ಜಿಲ್ಲೆ

ಹಸಿರು ವಲಯದತ್ತ ಉಡುಪಿ ಜಿಲ್ಲೆ, ಸೋಮವಾರದವರೆಗೆ ಹೊಸ ಪ್ರಕರಣ ಪತ್ತೆಯಾಗದಿದ್ದರೆ ಸುರಕ್ಷಿತ

Udupi

ಉಡುಪಿ: ಜಿಲ್ಲೆಯಲ್ಲಿ ಕೊನೆಯದಾಗಿ ಕರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣ ಪತ್ತೆಯಾಗಿ 26 ದಿನಗಳು ಕಳೆದಿವೆ. ಸೋಮವಾರಕ್ಕೆ 28 ದಿನ ಪೂರ್ಣಗೊಳ್ಳಲಿದ್ದು, ಹಸಿರು ವಲಯಕ್ಕೆ ಸೇರ್ಪಡೆ ನಿರೀಕ್ಷೆ ಇದೆ.

ಈವರೆಗೆ ಮೂರು ಕರೊನಾ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಮೂವರೂ ಗುಣಮುಖಗೊಂಡು ಬಿಡುಗಡೆಯಾಗಿದ್ದಾರೆ. ಮಾರ್ಚ್ 26ರಂದು ಮೊದಲ ಪ್ರಕರಣ, 29ರಂದು ಎರಡು ಪ್ರಕರಣ ದಾಖಲಾಗಿತ್ತು. ಬಳಿಕ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹೊಸ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಸ್ತುತ ಜಿಲ್ಲೆ ಕಿತ್ತಳೆ ವಲಯದಲ್ಲಿ ಸ್ಥಾನ ಪಡೆದಿದೆ. ಏಪ್ರಿಲ್ 27ರವರೆಗೆ ಪಾಸಿಟಿವ್ ಪ್ರಕರಣ ಪತ್ತೆಯಾಗದಿದ್ದರೆ 28 ದಿನ ಪೂರೈಸಿದಂತಾಗುತ್ತದೆ. ಬಳಿಕ ಜಿಲ್ಲೆ ಹಸಿರು ವಲಯಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಹಸಿರು ವಲಯ ವ್ಯತ್ಯಾಸ ಏನು?: ಹಸಿರು ವಲಯ ಎಂದರೆ ಜನರ ಆತಂಕ ದೂರವಾಗಿರುತ್ತದೆ. ಆದರೆ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲೇ ಬೇಕು. 28 ದಿನಗಳು ಆದ ಕೂಡಲೆ ಕೇಂದ್ರ ಸರ್ಕಾರ ಹಸಿರು ವಲಯ ಎಂದು ಘೋಷಣೆ ಮಾಡುವುದಿಲ್ಲ. ಈಗಾಗಲೆ ರಾಜ್ಯದ ಬೇರೆ ಜಿಲ್ಲೆಗಳು 28 ದಿನ ಪೂರೈಸಿವೆ, ಆ ಜಿಲ್ಲೆಗಳನ್ನು ಇನ್ನೂ ಹಸಿರು ವಲಯ ಎಂದು ಘೋಷಣೆ ಮಾಡಿಲ್ಲ.

ಹಸಿರು, ಕಿತ್ತಳೆ ವಲಯ ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಜಿಲ್ಲಾಡಳಿತ ನಿರ್ಧರಿಸುವುದಿಲ್ಲ. ಹಸಿರು ವಲಯ ಸಡಿಲಿಕೆ ಎಂದರೆ ಪ್ರಮುಖವಾಗಿ ಗ್ರಾಮೀಣ ಕೈಗಾರಿಕೆ, ಆಹಾರ ಸಂಸ್ಕರಣೆ ಘಟಕ, ಕೃಷಿ ಚಟುವಟಿಕೆಗೆ ಉತ್ತೇಜನ ಒಳಗೊಂಡಿದೆ. ಅದು ಈಗಾಗಲೇ ಪ್ರಾರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಏನೇನು ಕ್ರಮ ಕೈಗೊಳ್ಳಲಾಗಿತ್ತು?: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಮುಂದುವರಿಯದೆ ಇರುವಲ್ಲಿ ಜಿಲ್ಲಾಡಳಿತದ ಶ್ರಮ, ಜನತೆ, ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರವಿದೆ.

ಜಿಲ್ಲೆಗೆ ಹೊಂದಿಕೊಂಡಿರುವ 4 ಜಿಲ್ಲೆಯ ಗಡಿಗಳನ್ನು ಆರಂಭದಲ್ಲೇ ಸಂಪೂರ್ಣ ಬಂದ್ ಮಾಡಲಾಗಿತ್ತು. ನಂತರ ದಿನಗಳಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಪ್ರಕರಣ ಹೆಚ್ಚುತ್ತಿರುವುದರಿಂದ ಗಡಿಗಳನ್ನು ಸೀಲ್‌ಡೌನ್ ಮಾಡಲಾಯಿತು. ತುರ್ತು ವೈದ್ಯಕೀಯ ಅವಶ್ಯಕ್ಕೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಪ್ರಥಮ ಮತ್ತು ದ್ವೀತಿಯ ಹಂತದ ಮನೆಮಂದಿ, ಸಾರ್ವಜನಿಕರನ್ನು ಇನ್ಸಿಟಿಟ್ಯೂಶನಲ್ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸರ್ಕಾರ ಆದೇಶವಾಗುವ ಮೊದಲೆ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಸೋಂಕಿತರ ಪ್ರದೇಶವನ್ನು 3 ಕಿ.ಮೀ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್ ರೆನ್, 5 ಕಿ.ಮೀ ವ್ಯಾಪ್ತಿಯಲಿಲ್ಲ ಬಫರ್ ರೆನ್ ಮಾಡಲಾಗಿತ್ತು. ವಿವಿಧ ಇಲಾಖೆ 15 ಸಮಿತಿಗಳನ್ನು ರಚಿಸಿ ಸಮನ್ವಯತೆಯಿಂದ ಕೆಲಸ ಮಾಡಲಾಗುತ್ತಿದೆ.

ಕಟ್ಟುನಿಟ್ಟಿನಿಂದ ಲಾಕ್‌ಡೌನ್ ಪಾಲನೆ ಜತೆಗೆ ರಾಜ್ಯ, ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತಿದೆ. ಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಉಡುಪಿ ಜಿಲ್ಲೆಯ ಜನರು ಲಾಕ್‌ಡೌನ್‌ಗೆ ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ. ಮುಂದೆಯೂ ಸಹಕಾರ ಇರಲಿ.

- ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

ಉಡುಪಿ 41 ವರದಿ ನೆಗೆಟಿವ್: ಉಡುಪಿ ಜಿಲ್ಲಾಡಳಿತ ಶುಕ್ರವಾರ ಸ್ವೀಕರಿಸಿದ ಎಲ್ಲ 41 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಶ್ವಾಸಕೋಶ ಉಸಿರಾಟದ ಸಮಸ್ಯೆ 9, ಕೊವಿಡ್ ಸಸ್ಪೆಕ್ಟ್ 1, ಇಲ್‌ನೆಸ್‌ಗೆ ಸಂಬಂಧಿಸಿ 7 ಮಂದಿ ಒಟ್ಟು 17 ಮಂದಿಯ ಮಾದರಿಯನ್ನು ಶುಕ್ರವಾರ ಸಂಗ್ರಹಿಸಲಾಗಿದ್ದು, 10 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 74 ಮಂದಿಯ ವರದಿ ಬರಲು ಬಾಕಿ ಇದೆ. ಶುಕ್ರವಾರಕ್ಕೆ 37 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 10 ಮಂದಿ, ಆಸ್ಪತ್ರೆ ಕ್ವಾರಂಟೈನ್‌ನಿಂದ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸೋಂಕಿತ ವೃದ್ಧೆ ಆರೋಗ್ಯ ಯಥಾಸ್ಥಿತಿ

ಮಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳ ಕಸ್ಬಾದ ಮಹಿಳೆಯ ಸಂಪರ್ಕದಿಂದ ಕರೊನಾ ಪಾಸಿಟಿವ್ ಆಗಿದ್ದ 67 ವರ್ಷದ ವೃದ್ಧೆ (ಪಿ-409)ಯ ಆರೋಗ್ಯ ಯಥಾ ಸ್ಥಿತಿಯಲ್ಲಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ, ಚಿಕಿತ್ಸೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಶುಕ್ರವಾರ 117 ಗಂಟಲ ದ್ರವ ಮಾದರಿಯ ವರದಿ ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್. ಮತ್ತೆ 204 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದ್ದು, ಒಟ್ಟು 463 ಮಾದರಿಗಳ ವರದಿ ಬರಬೇಕಾಗಿದೆ. ತೀವ್ರ ಉಸಿರಾಟದ ಸಮಸ್ಯೆ ಇರುವ 16 ಪ್ರಕರಣಗಳು ವರದಿಯಾಗಿದ್ದು, 10 ಪ್ರಕರಣಗಳನ್ನು ವೆನ್ಲಾಕ್‌ಗೆ ಶಿಫಾರಸು ಮಾಡಲಾಗಿದೆ. 41 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದಾರೆ. ಶುಕ್ರವಾರ 31 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. 50 ಮಂದಿ ಎನ್‌ಐಟಿಕೆ ಮತ್ತು 10 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.

ಕಾಸರಗೋಡಿನ ಮತ್ತೆ ಮೂವರಿಗೆ ಸೋಂಕು

ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಮತ್ತೆ ಮೂವರಲ್ಲಿ ಕೊವಿಡ್ ವೈರಸ್ ಖಚಿತಗೊಂಡಿದೆ. ಈ ಮೂರೂ ಮಂದಿಯೂ ಕಾಸರಗೋಡಿನವರು. ಈ ಮಧ್ಯೆ ಕಾಸರಗೋಡಿನ ಐವರು ಒಳಗೊಂಡಂತೆ ರಾಜ್ಯದಲ್ಲಿ 15 ಮಂದಿ ರೋಗಮುಕ್ತರಾಗಿದ್ದಾರೆ. ಕೊವಿಡ್ ಬಾಧಿಸಿ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ತಿಂಗಳ ಮಗು ಶುಕ್ರವಾರ ಮೃತಪಟ್ಟಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 450 ಮಂದಿ ವೈರಸ್ ಬಾಧಿತರಾಗಿದ್ದು, ಪ್ರಸಕ್ತ 116 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೇರಳದಲ್ಲಿ 21725 ಮಂದಿ ನಿಗಾದಲ್ಲಿದ್ದಾರೆ. ಶುಕ್ರವಾರ ಮತ್ತೆ 144 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ ಕೊವಿಡ್ ಬಾಧಿಸಿದವರಲ್ಲಿ 157 ಮಂದಿ ಗುಣಮುಖರಾಗಿದ್ದು, ಪ್ರಸಕ್ತ 18 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಕಾಸರಗೋಡಿನಲ್ಲಿ ಲಾಕ್‌ಡೌನ್ ಸಡಿಲ

ಕಾಸರಗೋಡು: ಜಿಲ್ಲೆಯಲ್ಲಿ ಹಾಟ್‌ಸ್ಪಾಟ್‌ಗಳು ಅಲ್ಲದಿರುವ ಪ್ರದೇಶಗಳಲ್ಲಿ ವಿವಿಧ ಚಟುವಟಿಕೆಗಳಿಗೆ ನಿಬಂಧನೆಗಳೊಂದಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಹಾಟ್‌ಸ್ಪಾಟ್ ಪ್ರದೇಶಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಕಲ್ಲಿನ ಕ್ವಾರಿ, ಕ್ರಷರ್ ಯುನಿಟ್‌ಗಳು ಬೆಳಗ್ಗೆ 11ರಿಂದ ಸಾಯಂಕಾಲ 5ರ ವರೆಗೆ ಚಟುವಟಿಕೆ ನಡೆಸಬಹುದು. ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಲು, ಅಗತ್ಯ ಸಾಮಗ್ರಿ ಖರೀದಿಸಲು ಮಾತ್ರ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ದ್ವಿಚಕ್ರ ವಾಹನದಲ್ಲಿ ಒಬ್ಬರು, ನಾಲ್ಕು ಚಕ್ರ ವಾಹನದಲ್ಲಿ ಮುಂಭಾಗದಲ್ಲಿ ಚಾಲಕ, ಹಿಂಬದಿ ಸೀಟಿನಲ್ಲಿ ಇಬ್ಬರು ಮಾತ್ರ ಸಂಚಾರ ನಡೆಸಬಹುದು. ನಾಲ್ಕು ಚಕ್ರ ವಾಹನದಲ್ಲಿ ಹವಾನಿಯಂತ್ರಿತ ವ್ಯವಸ್ಥೆಗೆ ಅವಕಾಶವಿಲ್ಲ.

ನೆಯ ನಂಬರ್‌ಗಳು ಒಂದೇ ಆಗಿರಬಹುದಾದ (ಉದಾಹರಣೆಗೆ ಕೆ.ಎಲ್.14ಎ 1055) ವಾಹನಗಳಿಗೆ ಸೋಮವಾರ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಮೊಬೈಲ್ ಅಂಗಡಿ, ಕಂಪ್ಯೂಟರ್ ಮಾರಾಟ, ಸೇವಾ ಕೇಂದ್ರ, ಬೀಡಿ ಕಂಪನಿಗಳು, ಫ್ರಿಡ್ಜ್-ವಾಷಿಂಗ್ ಮಷಿನ್, ಎ.ಸಿ., ಫ್ಯಾನ್ ಮಾರಾಟ ಸಂಸ್ಥೆಗಳು ಸೋಮವಾರ ಚಟುವಟಿಕೆ ನಡೆಸಬಹುದು. ಕೊನೆಯ ನಂಬರ್‌ಗಳು ಬೇರೆ ಬೇರೆ ಆಗಿರುವ (ಉದಾಹರಣೆಗೆ ಕೆ.ಎಲ್.14ಎ 1056) ವಾಹನಗಳು ಮಂಗಳವಾರ ಸಂಚಾರ ನಡೆಸಬಹುದು. ಬೀಡಿ ಕಂಪನಿಗಳು, ಪುಸ್ತಕ ಮಾರಾಟ ಕೇಂದ್ರಗಳು ಇತ್ಯಾದಿ ಚಟುವಟಿಕೆ ನಡೆಸಬಹುದು.