರ ಪಟ್ಟಿ ಬಂದಿದೆ. ಆ ಪಟ್ಟಿ ಹೊರತುಪಡಿಸಿ ಇನ್ನೂ ಯಾರಾದರೂ ಉಳಿದಿದ್ದರೆ ತಾಲೂಕು ಆಡಳಿತದ ಗಮನಕ್ಕೆ ತರಬೇಕು. ಮನೆಯವರ ಆರೋಗ್ಯ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು. ಈಗಾಗಲೇ ಹೊರ ದೇಶ ಮತ್ತು ರಾಜ್ಯಗಳಿಂದ ಬಂದವರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಆದಾಗ್ಯೂ ಹೆಚ್ಚಿನ ಸುರಕ್ಷತೆ ಹಿತದೃಷ್ಟಿಯಿಂದ ಕೆಲವರನ್ನು ಕ್ವಾರಂಟೈನ್‌ದಲ್ಲಿ ಇರಿಸಲಾಗಿದ್ದು, ಅವರೂ ಸಹ ಆರೋಗ್ಯವಾಗಿದ್ದಾರೆ. ಕರೊನಾ ವೈರಸ್ ತಡೆಗಟ್ಟಲು ವೈದ್ಯರು, ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕು ಎಂದರು. ಆರೋಗ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಕರೊನಾ ವೈರಸ್ ಲಕ್ಷಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಡಿವೈಎಸ್‌ಪಿ ಡಿ.ಟಿ. ಪ್ರಭು ಪೊಲೀಸ್ ಬಂದೋಬಸ್ತ್ ಕುರಿತು ಮಾಹಿತಿ ನೀಡಿದರು.

ಬಸವರಾಜ ಹೆಗ್ಗನಾಯಿಕ, ಜಿ.ಬಿ. ಬಳಗಾರ, ಅಜಿತ ಮನ್ನಿಕೇರಿ, ಗೋಪಾಲ ರಾಠೋಡ, ವೆಂಕಟೇಶ ಮುರನಾಳ, ಶಿವಾನಂದ ಹಿರೇಮಠ, ಎಸ್.ಎ. ಕೋತವಾಲ್ ಇತರರು ಇದ್ದರು.

ಸಾಮೂಹಿಕ ಪ್ರಾರ್ಥನೆ ಮಾಡಬೇಡಿ

ಮುಸ್ಲಿಂ ಸಮುದಾಯದವರು ಪರಿಸ್ಥಿತಿ ಅರ್ಥ ಮಾಡಿಕೊಂಡು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು. ಮಸೀದಿಗಳಲ್ಲಿರುವ ಮೈಕ್‌ಗಳ ಮೂಲಕ ಕರೊನಾ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಿ. ಮಹಾಮಾರಿ ಕರೊನಾ ಸೋಂಕಿನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಪರಿಹಾರ. ಏಪ್ರಿಲ್ 14ರ ಬಳಿಕವೂ ನಾವು ಕೆಲ ಕಟ್ಟುನಿಟ್ಟಾದ ಆಚರಣೆಗಳನ್ನು ಅಳವಡಿಸಿಕೊಳಬೇಕಾಗುತ್ತದೆ. ಭಾರತದಂತಹ ದೊಡ್ಡ ದೇಶದಲ್ಲಿ ಕರೊನಾ ಸೋಂಕು ಹರಡದಂತೆ ತಡೆಯುವುದೇ ಒಂದು ಸವಾಲಾಗಿದೆ. ಹಾಗಾಗಿ ಎಲ್ಲರೂ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಸಚಿವ ರಮೇಶ ಜಾರಕಿಹೊಳಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.